Advertisement
ಯಡಿಯೂರಪ್ಪ ಚುನಾವಣ ರಾಜಕಾರಣದಿಂದ ನಿವೃತ್ತಿ ಘೋಷಿಸಿ ಇನ್ನೂ ವಾರ ಕಳೆದಿಲ್ಲ. ಸಕ್ರಿಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಹೇಳಿದ್ದರೂ ಅದರ ಸ್ವರೂಪ ಗೊತ್ತಿಲ್ಲ. ಹೀಗಿರುವಾಗಲೇ ಶಿವಮೊಗ್ಗಕ್ಕೆ ಆಗಮಿಸಿರುವ ಮೋದಿ, ಯಡಿಯೂರಪ್ಪ ಗುಣಗಾನ ಮಾಡಿರು ವುದರಿಂದ “ಯಡಿಯೂರಪ್ಪ ಅವರನ್ನು ಬಿಟ್ಟು ಈ ಚುನಾವಣೆ ನಡೆಸಲು ಸಾಧ್ಯವಿಲ್ಲ. ಬಿಜೆಪಿ ವರಿಷ್ಠರು ಅವರನ್ನು ಅವಗಣಿಸುತ್ತಿಲ್ಲ’ ಎಂಬ ಸಂದೇಶ ರವಾನಿಸುವ ಪ್ರಯತ್ನ ಎಂದು ವ್ಯಾಖ್ಯಾ ನಿಸಲಾಗುತ್ತಿದೆ. ಪಂಚಮಸಾಲಿ ಮೀಸಲು ಹೋರಾಟವೂ ಸಹಿತ ಬಿಜೆಪಿಯ ಪ್ರಬಲ ಮತಬ್ಯಾಂಕ್ ಎಂದೇ ಪರಿಗಣಿಸಲ್ಪಟ್ಟ ವೀರಶೈವ – ಲಿಂಗಾಯತ ಸಮುದಾಯ ಈ ಚುನಾವಣೆಯಲ್ಲಿ ಕದಡಿದ ಮನಃಸ್ಥಿತಿಯಲ್ಲಿದೆ.
Related Articles
Advertisement
ಚುನಾವಣೆತನಕವಾದರೂ ಯಡಿಯೂರಪ್ಪ ಅವರು ಇದೇ ರೀತಿ ಉತ್ಸಾಹ, ಹುಮ್ಮಸ್ಸಿನಿಂದ ಇರುವಂತೆ ನೋಡಿಕೊಳ್ಳಲು ಹೈಕಮಾಂಡ್ ಎಲ್ಲಾ ಬಗೆಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ. ಇದು ಬಿಜೆಪಿ ಹಾಗೂ ಯಡಿಯೂರಪ್ಪ ಅವರ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ದಾರಿ ಸುಗಮ: ಇದೆಲ್ಲಕ್ಕಿಂತ ಮುಖ್ಯವಾಗಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಮುನ್ನೆಲೆಗೆ ತರುವುದಕ್ಕೂ ಯಡಿಯೂರಪ್ಪನವರಿಗೆ ಈ ವೇದಿಕೆ ಅವಕಾಶ ನೀಡಿದ್ದು, ಶಿಕಾರಿಪುರದಲ್ಲಿ ತಮ್ಮ ಉತ್ತರಾಧಿಕಾರಿ ವಿಜಯೇಂದ್ರ ಎಂದು ಈಗಾಗಲೇ ಮಾಡಿರುವ ಘೋಷಣೆಗೆ ವರಿ ಷ್ಠರ ಸಮ್ಮತಿ ಮುದ್ರೆ ಗಿಟ್ಟಿಸಲು ಯಡಿಯೂರಪ್ಪ ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಾಯ್ದಿಟ್ಟ ಅಸ್ತ್ರ?
ಇದೆಲ್ಲದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆಯ ಬಗ್ಗೆ ಬಿಜೆಪಿ ಇನ್ನೂ ನಿಗಾ ಇಟ್ಟು ಕಾಯುತ್ತಿದೆ. ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಸುರಕ್ಷಿತವಲ್ಲ ಎಂದು ಅವರ ಆಪ್ತ ವರ್ಗ ಪದೇ ಪದೆ ಎಚ್ಚರಿಕೆ ನೀಡುತ್ತಲೇ ಇದೆ. ಕೊನೆ ಕ್ಷಣದಲ್ಲಿ ಅವರು ವರುಣಾ ಕ್ಷೇತ್ರದಿಂದ ಸ್ಫರ್ಧೆ ನಡೆಸುತ್ತಾರೆ ಎಂದು ಬಿಜೆಪಿ ಬಲವಾಗಿ ನಂಬಿದೆ. ಒಂದೊಮ್ಮೆ ಸಿದ್ದರಾಮಯ್ಯ ವರುಣಾಕ್ಕೆ ವಾಪಾಸ್ ಬಂದರೆ ಅವರ ವಿರುದ್ಧ ಕಾಯ್ದಿಟ್ಟ ಅಸ್ತ್ರದ ರೂಪದಲ್ಲಿ ವಿಜಯೇಂದ್ರ ಅವರನ್ನು ಬಳಕೆ ಮಾಡುವುದಕ್ಕೆ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. -ರಾಘವೇಂದ್ರ ಭಟ್