Advertisement

ಅನ್ನಭಾಗ್ಯದ ಅಕ್ಕಿಗೆ ಮುಗಿಯದ ತಗಾದೆ

01:31 AM Jun 19, 2023 | Team Udayavani |

ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಕ್ಕಿ ಜಗಳ ದಿನಗಳೆದಂತೆ ತಾರಕಕ್ಕೇರುತ್ತಿದ್ದು, ಕಾಂಗ್ರೆಸ್‌-ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿದೆ. ಈ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಡವರ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದರೆ ರಾಜಕೀಯ ಬಿಟ್ಟು ಕೇಂದ್ರದಿಂದ ಅಕ್ಕಿ ಕೊಡಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕುಂಟು ನೆಪ ಹೇಳದೆ ಯೋಜನೆ ಜಾರಿ ಮಾಡಿ. ಜು. 1ರಿಂದ ಅಕ್ಕಿ ಕೊಡದೆ ಹೋದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಡವರಿಗೆ ಅಕ್ಕಿ ನೀಡುವ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ಕೇಂದ್ರ ಸರಕಾರ ರಾಜಕೀಯ ಮಾಡುತ್ತಿವೆ. ಜೂ. 9ರಂದು ರಾಜ್ಯ ಸರಕಾರ ಪತ್ರ ಬರೆದು 2.28 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿ ಕೊಡಬೇಕು ಎಂದು ಕೇಳಿತ್ತು. ಅದಕ್ಕೆ ಜೂ. 12ರಂದು ಭಾರತೀಯ ಆಹಾರ ನಿಗಮ (ಎಫ್ಸಿಐ) ಅಧಿಕಾರಿಗಳು ಒಪ್ಪಿಗೆ ಪತ್ರ ಕಳುಹಿಸಿದ್ದರು. ಆದರೆ ಜೂ. 14ರಂದು ಅಕ್ಕಿ ಕೊಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದಾರೆ. ಈ ಮೂಲಕ ಕೇಂದ್ರ ಸರಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ಆಂಧ್ರಪ್ರದೇಶ ಮತ್ತು ತೆಲಂಗಾಣದವರು ಅಕ್ಕಿ ಪೂರೈಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಛತ್ತೀಸ್‌ಗಢ ಮುಖ್ಯಮಂತ್ರಿಗಳು ಒಂದೂವರೆ ಲಕ್ಷ ಮೆಟ್ರಿಕ್‌ ಟನ್‌ ಮಾತ್ರ ಹೆಚ್ಚಿನ ದರಕ್ಕೆ ಪೂರೈಕೆ ಮಾಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ರಾಜ್ಯದ ರೈತರಿಂದ ಅಕ್ಕಿ ಖರೀದಿಸಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಯಚೂರು ಭಾಗದಲ್ಲಿ ಬೆಳೆಯುವ ಸೋನಾ ಮಸೂರಿ ಅಕ್ಕಿಗೆ ಪ್ರತೀ ಕೆ.ಜಿ.ಗೆ 55 ರೂ. ದರವಿದೆ. ಅದನ್ನು ಕೊಡಲು ಸಾಧ್ಯವೇ?

ಎಫ್ಸಿಐಯವರು ಕೆ.ಜಿ.ಗೆ 34 ರೂ. ಹಾಗೂ 2.60 ಸಾರಿಗೆ ವೆಚ್ಚ ಸೇರಿ 36.60 ರೂ.ಗಳಿಗೆ ಕೊಡುತ್ತಿದ್ದಾರೆ. ನಾವು ಖರೀದಿಸಲು ಕೇಳುತ್ತಿದ್ದೇವೆ, ಬಿಟ್ಟಿಯಾಗಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಿಎಸ್‌ವೈ ಆಕ್ರೋಶ
ಅಕ್ಕಿ ವಿಚಾರದಲ್ಲಿ ಕೇಂದ್ರ ಸರಕಾರವನ್ನು ಅನಗತ್ಯ ದೂಷಣೆ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಹೆಚ್ಚುವರಿ ಅಕ್ಕಿ ಕೊಡುತ್ತೇವೆ ಎಂಬುದಾಗಿ ಕೇಂದ್ರ ಸರಕಾರ ಎಂದೂ ಹೇಳಿಲ್ಲ. ಈಗ ಅನ್ನಭಾಗ್ಯದ 5 ಕೆ.ಜಿ. ಅಕ್ಕಿಯನ್ನು ಒದಗಿಸುತ್ತಿರುವುದು ಕೇಂದ್ರ ಸರಕಾರ, ಅದು ಕೂಡ ಉಚಿತವಾಗಿ. ಆದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ವಿನಾಕಾರಣ ಗೊಂದಲ ಉಂಟು ಮಾಡುತ್ತಿದ್ದಾರೆ. ಎಲ್ಲಿಂದಾದರೂ ತಂದು ಗೊಂದಲ ಮಾಡದೆ ಅಕ್ಕಿ ವಿತರಣೆ ಮಾಡಲಿ ಎಂದರು.

ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಬಡವರಿಗೆ ವಿತರಿಸಲು ಅಕ್ಕಿಯನ್ನು ನಾವು ಕೇಂದ್ರ ಸರಕಾರದಿಂದ ಖರೀದಿಗಾಗಿ ಕೇಳುತ್ತಿದ್ದೇವೆ, ಪುಕ್ಕಟೆ ಅಲ್ಲ. ಆದರೆ ಅದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಈ ಮೂಲಕ ಬಡವರ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ.
– ಎಂ.ಬಿ. ಪಾಟೀಲ್‌, ಕೈಗಾರಿಕಾ ಸಚಿವ

ಅಕ್ಕಿ ಬರುವುದಿಲ್ಲ ಎಂದು ಕುಂಟು ನೆಪ ಹೇಳುತ್ತಿದ್ದಾರೆ. ಗ್ಯಾರಂಟಿ ಜಾರಿ ಮಾಡುವ ಬದ್ಧತೆಯಿಂದ ಕಾಂಗ್ರೆಸ್‌ ಹಿಂದೆ ಸರಿದಿದೆ ಎಂಬುದನ್ನು ಈ ಬೆಳವಣಿಗೆ ಸೂಚಿಸುತ್ತದೆ. ರಾಜ್ಯದ ರೈತರು ಅಕ್ಕಿ ಕೊಡಲು ಮುಂದೆ ಬಂದರೆ ಅದನ್ನು ಸರಕಾರ ಖರೀದಿಸಲಿ. ಜು. 1ರಿಂದ ಅಕ್ಕಿ ಕೊಡದೆ ಹೋದರೆ ನಾವು ಪ್ರತಿಭಟನೆ ಮಾಡುತ್ತೇವೆ.
– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next