ಮಸ್ಕಿ: ನಾರಾಯಣಪುರ ಬಲದಂಡೆ 5ಎ ಶಾಖಾ ಕಾಲುವೆ ವಿಚಾರದ ಹೋರಾಟವೂ ಸದ್ಯ ತಣ್ಣಗಾಗಿದ್ದು, ಹರಿಯೂ ಇಲ್ಲದೇ ಇತ್ತ ಹನಿ ನೀರಾವರಿಯೂ ಇಲ್ಲದ ಪರಿಸ್ಥಿತಿ ಇಲ್ಲಿನ ರೈತರಿಗೆ ಎದುರಾಗಿದೆ!. ಮಸ್ಕಿ ಉಪಚುನಾವಣೆ ಸಮಯದಲ್ಲಿ ಚುನಾವಣೆ ಅಸ್ತ್ರವಾಗಿದ್ದ 5ಎ ಕಾಲುವೆ ಹೋರಾಟ ಈಗ ತೆರೆಮರೆಗೆ ಸರಿದಂತಾಗಿದೆ. ಆದರೆ, ಹೋರಾಟಕ್ಕೆ ಬಳಕೆಯಾದ ರೈತರು ಮಾತ್ರ ಈಗ ಮತ್ತದೇ ಖುಷ್ಕಿ ಪ್ರದೇಶದಲ್ಲಿಯೇ ಕೃಷಿ ಚಟುವಟಿಕೆ ನಡೆಸಿದ್ದಾರೆ.
ಏನಾಗಿತ್ತು?: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ ಕಿ.ಮೀ. 17.300ರಲ್ಲಿ ಹೆಡ್ ರೆಗ್ಯುಲೆಟರ್ ನಿರ್ಮಾಣ ಮಾಡಿ ಅಲ್ಲಿಂದ 65 ಕಿ.ಮೀ. ಪ್ರತ್ಯೇಕ (5ಎ ಶಾಖಾ) ಕಾಲುವೆ ನಿರ್ಮಾಣ ಮಾಡಿ ಸುಮಾರು 31346 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲು ಒತ್ತಾಯಿಸಿ ರೈತರ ಚಳವಳಿ ನಡೆಯುತ್ತಿದೆ.
12 ವರ್ಷಗಳಿಂದಲೂ ಈ ಬೇಡಿಕೆ ಇದ್ದರೂ ಉಪಚುನಾವಣೆ ಅವಧಿ ಯಲ್ಲಿ ಹೋರಾಟ ರಾಜಕಾರಣಗೊಂಡಿತ್ತು. ಪ್ರತ್ಯೇಕ ಶಾಖಾ ಕಾಲುವೆ ನಿರ್ಮಾಣ ವೇಳೆ ಸುರಂಗ ಮಾರ್ಗ ಕೊರೆಯುವುದು, ಪ್ರತ್ಯೇಕ ಭೂಸ್ವಾಧೀನ ಮಾಡಿಕೊಳ್ಳುವ ಅಗತ್ಯತೆ ಸೇರಿ ತಾಂತ್ರಿಕ ಅಡಚಣೆ ಹಿನ್ನೆಲೆಯಲ್ಲಿ ಸರಕಾರ ಈ ಯೋಜನೆ ಅನುಷ್ಠಾನಕ್ಕೆ ಹಿಂಜರಿದಿತ್ತು. ಇದಕ್ಕೆ ಪರ್ಯಾಯವಾಗಿ ನಂದವಾಡಗಿ ಏತ ನೀರಾವರಿ ಎರಡನೇ ಹಂತದ ಮೂಲಕವೇ ಹನಿ ನೀರಾವರಿ ಬದಲು ಹರಿ ನೀರಾವರಿ ವ್ಯವಸ್ಥೆ ಮಾಡುವುದಾಗಿ ಸರಕಾರದ ಪ್ರತಿನಿಧಿಗಳು ಪ್ರಕಟಿಸಿದ್ದರು. ಇದಕ್ಕಾಗಿ ಪ್ರತ್ಯೇಕ ಟೆಂಡರ್ ಸಹ ಕರೆಯಲಾಗಿದ್ದು, ವಟಗಲ್ ಬಸವೇಶ್ವರ ಏತ ನೀರಾವರಿ ಎಂದು ನಾಮಕಾರಣ ಮಾಡಲಾಗಿತ್ತು.
ಆದರೆ ಇಲ್ಲಿನ ರೈತರು ಈ ವ್ಯವಸ್ಥೆಯನ್ನು ವಿರೋಧಿಸಿದ್ದರು. ರೈತರಲ್ಲಿಯೇ ಉಂಟಾಗಿದ್ದ ಮತ್ತೂಂದು ಗುಂಪು ಏತ ನೀರಾವರಿ ಜಾರಿಗೊಳಿಸುವಂತೆ ಪಟ್ಟು ಹಿಡಿದಿತ್ತು. ಆದರೆ ಈ ಹೋರಾಟ ಪಾಲಿಟಿಕ್ಸ್ ಸುಳಿಗೆ ಸಿಕ್ಕು ಉಪಚುನಾವಣೆಗೆ ಅಸ್ತ್ರವಾಗಿಯೇ ಬಳಕೆಯಾಯಿತು. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅತಿ ಹೆಚ್ಚು ಅಂತರದಿಂದ ಸೋಲಲು ಇದು ಕೂಡ ಕಾರಣವಾಯಿತು.
ಕೇಳ್ಳೋರಿಲ್ಲ: ಉಪಚುನಾವಣೆ ವೇಳೆ ತೀವ್ರ ಚಾಲ್ತಿಯಲ್ಲಿದ್ದ ಈ 5ಎ ಕಾಲುವೆ ಅನುಷ್ಠಾನ ಸಂಗತಿ ಸದ್ಯ ಕೇಳ್ಳೋರಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಹೋರಾಟ ಸ್ಥಗಿತ ಮಾಡಲಾಗಿದ್ದು, ಆಯಾ ಹಳ್ಳಿಗಳಲ್ಲಿ ಸೀಮಿತ ರೈತರ ಮೂಲಕ ಹೋರಾಟ ನಡೆದಿದೆ ಎನ್ನುತ್ತಾರೆ ಹೋರಾಟಗಾರರು. ಆದರೆ, ಇತ್ತ ರೈತರ ಬೇಡಿಕೆ ಈಡೇರಿಕೆಗೆ ಚುನಾಯಿತ ಪ್ರತಿನಿಧಿಗಳು ಮತ್ತೆ ತಾತ್ಸಾರ ತೋರುತ್ತಿದ್ದಾರೆ. ಹಾಲಿ ಶಾಸಕ ಆರ್. ಬಸನಗೌಡ ನೇತೃತ್ವದಲ್ಲಿ ಬೆಂಗಳೂರಿಗೆ ನಿಯೋಗ ತೆರಳಲು ಬೇಡಿಕೆ ಇದ್ದು, ಇದುವರೆಗೂ ಈಡೇರಿಲ್ಲ.
ಅರ್ಧಕ್ಕೆ ನಿಂತ ಸರ್ವೇ
5ಎ ಕಾಲುವೆ ಬದಲಾಗಿ ನಂದವಾಡಗಿ ಎರಡನೇ ಹಂತದ ಏತ ನೀರಾವರಿ ಮೂಲಕ ಹನಿ ನೀರಾವರಿ ಬದಲು ಹರಿ ನೀರಾವರಿ ಜಾರಿಗೆ ಅಗತ್ಯ ಇರುವ ಅನುದಾನ, ಯೋಜನೆಯ ರೂಪುರೇಷ ಕುರಿತು ಸಂಪೂರ್ಣ ಡಿಪಿಆರ್ ತಯಾರಿಕೆಗೆ 2.80 ಕೋಟಿ ಮೊತ್ತಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಅರ್ಹತೆ ಗಿಟ್ಟಿಸಿದ ಖಾಸಗಿ ಏಜೆನ್ಸಿ ಆರಂಭದಲ್ಲಿ ಈ ಯೋಜನೆ ಕುರಿತಾಗಿ ಡಿಪಿಆರ್ ತಯಾರಿಕೆಗೆ ಸರ್ವೇ ಕಾರ್ಯ ಆರಂಭಿಸಿತ್ತು. ಯೋಜನೆ ಅನುಷ್ಠಾನದ ಬಗ್ಗೆ ದ್ವಂದ್ವ ನೀತಿ ವ್ಯಕ್ತವಾಗಿದ್ದರಿಂದ ಈಗ ಸರ್ವೇ ಕಾರ್ಯವೂ ಸ್ಥಗಿತವಾಗಿದೆ. ಈ ಬಗ್ಗೆ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಕೂಡ ಮೌನ ವಹಿಸಿದ್ದಾರೆ.
5ಎ ಕಾಲುವೆ ಜಾರಿ ಬಗ್ಗೆ ತಾಂತ್ರಿಕ ಸಮಸ್ಯೆ ಇದೆ. ಹೀಗಾಗಿ ವಟಗಲ್ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರಕಾರ ಒಪ್ಪಿಗೆ ನೀಡಿತ್ತು. ಸರ್ವೇಗೂ ಟೆಂಡರ್ ಕರೆಯಲಾಗಿತ್ತು. ತಾತ್ಕಾಲಿಕವಾಗಿ ಸರ್ವೇ ಕಾರ್ಯ ಸ್ಥಗಿತ ಮಾಡುವಂತೆ ಸರಕಾರ ಈ ಹಿಂದೆ ಸೂಚನೆ ಮಾಡಿದ ಹಿನ್ನೆಲೆ ಮುಂದಿನ ಆದೇಶದವರೆಗೂ ಈ ಯೋಜನೆಯ ಸರ್ವೇ ಕಾರ್ಯ ಸ್ಥಗಿತ ಮಾಡಲಾಗಿದೆ.
ರಂಗರಾಮ್ ಮುಖ್ಯ ಅಭಿಯಂತರರು,
ಕೆಬಿಜೆಎನ್‌ಎಲ್ ರೋಡಲಬಂಡ
ನಮ್ಮ ಹೋರಾಟ ನಿರಂತರವಾಗಿದೆ. 5ಎ ಕಾಲುವೆ ಯೋಜನೆಯನ್ನೇ ಜಾರಿ ಮಾಡಬೇಕು. ಇದಕ್ಕೆ ಕಳೆದ 200 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಬಸವರಾಜಪ್ಪಗೌಡ
ಹರ್ವಾಪುರ, ರೈತರ
ಹೋರಾಟಗಾರ
*ಮಲ್ಲಿಕಾರ್ಜುನ ಚಿಲ್ಕರಾಗಿ