Advertisement
ರಾಜ್ಯದಲ್ಲಿ 2018ರ ಆ. 31ರಂದು ನಗರ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ನಡೆದಿತ್ತು. ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಂಡು 8 ತಿಂಗಳು ಕಳೆದರೂ ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು ಜನಪ್ರತಿನಿಧಿಗಳ ಆಡಳಿತ ರಚನೆಯಾಗದೇ ಇರುವ ಮೂಲಕ ಜನರ ಆಯ್ಕೆಯ ಆಡಳಿತಕ್ಕೆ ಕಾಲ ಕೂಡಿ ಬಂದಿಲ್ಲ. ಅನಿವಾರ್ಯವಾಗಿ ನಗರದ ಜನರು ಅಧಿಕಾರಿಗಳ ಆಡಳಿತದಲ್ಲೇ ಕಾಲ ಕಳೆಯಬೇಕಾಗಿದೆ. ಇದು ಅಭಿವೃದ್ಧಿ ಕೆಲಸಗಳಿಗೂ ತೊಡಕಾಗಿ ಪರಿಣಮಿಸಿದೆ.
ಪುತ್ತೂರು ನಗರಸಭೆಯ 31 ಸ್ಥಾನಗಳ ಪೈಕಿ ಬಿಜೆಪಿ 25 ವಾರ್ಡ್‌ಗಳನ್ನು ಗೆದ್ದು ಭರ್ಜರಿ ಬಹುಮತ ಪಡೆದಿತ್ತು. ಕಾಂಗ್ರೆಸ್ 5 ಮತ್ತು ಎಸ್‌ಡಿಪಿಐ 1 ಸ್ಥಾನ ಸಂಪಾದಿಸಿತ್ತು. ಹಿಂದಿನ 5 ವರ್ಷಗಳಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಚುನಾವಣೆಯ ಬಳಿಕ ಅಧಿಕಾರ ಕಳೆದುಕೊಂಡಿತ್ತು. ಸದ್ಯ ಗೆದ್ದರೂ ಆಡಳಿತ ತೆಕ್ಕೆಯನ್ನು ಸಂಪೂರ್ಣ ಬಾಚಿಕೊಳ್ಳಲು ಸಾಧ್ಯವಾಗದ ಸ್ಥಿತಿ ಬಿಜೆಪಿಯದ್ದು. ಆಡಳಿತಾಧಿಕಾರಿ ಕಾರ್ಯ
ನಗರಸಭೆಗಳಲ್ಲಿ ಜಿಲ್ಲಾಧಿಕಾರಿ ಆಡಳಿತಾಧಿಕಾರಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಪುರಸಭೆಗಳಲ್ಲಿ ಸಹಾಯಕ ಕಮಿಷನರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಆಡಳಿತದ ಜತೆಗೆ ವಾರ್ಷಿಕ ಮುಂಗಡಪತ್ರ ಮಂಡನೆಯೂ ಅಧಿಕಾರಿಗಳ ನೇತೃತ್ವದಲ್ಲೇ ನಡೆದಿದೆ. ಜನಪ್ರತಿನಿಧಿ ಆಡಳಿತ ಇನ್ನೂ ಬಾರದೇ ಇರುವ ಕುರಿತು ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಪ್ರಸ್ತುತ ಮೇ 29ರಂದು ಎರಡನೇ ಹಂತದ ನಗರ ಸ್ಥಳೀಯಾಡಳಿತದ ಚುನಾವಣೆ ನಡೆಯಲಿದ್ದು, ಈ ಚುನಾವಣೆ ಮುಗಿದ ಮೇಲೆ ಎರಡೂ ಹಂತಕ್ಕೂಜನಪ್ರತಿನಿಧಿ ಆಡಳಿತ ಬರಬಹುದು ಎನ್ನುವ ನಿರೀಕ್ಷೆ ಇದೆ.
Related Articles
ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಮೀಸಲಾತಿ ಪಟ್ಟಿಯೂ ಘೋಷಣೆಯಾಗಿತ್ತು. ಅದರಂತೆ ಪುತ್ತೂರಿನಲ್ಲಿ ಅಧ್ಯಕ್ಷತೆ ಹಿಂದುಳಿದ ವರ್ಗ 2ಎ, ಉಪಾಧ್ಯಕ್ಷತೆಯು ಪರಿಶಿಷ್ಟ ಪಂಗಡ ಮಹಿಳೆಗೆ ನಿಗದಿಯಾಗಿತ್ತು. ಬೆಳ್ತಂಗಡಿಯಲ್ಲೂ ಮೀಸಲಾತಿ ಪಟ್ಟಿ ಪ್ರಕಟವಾಗಿತ್ತು. ಬಂಟ್ವಾಳದಲ್ಲಿ ಅಧ್ಯಕ್ಷತೆ ಮತ್ತು ಉಪಾಧ್ಯಕ್ಷತೆ ಮೀಸಲಾತಿ ಎರಡು ಬಾರಿ ಪ್ರಕಟವಾದ ಕಾರಣ ವಿವಾದವೂ ಉಂಟಾಗಿತ್ತು. ಇದೇ ಮೀಸಲು ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗಿ ಪ್ರಕರಣ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಆಡಳಿತ ವ್ಯವಸ್ಥೆ ಜಾರಿಗೆ ಬಂದಿಲ್ಲ.
Advertisement