Advertisement

ಅನುವಾದಿತ ಕುವೆಂಪು ಕೃತಿಗಳಿಗೆ ಬಿಡುಗಡೆ ಭಾಗ್ಯವಿಲ್ಲ

06:30 AM Jun 23, 2018 | |

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ದೇಶ,ವಿದೇಶಗಳಲ್ಲಿ ಸಾರಲು 11 ಪ್ರಮುಖ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸಿದ 45ಕ್ಕೂ ಹೆಚ್ಚು ಪುಸ್ತಕಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ “ಬಿಡುಗಡೆ’ ಭಾಗ್ಯ
ಪಡೆದಿಲ್ಲ.

Advertisement

ಪುಸ್ತಕ ಮಾರಾಟದ ಬಗ್ಗೆ ಸರಿಯಾದ ನೀತಿ ಇಲ್ಲದಿರುವುದು ಸೇರಿ ಅನೇಕ ಕಾರಣಗಳಿಂದಾಗಿ ಕುವೆಂಪು ಸಾಹಿತ್ಯದ ಅನುವಾದಿತ ಕೃತಿಗಳು ಓದುಗರ ಕೈಸೇರುವ ಬದಲು ಸುಮಾರು 4 ವರ್ಷಗಳಿಂದ ಪ್ರಾಧಿಕಾರದ ಗ್ರಂಥಾಲಯದಲ್ಲಿ ಉಳಿದಿವೆ.

ಇಂಗ್ಲೀಷ್‌ ಸೇರಿ ಬೇರೆ-ಬೇರೆ ಭಾಷೆಗಳ ಅನುವಾದ ಮಾಡುವ ಕೆಲಸವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮಾಡುತ್ತಿದೆ. ದೇಶದ ಹಲವು ಭಾಷೆಗಳಲ್ಲಿ ಕುವೆಂಪು ಅಭಿಮಾನಿಗಳು ಹಾಗೂ ಕಾವ್ಯಾಸಕ್ತರಿದ್ದು ಅವರದ್ದೇ ಭಾಷೆಯಲ್ಲಿ ಕುವೆಂಪು ಸಾಹಿತ್ಯ ಸಿಗಲಿ ಎಂಬ ಉದ್ದೇಶ ಇದರಲ್ಲಿದೆ. ಹೀಗಾಗಿ, ಅಸ್ಸಾಂ, ತಮಿಳು, ತೆಲಗು,
ಗುಜರಾತ್‌,ಬಂಗಾಳಿ ಸೇರಿ ಹಲವು ಭಾಷೆಗಳಲ್ಲಿ ತರ್ಜುಮೆ ಮಾಡಿ ಹೊರ ತರುತ್ತಿದ್ದು, ಒಂದು ಭಾಷೆಯಲ್ಲಿ ಕನಿಷ್ಠ 500 ಪ್ರತಿಗಳು ಮುದ್ರಿತವಾಗುತ್ತಿವೆ. ಸಾಹಿತ್ಯಾಸಕ್ತರ ಗ್ರಂಥಾಯ ಸೇರಬೇಕಾಗಿದ್ದ ರಸಋಷಿ ಕವಿಯ ಬೇರೆ-ಬೇರೆ ಭಾಷೆಗೆ ಅನುವಾದಗೊಂಡಿರುವ ಹಲವು ಕೃತಿಗಳು, ಆಯಾ ಭಾಷೆಯ ಓದುಗರಿಗೆ ತಲುಪದೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕುವೆಂಪು ಭಾಷಾ ಭಾರತಿ ಪುಸ್ತಕ ಪ್ರಾಧಿಕಾರದ ಗೋದಾಮಿನಲ್ಲಿ ಧೂಳು ತಿನ್ನುತ್ತಿವೆ.

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಪ್ರಾಧಿಕಾರದ ಹಿರಿಯ ಅಧಿಕಾರಿಗಳು, ಪ್ರಾಧಿಕಾರ ಬರೀ ಪುಸ್ತಕಗಳನ್ನು ಪ್ರಕಟಿಸುತ್ತದೆ. ಈ ಎಲ್ಲ ಪುಸ್ತಕಗಳನ್ನು ಮಾರಾಟ ಮಾಡಲು ನಮಗೆ ಅವಕಾಶವಿಲ್ಲದ ಕಾರಣ ಓದುಗರ ಕೈ ಸೇರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವು ಪ್ರಾಧಿಕಾರಗಳ ಕಥೆ: ಇದು ಕೇವಲ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಮಸ್ಯೆಯಷ್ಟೇ ಅಲ್ಲ. ಹಲವು ಪ್ರಾಧಿಕಾರಗಳು ಇದೇ ಪರಿಸ್ಥಿತಿ ಎದುರಿಸುತ್ತಿವೆ. ಈ ಸಂಬಂಧ ಸರ್ಕಾರ ಒಂದು ನೀತಿ ರೂಪಿಸಿ ಪುಸ್ತಕಗಳನ್ನು ಪ್ರಕಟಿಸಬೇಕು. ಪುಸ್ತಕಗಳನ್ನು ಮುದ್ರಣ  ಮಾಡಿ ಗೋದಾಮುಗಳಲ್ಲಿ ಇಡುವ ಕೆಲಸವನ್ನು ಮೊದಲು ನಿಲ್ಲಿಸಬೇಕೆಂಬ ಮಾತುಗಳು ಸಾಹಿತ್ಯ ವಲಯದಲ್ಲಿ ಕೇಳಿ ಬಂದಿವೆ.

Advertisement

ಪ್ರಾಧಿಕಾರ ಪ್ರಕಟಿಸಿರುವ ಕುವೆಂಪು ಅವರ ಹಲವು ಪುಸ್ತಕಗಳು ಗೋದಾಮಿನಲ್ಲಿ ಹಾಗೇ ಇವೆ. ಈ ಬಗ್ಗೆ ಯಾರನ್ನೂ
ಆರೋಪ ಮಾಡಲಾರೆ. ನ್ಯಾಷನಲ್‌ ಬುಕ್‌ ಟ್ರಸ್ಟ್‌, ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಗಳು ಇವುಗಳನ್ನು ತೆಗೆದುಕೊಂಡು ಹಂಚಿಕೆ ಮಾಡುವಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
– ಡಾ.ಮರುಳಸಿದ್ಧಪ್ಪ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ

ಪುಸ್ತಕಗಳ ಮುದ್ರಣ ವಿಷಯದಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅದು ಮಾಡುವ ಕೆಲಸಕ್ಕೆ ಫ‌ಲ ಸಿಗುತ್ತಿಲ್ಲ. ಸರ್ಕಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸುವ ಪುಸ್ತಕಗಳನ್ನು ಓದುಗರಿಗೆ ತಲುಪಿಸಬೇಕು.
– ಸಿದ್ದಲಿಂಗಯ್ಯ ,ಹಿರಿಯ ಕವಿ

ಯಾವ ಪ್ರಾಧಿಕಾರ ಬೇಕಿದ್ದರೂ ಪುಸ್ತಕಗಳನ್ನು ಪ್ರಕಟಿಸಲಿ. ಅವುಗಳನ್ನು ಓದುಗರ ಕೈ ಸೇರಿಸುವ ಕೆಲಸ ಮೊದಲು ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯೋಜನೆಗಳನ್ನು ರೂಪಿಸಬೇಕು.
– ಹಂಪ ನಾಗರಾಜಯ್ಯ, ಸಾಹಿತಿ ಹಾಗೂ ಸಂಶೋಧಕ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next