Advertisement
ಏಷ್ಯಾದಲ್ಲಿ ಅತಿ ದೊಡ್ಡ ರೇಷ್ಮೆಗೂಡಿನ ಮಾರುಕಟ್ಟೆ ಮತ್ತು ಇಲ್ಲಿ ಉತ್ಪಾದನೆಯಾಗುವ ನೂಲು ದೇಶ ವಿದೇಶಗಳಲ್ಲಿ ಮಾರಾಟವಾಗುತ್ತದೆ. ಆದರೆ ಇಂತಹ ಖ್ಯಾತಿ ಹೊಂದಿರುವ ರೇಷ್ಮೆ ನಗರಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೇ, ಕುಡಿಯುವ ನೀರಿಗಾಗಿ ರೋಗಿಗಳು ಮಿನರಲ್ ನೀರು ಆಶ್ರಯಿಸಿಕೊಳ್ಳುವಂತಹ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕ ಆಸ್ಪತ್ರೆಯನ್ನು ಕಡೆಗಣಿಸಿದ್ದಾರೆಯೇ? ಎಂಬ ಅನುಮಾನ ಮೂಡುವಂತಾಗಿದೆ.
Related Articles
Advertisement
ಕುಡಿಯುವ ನೀರಿಲ್ಲದೇ ಪರದಾಟ: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಕೊರೆದಿರುವ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಇದೀಗ ನಗರಸಭೆಯಿಂದ ಅಲ್ಪ ನೀರು ಪೂರೈಕೆಯಾಗುತ್ತಿದ್ದು ಇದರಿಂದ ರೋಗಿಗಳು ಕುಡಿಯುವ ನೀರಿಗೂ ಸಹ ಪರದಾಡುವಂತಾಗಿದೆ. ಕೆಲವರು ಆಸ್ಪತ್ರೆಯ ಹೊರಭಾಗದಲ್ಲಿ ನೀರಿನ ಬಾಟಲುಗಳು ಖರೀದಿ ಮಾಡಿದರೆ ಇನ್ನೂ ಕೆಲವರು ತಮ್ಮ ಮನೆಯಿಂದ ನೀರು ತಂದುಕೊಳ್ಳುವ ಪರಿಸ್ಥಿತಿ ಇಲ್ಲಿ ಕಾಣಬಹುದಾಗಿದೆ. ಒಟ್ಟಾರೆ ವೈದ್ಯರು ಮತ್ತು ನೀರಿಲ್ಲದೇ ರೋಗಿಗಳು ಮಾತ್ರ ನಿತ್ಯ ಪರದಾಡುವಂತಾಗಿದೆ.
ಡಯಾಲಿಸಿಸ್ ರೋಗಿಗಳಿಗೆ ನೀರಿಲ್ಲ: ಬಡ ರೋಗಿಗಳು ಕುಡಿಯುವ ನೀರು ಮತ್ತು ವೈದ್ಯರಿಲ್ಲದೇ ಪರದಾಡಿದರೆ ಇನ್ನೂ ಡಯಾಲಿಸಿಸ್ ರೋಗಿಗಳ ಸ್ಥಿತಿ ಇನ್ನೂ ಗಂಭೀರವಾಗಿದೆ. ಇಲ್ಲಿಯೂ ಸಹ ನೀರಿನ ಅಭಾವದಿಂದ ಕೆಲವೊಮ್ಮೆ ಡಯಾಲಿಸಿಸ್ ನಿಲ್ಲಿಸಿರುವ ಪ್ರಕರಣಗಳು ಸಹ ನಡೆದಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಇಲ್ಲದೇ ಆರೋಗ್ಯ ರಕ್ಷಾ ಸಮಿತಿಯಿಂದ ಟ್ಯಾಂಕರ್ ಮೂಲಕ ನೀರು ಹರಿಸಿ ರೋಗಿಗಳಿಗೆ ಡಯಾಲಿಸಿಸ್ ಮಾಡುವಂತಹ ದೌರ್ಭಾಗ್ಯ ಕಾಣುವಂತಾಗಿದೆ. ಕೆಲವೊಮ್ಮ ಇದೇ ವಿಚಾರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಬಳಿ ರೋಗಿಗಳ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. ಆದರೂ ನೀರಿನ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ.
ಡೆಂಘೀ ಭೀತಿ: ಜಿಲ್ಲೆಯ ವಿವಿಧೆಡೆ ಸೊಳ್ಳೆಗಳ ಹಾವಳಿಯಿಂದ ಜ್ವರ ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿದೆ. ವಿಶೇಷವಾಗಿ ಶಿಡ್ಲಘಟ್ಟ ನಗರ ಸಹಿತ ತಾಲೂಕಿನಲ್ಲಿ ಜ್ವರದಿಂದ ಹಲವರು ಬಳಲುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರದೇಶದ ಜನ ಸಾರ್ವಜನಿಕ ಅಸ್ಪತ್ರೆಯನ್ನು ಆಶ್ರಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸಕಾಲದಲ್ಲಿ ಚಿಕಿತ್ಸೆ ಲಭಿಸದೇ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿಗೆ ತೆರಳುವಂತಾಗಿದೆ. ಜೊತೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ದಲಿತ ಮುಖಂಡರೊಬ್ಬರು ಎಸ್.ಸಿ/ಎಸ್.ಟಿ ಸಮಾಜದ ಕುಂದುಕೊರತೆಗಳ ಸಭೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ತೋರಿಸಿದ್ದಾರೆ.
ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ ಫಿಸೀಷಿಯನ್ ಮತ್ತು ರೇಡಿಯಾಲಿಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆಸ್ಪತ್ರೆಯಲ್ಲಿ ಕೊರೆದಿರುವ ಕೊಳವೆಬಾವಿಗಳು ಬತ್ತಿಹೋಗಿದ್ದು, ನಗರಸಭೆಯಿಂದ ನೀರು ಸರಬರಾಜು ಆಗುತ್ತದೆ. ಖಾಲಿಯಾಗಿದ್ದ ಸರ್ಜನ್ ಮತ್ತು ಕಣ್ಣಿನ ತಜ್ಞರ ಹುದ್ದೆಗಳು ಭರ್ತಿಯಾಗಿದ್ದು, ಇನ್ನುಳಿದ ಹುದ್ದೆಗಳು ಭರ್ತಿಯಾಗಬೇಕಿದೆ.-ಡಾ.ವಾಣಿ, ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳನ್ನು ಬಗೆಹರಿಸಲು ಆಡಳಿತ ವೈದ್ಯಾಧಿಕಾರಿಗಳು ಗಮನಹರಿಸುತ್ತಿದ್ದಾರೆ. ಚಿಕಿತ್ಸೆಗೆ ಬರುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿ ಆರೋಗ್ಯ ರಕ್ಷಾ ಸಮಿತಿಯಲ್ಲಿ ಹಣ ಬಳಸಿಕೊಳ್ಳಲು ಶಾಸಕರು ಸೂಚನೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಖಾಲಿಯಾಗಿರುವ ಫಿಸೀಷಿಯನ್ ಮತ್ತು ರೇಡಿಯಾಲಿಜಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ.
-ಡಾ.ವೆಂಕಟೇಶ್‌ಮೂರ್ತಿ ತಾಲೂಕು ಆರೋಗ್ಯಾಧಿಕಾರಿ ಶಿಡ್ಲಘಟ್ಟ