ಆ ಪ್ರಾಂತ್ಯದಲ್ಲಿ ಹೊಸ ರೀತಿಯ ಜ್ವರವೊಂದು ಹರಡಿತು. ವೈದ್ಯರಾಗಿದ್ದ ಸೋಮ- ಭೀಮರು ತಾವು ಕಲಿತ ವಿದ್ಯೆಯನ್ನೆಲ್ಲ ಪ್ರಯೋಗಿಸಿದರೂ ಜ್ವರ ವಾಸಿಯಾಗಲಿಲ್ಲ. ಬಹಳ ಹಿಂದೆ ಗುರುಗಳು ಆ ನಿಗೂಢ ರೋಗಕ್ಕೆ ಔಷಧವನ್ನು ಹೇಳಿದ್ದರಾದರೂ ಆ ಮೂಲಿಕೆ ಯಾವುದೆಂದು ಇಬ್ಬರಿಗೂ ಗೊತ್ತಿರಲಿಲ್ಲ.
ಬಹಳ ಹಿಂದೆ ಗುರುಕುಲವೊಂದರಲ್ಲಿ ಸೋಮ ಮತ್ತು ಭೀಮ ಎಂಬ ಶಿಷ್ಯರು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಸೋಮ ವಿನಯವಂತನಾಗಿದ್ದ ಹಾಗೂ ವಿಷಯವನ್ನು ಕಷ್ಟಪಟ್ಟು ಅರ್ಥಮಾಡಿಕೊಳ್ಳುತ್ತಿದ್ದ. ಆದರೆ, ಭೀಮ ಬುದ್ಧಿವಂತನಾಗಿದ್ದ, ಗುರುಗಳು ಹೇಳಿಕೊಡುವ ಮುನ್ನವೇ ಉತ್ತರಗಳನ್ನು ಕೊಟ್ಟುಬಿಡುತ್ತಿದ್ದ. ವರ್ಷಗಳು ಉರುಳಿದವು. ಒಂದು ದಿನ ಗುರುಗಳು ಇಬ್ಬರನ್ನೂ ಕರೆದು, ಮೂಲಿಕೆಗಳ ಕುರಿತಾದ ಒಂದು ಪುಸ್ತಕವನ್ನು ನೀಡಿ, “ಈಗ ನೀವಿಬ್ಬರೂ ವೈದ್ಯಕೀಯ ವೃತ್ತಿಯನ್ನು ಶುರು ಮಾಡಲು ಅರ್ಹರಾಗಿದ್ದೀರಿ. ನೀವಿನ್ನು ನಿಮ್ಮ ನಿಮ್ಮ ಊರಿಗೆ ಹೋಗಿ ರೋಗಿಗಳ ಸೇವೆ ಮಾಡಿ’ ಎಂದು ಆಶೀರ್ವದಿಸಿ ಕಳಿಸಿದರು.
ಸೋಮ-ಭೀಮ ಇಬ್ಬರೂ ಅಕ್ಕಪಕ್ಕದ ಊರಿನಲ್ಲಿ ವೈದ್ಯ ವೃತ್ತಿ ಶುರು ಮಾಡಿದರು. ಹೆಚ್ಚು ತಿಳಿದುಕೊಂಡಿದ್ದ ಭೀಮನಿಗೆ, ತನ್ನ ಜ್ಞಾನದ ಬಗ್ಗೆ ಅಹಂ ಇತ್ತು. ಆತ ಗುರುಗಳು ನೀಡಿದ ಪುಸ್ತಕವನ್ನು ತೆರೆಯಲೂ ಇಲ್ಲ. ನೆಗಡಿ, ಕೆಮ್ಮು, ಜ್ವರವೆಂದು ರೋಗಿಗಳು ಬಂದಾಗ, ಅವರಿಗೆ ತನಗೆ ತಿಳಿದಿರುವ ಮೂಲಿಕೆಗಳನ್ನು ನೀಡಿ, ಕಷಾಯ ಮಾಡಿ ಕುಡಿಯಿರಿ ಎಂದು ಹೇಳುತ್ತಿದ್ದ. ಗುಣಮುಖರಾದ ರೋಗಿಗಳು, ಆ ಮೂಲಿಕೆಯನ್ನು ನೆನಪಿಟ್ಟುಕೊಂಡು, ಮುಂದಿನ ಬಾರಿ ರೋಗ ಬಂದಾಗ ತಾವಾಗಿಯೇ ಕಷಾಯ ಮಾಡಿ ಕುಡಿಯತೊಡಗಿದರು. ಎಲ್ಲರೂ ಹೀಗೆ ಮಾಡಿದ್ದರಿಂದ ಕ್ರಮೇಣ ಭೀಮನ ಬಳಿ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಯಿತು.
ಪಕ್ಕದ ಊರಿನಲ್ಲಿದ್ದ ಸೋಮ, ಗುರುಗಳು ನೀಡಿದ ಪುಸ್ತಕವನ್ನು ನೋಡಿ, ಯಾವ ಯಾವ ಮೂಲಿಕೆ ಯಾವ ರೋಗಕ್ಕೆ ಎಂದು ಕಂಡುಕೊಂಡಿದ್ದ. ಆದರೆ, ಮೂಲಿಕೆಯನ್ನು ನೇರವಾಗಿ ರೋಗಿಗೆ ಕೊಡದೆ, ಅದರ ಲೇಹ ತಯಾರಿಸಿ ನೀಡುತ್ತಿದ್ದ. ಸೋಮನ ಕೈಗುಣ ಚೆನ್ನಾಗಿದೆ ಎಂದು ಜನ ಹೊಗಳಿದರು. ಸುತ್ತ ಹತ್ತೂರಿನಿಂದಲೂ ರೋಗಿಗಳು ಬರತೊಡಗಿದರು. ಭೀಮನಿಗೆ ಸೋಮನ ಪ್ರಸಿದ್ಧಿ ಕಂಡು ಹೊಟ್ಟೆಕಿಚ್ಚಾಯ್ತು.
ಒಮ್ಮೆ ಆ ಪ್ರಾಂತ್ಯದಲ್ಲಿ ಹೊಸ ರೀತಿಯ ಜ್ವರವೊಂದು ಹರಡಿತು. ಸೋಮ-ಭೀಮರು ತಾವು ಕಲಿತ ವಿದ್ಯೆಯನ್ನೆಲ್ಲ ಪ್ರಯೋಗಿಸಿದರೂ ಫಲಕಾರಿಯಾಗಲಿಲ್ಲ. ಸುತ್ತ ಹತ್ತೂರಿಗೂ ಆ ರೋಗ ಹರಡಿ, ಜನ ಸಾಯತೊಡಗಿದರು. ಗುರುಗಳು ಆ ರೋಗಕ್ಕೆ ಔಷಧಿಯನ್ನು ಹೇಳಿದ್ದರಾದರೂ ಆ ಮೂಲಿಕೆಯನ್ನು ತೋರಿಸಿರಲಿಲ್ಲ. ಹಾಗಾಗಿ ಭೀಮನಿಗೆ ಅದು ಯಾವ ಮೂಲಿಕೆಯೆಂದು ತಿಳಿಯಲಿಲ್ಲ. ಸೋಮನು, ಗುರುಗಳು ನೀಡಿದ ಪುಸ್ತಕದಲ್ಲಿ ಆ ಮೂಲಿಕೆಯ ಗುಣ, ಬಣ್ಣ, ಎಲೆಯ ಆಕಾರದ ಕುರಿತಾಗಿ ಇರುವುದನ್ನು ಓದಿದ. ಹತ್ತಿರದ ಬೆಟ್ಟದಿಂದ ಆ ಮೂಲಿಕೆಯನ್ನು ತಂದು, ಔಷಧ ತಯಾರಿಸಿದ. ಔಷಧಿ ಸೇವಿಸಿದ ಜನರು ಚೇತರಿಸಿಕೊಂಡರು. ಹೆಚ್ಚೆಚ್ಚು ಜನ ಅವನ ಬಳಿ ಬಂದರು. ಅದನ್ನು ನೋಡಿ ಭೀಮನಿಗೆ ಮತ್ಸರವುಂಟಾಯಿತು . ಆದರೆ, ಸೋಮನ ಬಳಿ ಆ ಮೂಲಿಕೆಯ ಬಗ್ಗೆ ಕೇಳಲು ಅಹಂ ಅಡ್ಡ ಬಂತು. ಆದರೂ, ಹೇಗಾದರೂ ಮಾಡಿ ಆ ಮೂಲಿಕೆಯ ರಹಸ್ಯ ತಿಳಿದುಕೊಳ್ಳಬೇಕೆಂದು ಹೊಂಚು ಹಾಕಿದ.
ಒಂದು ದಿನ ಸಂಜೆ ಸೋಮ ಮೂಲಿಕೆ ತರಲು ಕಾಡಿಗೆ ಹೋದಾಗ, ಭೀಮ ಅವನನ್ನು ಹಿಂಬಾಲಿಸಿದ. ಅವನು ಮೂಲಿಕೆ ಗಿಡ ಕೀಳುವುದನ್ನು ದೂರದಿಂದ ಕದ್ದು ಗಮನಿಸಿದ. ಸೋಮ ವಾಪಸಾದ ಮೇಲೆ ಅಲ್ಲಿದ್ದ ಗಿಡಗಳನ್ನೆಲ್ಲ ಕಿತ್ತು ಮನೆಗೆ ಬಂದ. ಅದರಿಂದ ಔಷಧಿ ತಯಾರಿಸಿ ಎಲ್ಲರಿಗೂ ನೀಡಿದ.
ಆದರೆ, ಭೀಮ ನೀಡಿದ ಔಷಧ ಕುಡಿದವರ ಜ್ವರ ಹೆಚ್ಚಾಯ್ತು. ಅವನು ಕತ್ತಲಲ್ಲಿ ಬೇರೆ ಮೂಲಿಕೆ ಗಿಡವನ್ನು ಕಿತ್ತು ತಂದಿದ್ದ. ಅದು ರೋಗಿಗಳ ಮೇಲೆ ಅಡ್ಡ ಪರಿಣಾಮ ಬೀರಿತು. ಊರ ಜನರೆಲ್ಲ ಅವನನ್ನು ನಕಲಿ ವೈದ್ಯನೆಂದು ಊರಿನಿಂದ ಓಡಿಸಿದರು. ಆತ ಗುರುವಿನ ಬಳಿ ಬಂದು ದುಃಖ ತೋಡಿಕೊಂಡ. ಆಗ ಗುರುಗಳು- “ನಾನು ಕಲಿಸಿದ್ದನ್ನಷ್ಟೇ ನೀನು ಕಲಿತುಕೊಂಡೆ. ಆದರೆ, ಸೋಮ ಪುಸ್ತಕ ಓದಿ, ಹೊಸ ಹೊಸ ಪ್ರಯೋಗಗಳನ್ನು ಮಾಡಿ ವೃತ್ತಿಯಲ್ಲಿ ಮುಂದೆ ಬಂದ. ವಿದ್ಯೆ ಎಷ್ಟು ಮುಖ್ಯವೋ, ವ್ಯವಹಾರ ಜ್ಞಾನವೂ ಅಷ್ಟೇ ಮುಖ್ಯ’ ಎಂದು ಬುದ್ಧಿ ಹೇಳಿ ಕಳಿಸಿದರು.
ಚಿತ್ರಕೃಪೆ: ಕಲಾಕಾರ್
ಸಾವಿತ್ರಿ ಶ್ಯಾನುಭಾಗ