Advertisement

ಪ್ರಾಣಿಗಳ ಶವ ಸಂಸ್ಕಾರಕ್ಕೆ ಶ್ಮಶಾನವೇ ಇಲ್ಲ ! ; ಪ್ರಧಾನಿ ಕಚೇರಿಗೆ ಮನವಿ ಮಾಡಿದರೂ ಫಲವಿಲ್ಲ

11:05 AM Nov 10, 2022 | Team Udayavani |

ಮಹಾನಗರ: ಪ್ರೀತಿಯಿಂದ ಸಾಕಿದ ಪ್ರಾಣಿಗಳು ಕೊನೆಯುಸಿರೆಳೆದರೆ ಅವುಗಳ ಶವ ಸಂಸ್ಕಾರಕ್ಕೆ ನಗರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ವಿಶಾಲ ಜಾಗ ಉಳ್ಳವರು ತಮ್ಮ ಮನೆ ವಠಾರದಲ್ಲೇ ಅಂತ್ಯಕ್ರಿಯೆ ನೆರವೇರಿಸಿದರೆ, ಮಂಗಳೂರಿನ ಹೆಚ್ಚಿನ ಮನೆಯವರಿಗೆ ಜಾಗವಿಲ್ಲ. ಸ್ಮಾರ್ಟ್‌ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ಪ್ರಾಣಿಗಳಿಗೆ ಶ್ಮಶಾ ನ ನಿರ್ಮಿಸುವಂತೆ ಪ್ರಧಾನಿ ಕಚೇರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ!

Advertisement

ಪ್ರಾಣಿಗಳಿಗೆ ನಗರದಲ್ಲಿ ಶ್ಮಶಾನ ನಿರ್ಮಾಣ ಮಾಡುವ ಕುರಿತು ಕೆಲವು ತಿಂಗಳ ಹಿಂದೆ ಪಾಲಿಕೆ ಸಾಮಾನ್ಯ ಸಭೆಗೆ ಪ್ರಸ್ತಾವ ಬಂದಿತ್ತು. ಆದರೆ ಆ ಕಾರ್ಯಸೂಚಿಗೆ ಪಾಲಿಕೆ ಸದಸ್ಯರ ಬೆಂಬಲ ಸಿಗದ ಪರಿಣಾಮ ಈ ಯೋಜನೆ ಅಷ್ಟೊಂದು ಮಹತ್ವ ಪಡೆದಿಲ್ಲ. ಶಕ್ತಿನಗರ ಬಳಿಯ ಹಿಂದೂ ರುದ್ರಭೂಮಿ ಅಥವಾ ಇತರ ಪ್ರದೇಶದಲ್ಲಿ ಸ್ಮಾರ್ಟ್‌ ಸಿಟಿಯಿಂದ ಪ್ರಾಣಿಗಳ ಶ್ಮಶಾನ ನಿರ್ಮಾಣ ಮಾಡಬೇಕು ಎಂದು ಪ್ರಾಣಿಪ್ರಿಯರು ಆಗ್ರಹಿಸಿದ್ದರು. ಆದರೆ ಸ್ಥಳೀಯಾಡಳಿತ ಈ ಕುರಿತು ಅಷ್ಟೊಂದು ಗಮನ ನೀಡಲಿಲ್ಲ.

ಸತ್ತ ಪ್ರಾಣಿಯನ್ನು ಪ್ಲಾಸ್ಟಿಕ್‌ನಲ್ಲಿ ನೀಡಬೇಕೆ?

“ನಾಯಿ, ಬೆಕ್ಕುಗಳನ್ನು ನಾವು ಬಹಳ ಪ್ರೀತಿಯಿಂದ ಸಾಕಿರುತ್ತೇವೆ. ಅವುಗಳು ಮರಣ ಹೊಂದಿದಾಗ ನ್ಯಾಯಯುತವಾಗಿ ಅಂತ್ಯಕ್ರಿಯೆ ನಡೆಸಬೇಕು. ಆದರೆ ನಗರದಲ್ಲಿ ಪ್ರಾಣಿಗಳ ಶ್ಮಶಾನ ಇಲ್ಲ. ಇದೇ ಕಾರಣಕ್ಕೆ ಮರಣ ಹೊಂದಿದ ಪ್ರಾಣಿಗಳನ್ನು ಕೆಲವು ಮಂದಿ ಪ್ಲಾಸ್ಟಿಕ್‌ ತೊಟ್ಟೆಯಲ್ಲಿ ನೀಡುತ್ತಿದ್ದಾರೆ. ಕಸ ವಿಲೇವಾರಿ ಮಾಡಲು ಮನೆಗೆ ಬರುವ ಹೆಚ್ಚಿನ ಮಂದಿ ಸತ್ತ ಪ್ರಾಣಿಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಅಥವಾ ಮಂಗಳೂರು ಪಾಲಿಕೆ ಮುಂದಾಗಬೇಕಿದೆ’ ಎನ್ನುತ್ತಾರೆ ಎನಿಮಲ್‌ ಕೇರ್‌ನ ಸುಮಾ ನಾಯಕ್‌.

ಬೆಂಗಳೂರಿನಲ್ಲಿದೆ ಪ್ರಾಣಿಗಳ ಶ್ಮಶಾನ

Advertisement

ಮರಣ ಹೊಂದಿದ ಪ್ರಾಣಿಗಳನ್ನು ಸುಡಲು ಅಥವಾ ಹೂಳಲು ಬೆಂಗಳೂರು ನಗರದಲ್ಲಿ ಕೆಲವೊಂದು ಶ್ಮಶಾನಗಳಿವೆ. ಕೆಲವೊಂದು ಖಾಸಗಿ ಸಂಸ್ಥೆಗಳು ರಾಜ್ಯ ಅರಣ್ಯ ಇಲಾಖೆಯ ಸಹಯೋಗದೊಂದಿಗೂ ಶ್ಮಶಾನಗಳನ್ನು ನಿರ್ಮಿಸಿವೆ. ಸಾಕಿದ ಪ್ರಾಣಿಗಳು ತೀರಿ ಹೋದಾಗ ಅವುಗಳನ್ನು ಅಲ್ಲಿಗೆ ತಂದು ಸಮಾಧಿ ಮಾಡಲಾಗುತ್ತದೆ. ಪ್ರತಿವರ್ಷ ಆ ದಿನ ಅಲ್ಲಿಗೆ ಬಂದು ಆ ಸಮಾಧಿ ಮೇಲೆ ಹೂವು ಹಾಕಿ ಸ್ಮರಿಸುತ್ತಾರೆ.

ಶ್ಮಶಾನ ಅಗತ್ಯ: ಪ್ರಾಣಿಗಳು ಮರಣ ಹೊಂದಿದರೆ ಅವುಗಳ ಅಂತ್ಯಕ್ರಿಯೆಗೆ ನಗರದಲ್ಲಿ ಶ್ಮಶಾನ ಇಲ್ಲ. ಈ ಹಿನ್ನೆಲೆಯಲ್ಲಿ ಶ್ಮಶಾನ ಅಗತ್ಯವಿದೆ ಎಂದು ಪ್ರಧಾನಿಗಳಿಗೆ ಮನವಿ ಮಾಡಿದ್ದೇನೆ. ಅಲ್ಲಿಂದ ಸೂಕ್ತ ಉತ್ತರ ಬಂದಿದ್ದು, ಸ್ಥಳೀಯಾಡಳಿತ ಗಮನಹರಿಸುವುದಾಗಿ ತಿಳಿಸಲಾಗಿದೆ. ಪಾಲಿಕೆ, ಜನಪ್ರತಿನಿಧಿಗಳಿಗೂ ಮನವಿ ನೀಡಿ ದರೂ ಬೇಡಿಕೆ ಈಡೇರಲಿಲ್ಲ. – ಗಣೇಶ್‌ ನಾಯಕ್‌ ಸುಜೀರ್‌ ಬೆಂದೂರ್‌ವೆಲ್‌, ಪ್ರಾಣಿ ಪ್ರೇಮಿ

 ಸೂಕ್ತ ಕ್ರಮ: ಸಾವನ್ನಪ್ಪಿದ ಪ್ರಾಣಿಗಳನ್ನು ಸುಡಲು ನಗರದೊಳಗೆ ಶ್ಮಶಾ ನ ಬೇಕು ಎಂದು ಸಂಘ-ಸಂಸ್ಥೆಗಳಿಂದ ಈಗಾಗಲೇ ಮನವಿಗಳು ಬಂದಿವೆ. ನಗರದೊಳಗೆ ಸೂಕ್ತ ಜಾಗದ ಕೊರತೆ ಇದೆ. ಆದರೂ ಪರಿಶೀಲಿಸಿ ಪ್ರಾಣಿಗಳಿಗೆ ಶ್ಮಶಾ ನ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ವೇದವ್ಯಾಸ ಕಾಮತ್‌, ಶಾಸಕರು

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next