Advertisement

ನೈತಿಕವಲ್ಲದ ಸಮಾಜಕ್ಕೆ ಭವಿಷ್ಯವಿಲ್ಲ

07:21 AM Jul 08, 2019 | Lakshmi GovindaRaj |

ಮೈಸೂರು: ಸಮಾಜ ನೈತಿಕವಾಗಿ ಕಟ್ಟಲ್ಪಡದಿದ್ದರೆ, ಅದು ಎಷ್ಟೇ ಪ್ರಗತಿ ಸಾಧಿಸಿದರೂ ಭವಿಷ್ಯವಿರುವುದಿಲ್ಲ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಅಭಿಪ್ರಾಯಪಟ್ಟರು.

Advertisement

ಯುವ ಪ್ರಗತಿಪರ ಚಿಂತಕರ ಸಂಘ ಮತ್ತು ಬದುಕು ಟ್ರಸ್ಟ್‌ ಸಹಯೋಗದಲ್ಲಿ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಗತಿಪರ ಚಿಂತಕ ಈ.ಧನಂಜಯ ಎಲಿಯೂರು ಅವರ “ಸಮಾಜಮುಖೀ’ ಮತ್ತು “ಮಕ್ಕಳೊಂದಿಗೆ ನಾವು’ ಕೃತಿ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಪತ್ತು ತಾರತಮ್ಯ: ಇಂದು ವಿಶ್ವವಿದ್ಯಾನಿಲಯ, ಶಿಕ್ಷಣ ಸಂಸ್ಥೆಗಳಲ್ಲಿ ಮಾನವಿಕ ಮತ್ತು ಸಾಮಾಜಿಕ ಶಿಕ್ಷಣವನ್ನು ಹೆಚ್ಚು ನಿರ್ಲಕ್ಷಿಸಲಾಗುತ್ತಿದೆ. ಇದರಿಂದ ಸಾಮಾಜಿಕ ಮೌಲ್ಯ, ಆದರ್ಶಗಳನ್ನು ಮಕ್ಕಳಿಗೆ ಬಿತ್ತುವುದು ಕಷ್ಟವಾಗಿದೆ. ನೈತಿಕವಾಗಿಲ್ಲದ ಸಮಾಜ ಎಷ್ಟೇ ಮುಂದುವರಿದರೂ ಅದಕ್ಕೆ ಭವಿಷ್ಯವಿಲ್ಲ. ಬದಲಿಗೆ ತಾರತಮ್ಯ ಹೆಚ್ಚಾಗುತ್ತಿದೆ. ಸಂಪತ್ತು ಕೆಲವೇ ಮಂದಿಯಲ್ಲಿ ಕೇಂದ್ರಿಕೃತವಾಗಿದೆ ಎಂದು ತಿಳಿಸಿದರು.

ಇಂದು ಜಾಗತೀಕರಣ ಮತ್ತು ಖಾಸಗೀಕರಣ ಎಲ್ಲವನ್ನೂ ಆವರಿಸಿದ್ದು, ದೇಶದ ಮೂಲ ಅಂಶಗಳು, ಸಂಸ್ಕೃರಿ, ಪರಂಪರೆ, ಮಕ್ಕಳ ಶಿಕ್ಷಣ ಹಕ್ಕು ಏನಾಗಿದೆ ಎಂದು ಚಿಂತೆನೆ ಮಾಡುವ ಕಾರ್ಯಕ್ರಮಗಳು ಕಡಿಮೆಯಾಗಿವೆ. ದೇಶದಲ್ಲಿ ಬಹಳ ದೊಡ್ಡ ಮಟ್ಟದ ಯುವಶಕ್ತಿ ಇದು, ಮಾನವ ಸಂಪನ್ಮೂಲವಾಗಿ ಬಳಕೆಯಾಗಬೇಕು ಎಂದರು.

ಭೀಕರ ದಿನಗಳು: ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಕೃತಿ ಬಿಡುಗಡೆ ಮಾಡಿ, ಭಾರತದ ಸಾಂಪ್ರದಾಯಿಕ ಚಿಂತನೆ ಢಳಾಗಿ ವಿಜೃಂಭಿಸುತ್ತಿರುವ ಕಾಲವಿದು. ವರ್ಗ, ವರ್ಣ ಅಸಮಾನತೆಗಳು ಹೆಚ್ಚಾಗುವ ದಿನಗಳಿವು. ಸಂವಿಧಾನದ ಆಶಯಗಳಿಗೆ ಧಕ್ಕೆ ಬಂದಿದೆ. ಮುಂದಿನ 15 ವರ್ಷಗಳು ಭೀಕರವಾದ ದಿನಗಳೇನೋ ಅನಿಸುತ್ತಿದೆ ಎಂದು ತಿಳಿಸಿದರು.

Advertisement

ಲೇಖಕರಾದ ಈ. ಧನಂಜಯ ಎಲಿಯೂರು ಅವರು ಭಾರತದ ಹೆಮ್ಮೆಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಚಿಂತನೆ, ಮರು ಚಿಂತನೆ, ವಿವೇಕ ಆರೋಗ್ಯಕರ ಸಮಾಜಕ್ಕೆ ಪೂರಕವಾದದೆಂದು ಅವರು ನಂಬಿದ್ದಾರೆ. ಸಮಾಜದ ಕಳಕಳಿಯಿಂದ ಬರೆದ ಅಂಕಣ ಬರಹಗಳನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ರಾಜಕೀಯ ದೊಂಬರಾಟ: ಹಿರಿಯ ಸಮಾಜವಾದಿ ಪ.ಮಲ್ಲೇಶ್‌, ತುರ್ತು ಪರಿಸ್ಥಿತಿಗಿಂತ ಭೀಕರವಾದ ದಿನಗಳು ಬರಲಿವೆ. ನಮ್ಮ ಮಕ್ಕಳಿಗೆ ಯಾವ ಭವಿಷ್ಯವನ್ನು ಕೊಡಲಿದ್ದೇವೆ ಎಂಬುದನ್ನು ನೆನದರೆ ಭಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ.

ಶಿಕ್ಷಣದಲ್ಲೂ ಕೇಸರಿಕರಣ ಬಂದಿದೆ. ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಂಥ ದುಸ್ಥಿತಿಯಲ್ಲಿದ್ದೇವೆ. ಮುಂದಿನ ದಿನಗಳು ಏನಾಗಬಹುದು? ನೆನದರೆ ಭಯವಾಗುತ್ತದೆ. ಇದು ಅನಿವಾರ್ಯ ಎಂದರು.

ಬಾರುಕೋಲು ಪತ್ರಿಕೆ ಸಂಪಾದಕ ಬಿ.ಆರ್‌.ರಂಗಸ್ವಾಮಿ, ಆಂದೋಲನ ದಿನಪತ್ರಿಕೆ ಸಹ ಸಂಪಾದಕಿ ರಶ್ಮಿ ಕೌಜಲಗಿ, ಯುವ ಪ್ರಗತಿಪರ ಚಿಂತಕರ ಸಂಘದ ಬಿ.ಶಿವಶಂಕರ್‌, ಡಾ.ಚಂದ್ರಗುಪ್ತ, ಡಾ.ಪದ್ಮಶ್ರೀ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next