Advertisement
ಹಳ್ಳಿಹೊಳೆ ಹಾಗೂ ಕಮಲಶಿಲೆ ಈ ಎರಡೂ ಗ್ರಾಮಗಳ ಹೈನುಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಹಳ್ಳಿಹೊಳೆಯಲ್ಲಿ ಈ ಪಶು ಚಿಕಿತ್ಸಾಲಯವನ್ನು ತೆರೆಯಲಾಗಿದೆ. ಆಗಿನ ಶಾಸಕ ಗೋಪಾಲ ಪೂಜಾರಿ ಪ್ರಯತ್ನದಿಂದ ಉಡುಪಿಯ ಕೆಆರ್‌ಐಡಿಎಲ್ ಇಲಾಖೆಯಿಂದ ಮಂಜೂರಾದ 19.80 ಲಕ್ಷ ರೂ. ವೆಚ್ಚದಲ್ಲಿ ಈ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣಗೊಂಡಿತ್ತು.
ಈ ಹಳ್ಳಿಹೊಳೆಯ ಪಶು ಚಿಕಿತ್ಸಾಲಯದ ವ್ಯಾಪ್ತಿಯಲ್ಲಿನ ಕಮಲಶಿಲೆ, ಹಳ್ಳಿಹೊಳೆಯ ಶೆಟ್ಟಿಪಾಲು ಹಾಗೂ ಇರಿಗೆಯಲ್ಲಿ ಒಟ್ಟು ಮೂರು ಕಡೆಗಳಲ್ಲಿ ಹಾಲಿನ ಸಹಕಾರ ಸಂಘಗಳಿದ್ದು, ನೂರಾರು ಮಂದಿ ಹೈನುಗಾರರಿದ್ದಾರೆ. ಕಮಶಿಲೆ ಯಲ್ಲಿ 250 ಲೀಟರ್‌ಗಿಂತ ಹೆಚ್ಚು, ಇರಿಗೆಯಲ್ಲಿ 300 ಲೀಟರ್ ಹಾಗೂ ಶೆಟ್ಟಿಪಾಲಿನಲ್ಲಿ 250 ಲೀಟರ್‌ಗಿಂತಲೂ ಹೆಚ್ಚು ಹಾಲು ಪ್ರತಿ ದಿನ ಸಂಗ್ರಹವಾಗುತ್ತದೆ.
Related Articles
ಹಳ್ಳಿಹೊಳೆ ಪ್ರದೇಶ ತೀರಾ ಗ್ರಾಮೀಣ ಪ್ರದೇಶವಾಗಿರುವುದರಿಂದ ಹಾಗೂ ಹೆಚ್ಚಿನ ಸಮಯದಲ್ಲಿ ಇಲ್ಲಿ ಮೊಬೈಲ್ ನೆಟ್‌ವರ್ಕ್ ಕೂಡ ಸರಿಯಿಲ್ಲದೆ ಇರುವುದರಿಂದ ಜಾನುವಾರುಗಳಿಗೆ ಏನಾದರೂ ಅನಾರೋಗ್ಯ ಕಾಣಿಸಿಕೊಂಡರೆ, ಇಲ್ಲಿ ವೈದ್ಯರಿಲ್ಲದ ಕಾರಣ, ಜಡ್ಕಲ್‌ನಲ್ಲಿರುವ ಪಶು ಪಾಲನಾ ಪರಿವೀಕ್ಷಕರನ್ನು ಕರೆಸುವಷ್ಟರಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ. ಆ ಕಾರಣಕ್ಕಾಗಿ ಈ ಎರಡೂ ಗ್ರಾಮಗಳ ನೂರಾರು ಮಂದಿ ಹೈನುಗಾರರ ಪ್ರಯೋಜನಕ್ಕಾಗಿ ಇಲ್ಲಿಗೆ ಒಬ್ಬರು ಖಾಯಂ ಪಶು ವೈದ್ಯಾಧಿಕಾರಿಯನ್ನು ನೀಡಲಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.ಇಲ್ಲಿನ ಸರಕಾರಿ ಆಸ್ಪತ್ರೆ ಸಮೀಪವಿದ್ದ ಪಶು ಚಿಕಿತ್ಸಾಲಯವು ಹೊಸ ಕಟ್ಟಡಕ್ಕೆ ಕಳೆದ ವರ್ಷವಷ್ಟೇ ಸ್ಥಳಾಂತರಗೊಂಡಿದೆ. ಆದರೆ ಕಳೆದ 4-5 ವರ್ಷಗಳಿಂದ ಈ ಪಶು ವೈದ್ಯಾಧಿಕಾರಿ ಹುದ್ದೆ ಖಾಲಿಯಾಗಿಯೇ ಇದೆ.
Advertisement
ಖಾಯಂ ವೈದ್ಯಾಧಿಕಾರಿ ಬೇಕುಇಲ್ಲಿಗೆ ಖಾಯಂ ಆಗಿರುವ ಒಬ್ಬರು ಪಶು ವೈದ್ಯಾಧಿಕಾರಿಯ ಅಗತ್ಯವಿದೆ. ಈಗಿರುವ ಪಶು ಪರಿವೀಕ್ಷಕರಿಗೆ ಹೆಚ್ಚುವರಿ ಹೊಣೆ ಕೊಟ್ಟಿರುವುದರಿಂದ ಅವರು ವಾರದಲ್ಲಿ ಎಲ್ಲ ದಿನ ಇಲ್ಲದ ಕಾರಣ, ಕೆಲವೊಮ್ಮೆ ನಾವು ತುರ್ತು ಅಗತ್ಯಕ್ಕೆ ಬಂದಾಗ ಅವರು ಇರುವುದಿಲ್ಲ. ಇದರಿಂದ ಬಂದು ವಾಪಾಸು ಹೋಗಬೇಕಾಗುತ್ತದೆ. ಶೀಘ್ರ ಖಾಯಂ ವೈದ್ಯಾಧಿಕಾರಿಯನ್ನು ನಿಯೋಜಸಲಿ.
-ಚಂದ್ರ ನಾಯ್ಕ,
ಕೆರೆಕಾಡು (ಕಮಲಶಿಲೆ ಗ್ರಾಮ) 8 ಕಡೆ ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ
ಕುಂದಾಪುರ, ಬೈಂದೂರು ತಾಲೂಕು ವ್ಯಾಪ್ತಿಯ ಹಳ್ಳಿಹೊಳೆ, ಜಡ್ಕಲ್, ಬಿದ್ಕಲ್‌ಕಟ್ಟೆ, ಅಂಪಾರು, ಆಜ್ರಿ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಪಶು ವೈದ್ಯಾಧಿಕಾರಿ ಹುದ್ದೆ ಖಾಲಿಯಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದ್ದು, ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
-ಡಾ| ಸೂರ್ಯನಾರಾಯಣ ಉಪಾಧ್ಯಾಯ,
ಕುಂದಾಪುರ ತಾ| ಪಶುಪಾಲನ
ಇಲಾಖೆ ಸಹ ನಿರ್ದೇಶಕ – ಪ್ರಶಾಂತ್ ಪಾದೆ