Advertisement

ಗೋಶಾಲೆಯೂ ಇಲ್ಲ, ಗೋವುಗಳೂ ಇಲ್ಲ!

09:42 AM Aug 31, 2019 | Suhan S |

ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಎಪಿಎಂಸಿ ಆವರಣದಲ್ಲಿ ತಾಲೂಕಾಡಳಿತದಿಂದ ಎಂಟು ದಿನದ ಹಿಂದೆ ಗೋಶಾಲೆ ತೆರೆದಿದ್ದು, ಆ ಸ್ಥಳಕ್ಕೆ ಭೇಟಿ ನೀಡಿದರೆ ಅಲ್ಲಿ ಗೋಶಾಲೆಯೂ ಇಲ್ಲ, ಗೋವುಗಳು ಸಹ ಕಾಣುತ್ತಿಲ್ಲ!

Advertisement

ಜಿಲ್ಲಾಡಳಿತದಿಂದ ಅವಶ್ಯಕ ಪ್ರದೇಶಗಳಲ್ಲಿ ಗೋಶಾಲೆಗಳನ್ನು ಆರಂಭಿಸಿರುವುದು ಸ್ತುತ್ಯಾರ್ಹ. ಆದರೆ ತಾಲೂಕಿನ ಸಂಶಿ ಗ್ರಾಮದಲ್ಲಿ ಒಂದೂ ಜಾನುವಾರಿಗೆ ನೆಲೆ ಕಲ್ಪಿಸಲಾಗಿಲ್ಲ. ಸರ್ಕಾರದ ಆದೇಶದಂತೆ ಕೇವಲ ಕಾಗದ ಪತ್ರದಲ್ಲಿ ಗೋಶಾಲೆ ಕಾಣುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದರೆ ಯಾವ ಲಕ್ಷಣವೂ ಅಲ್ಲಿಲ್ಲ. ದಾಸ್ತಾನು ಮಾಡಲಾಗಿದೆ ಎಂದ ಮೇವನ್ನು ಸಹ ಗೋದಾಮಿನಲ್ಲಿ ಇರಿಸಿ, ಬೀಗ ಜಡಿಯಲಾಗಿದೆ.

ತೆರೆದಿದ್ದೇ ಗೊತ್ತಿಲ್ಲ: ಸಂಶಿ ಗ್ರಾಮದ ರೈತಬೆಳೆ ರಕ್ಷಕ ಸಂಘದ ಅಧ್ಯಕ್ಷರಾದ ಡಿ.ಬಿ. ಪಾಟೀಲ ಅವರು ಮಾತನಾಡಿ, ಈ ಗೋಶಾಲೆ ಆರಂಭವಾಗಿರುವುದೇ ನಮಗೆ ಗೊತ್ತಿಲ್ಲ. ಗೋಶಾಲೆಯ ಲಕ್ಷಣಗಳು ಸಹ ಕಾಣುತ್ತಿಲ್ಲ. ಸತತ ಮಳೆಯಿಂದ ಅನೇಕ ಮನೆಗಳು ಬಿದ್ದಿದ್ದು, ರೈತರು ತಮ್ಮ ಜಾನುವಾರುಗಳನ್ನು ಅಲ್ಲಿ ಇಲ್ಲಿ ನಿಲ್ಲಿಸಿ ಸಂರಕ್ಷಿಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಸಂಗ್ರಹಿಸಿದ ಮೇವು ಸಹ ಹಾಳಾಗಿದೆ. ಈ ಗೋಶಾಲೆ ಆರಂಭಿಸಿದ್ದು ರೈತರಿಗೆ ತಿಳಿಸಿದ್ದರೆ ಬಹಳಷ್ಟು ಅನುಕೂಲವಾಗುತ್ತಿತ್ತು ಎಂದರು.

ರೈತರು ಬಂದರೆ ಸೌಲಭ್ಯ: ಪ್ರತಿದಿನ ಒಂದು ದನಕ್ಕೆ 6 ಕೆಜಿ ಮೇವಿನಂತೆ ವಿತರಿಸಲಾಗುತ್ತದೆ. ಈಗಾಗಲೇ ಒಂದು ಗಾಡಿ ಸೊಪ್ಪಿಯನ್ನು ದಾಸ್ತಾನು ಮಾಡಲಾಗಿದೆ. ರೈತರು ತಮ್ಮ ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಡುವುದಾಗಿ ಹೇಳಿದಾಗ ಟೆಂಟ್ ನಿರ್ಮಿಸಿ ಕೊಡಲಾಗುವುದು. ಸರ್ಕಾರದ ಆದೇಶದಂತೆ ತಾತ್ಕಾಲಿಕವಾಗಿ ಗೋಶಾಲೆ ಆರಂಭಿಸಿದ್ದೇವೆ. ರೈತರು ಮುಂದೆ ಬಂದರೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂಬುದು ತಹಶೀಲ್ದಾರ್‌ ಬಸವರಾಜ ಮೆಳವಂಕಿ ಸಮಜಾಯಿಷಿ.

Advertisement

Udayavani is now on Telegram. Click here to join our channel and stay updated with the latest news.

Next