ಮೈಸೂರು: ದೇಶಭಕ್ತಿ ಸಂಘಟನೆಗೂ ದೇಶದ್ರೋಹಿ ಸಂಘಟನೆಗೂ ವ್ಯತ್ಯಾಸವಿಲ್ಲವೆ? ಆರ್‌ಎಸ್‌ಎಸ್ ಸಂಘಟನೆ ಬ್ಯಾನ್ ಮಾಡುವುದು ಪಿಎಫ್‌ಐ ಅಭಿಪ್ರಾಯ. ಅದೇ ಅಭಿಪ್ರಾಯ ಕಾಂಗ್ರೆಸ್ ನವರು ಹೇಳುವುದಾದರೆ ಕಾಂಗ್ರೆಸ್ ಗೂ ಪಿಎಫ್ ಐಗೂ ವ್ಯತ್ಯಾಸವೇ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟರು.
ಆರ್ ಎಸ್ಎಸ್ ಭಾರತ ವಿಭಜನೆ ಸಂದರ್ಭದಲ್ಲಿ ಸೈನಿಕರ ಜತೆ ಪಥಸಂಚಲನ ಮಾಡಿತ್ತು. ಆರ್ ಎಸ್ಎಸ್ ರೀತಿಯ ದೇಶಭಕ್ತ ಸಂಘಟನೆಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ. ಪಿಎಫ್ಐ ದೇಶದ ಹಲವಾರು ಕಡೆಗಳಲ್ಲಿ ಕೋಮು ಸೌಹಾರ್ದತೆ ಕದಡುವ ಕೆಲಸ ಮಾಡಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರ ನಿಷೇಧಿಸಿದೆ. ಅಮಿತ್ ಶಾ ನೇತೃತ್ವದಲ್ಲಿ ಗೃಹ ಇಲಾಖೆ ತೆಗೆದುಕೊಂಡ ಎಲ್ಲ ನಿರ್ಧಾರ ಸಮರ್ಥ ಎಂದರು.
ಆರ್ ಎಸ್ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯಗೆ ಏನ್ ಮಾತನಾಡ್ತಾರೆ ಅನ್ನೋದು ಗೊತ್ತಾಗಲ್ಲ. ಆರ್ ಎಸ್ಎಸ್ ಬ್ಯಾನ್ ಮಾಡುವ ಅಗತ್ಯ ಇಲ್ಲ. ಅವರೇನು ದೇಶದ್ರೋಹಿ ಕೆಲಸ ಮಾಡ್ತಾರಾ? ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ನಮ್ಮದು ಸಹೋದ್ಯೋಗಿಗಳ ನಡುವಿನ ಸೌಹಾರ್ದ ಸ್ಪರ್ಧೆ: ಶಶಿ ತರೂರ್
ಆರ್ ಎಸ್ಎಸ್ ಏನು ಕೆಲಸ ಮಾಡುತ್ತದೆ, ಪಿಎಫ್ಐ ಏನು ಕೆಲಸ ಮಾಡುತ್ತದೆ ಎನ್ನುವುದನ್ನು ಎಲ್ಲರಿಗೂ ಗೊತ್ತಿದೆ. ಆರ್ ಎಸ್ಎಸ್ ದೇಶಭಕ್ತಿ ಕೆಲಸ ಮಾಡುತ್ತೆ. ಪಿಎಫ್ಐ ದೇಶದ್ರೋಹಿ ಕೆಲಸ ಮಾಡುತ್ತದೆ. ಆರ್ ಎಸ್ಎಸ್ ಬ್ಯಾನ್ ಮಾಡುವ ಪ್ರಮೇಯವೇ ಇಲ್ಲ ಎಂದರು.
ಡಿ.ಕೆ.ಶಿವಕುಮಾರ್ ಮೇಲೆ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಶೇಖರ್, ಕಾನೂನು ಬಾಹಿರ ಚಟುವಟಿಕೆಗಳ ಆರೋಪದ ಮೇಲೆ ದಾಳಿ ಮಾಡಿದ್ದಾರೆ. ಇದು ಸಾಮಾನ್ಯ ಪ್ರಕ್ರಿಯೆ. ಡಿಕೆಶಿ ಅವರನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡುತ್ತಿಲ್ಲ. ಎಲ್ಲಾ ಕಡೆಯೂ ದಾಳಿ ಆಗ್ತಿದೆ. ಅವರು ಪರಿಶುದ್ಧ ಆದರೆ ಯಾಕೆ ಹೆದರಬೇಕು ಎಂದು ಹೇಳಿದರು.