Advertisement

ಜಿಲ್ಲೆಯಲ್ಲಿಲ್ಲ ಕೋವಿಡ್ 19 ಪ್ರಕರಣ: ಸಿ.ಟಿ. ರವಿ

06:23 PM Apr 05, 2020 | Suhan S |

ಚಿಕ್ಕಮಗಳೂರು: ಜಿಲ್ಲಾಡಳಿತ ಪ್ರಾಥಮಿಕ ಹಂತದಲ್ಲಿ ಕಟ್ಟುನಿಟ್ಟಿನ ಮುನ್ನೇಚ್ಚರಿಕೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೋವಿಡ್‌-19 ಸೋಂಕು ಪಾಸಿಟಿವ್‌ ಪ್ರಕರಣ ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿಲ್ಲ ಎಂದು ಸಚಿವ ಸಿ.ಟಿ. ರವಿ ಹೇಳಿದರು.

Advertisement

ಶನಿವಾರ ನಗರದ ಜಿಲ್ಲಾ ಧಿಕಾರಿ ಕಚೇರಿಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ನಿರ್ವಹಣೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 273 ಶಂಕಿತರನ್ನು ಗೃಹಬಂಧನದಲ್ಲಿರಿಸಿದ್ದು, ಅವರಲ್ಲಿ 49 ಜನ 28 ದಿನಗಳ ನಿಗಾ ಅವ ಧಿ ಪೂರೈಸಿದ್ದಾರೆ ಹಾಗೂ 250 ಮಂದಿ 14 ದಿನಗಳ ಗೃಹಬಂಧನವನ್ನು ಪೂರೈಸಿದ್ದಾರೆ. ಕಳೆದ ಐದು ದಿನಗಳಿಂದ ಯಾವುದೇ ಶಂಕಿತ ಪ್ರಕರಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ| ಮಂಜುನಾಥ್‌ ಸಭೆಗೆ ತಿಳಿಸಿದರು.

ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಫೀವರ್‌ ಕ್ಲಿನಿಕ್‌ ತೆರೆಯಲಾಗಿದೆ. ಜಿಲ್ಲೆಯಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್‌ ಟೀಂ ರಚಿಸಲಾಗಿದೆ. ಈ ತಂಡ ಕೋವಿಡ್‌-19  ಪಾಸಿಟಿವ್‌ ಪ್ರಕರಣ ಪತ್ತೆಯಾದಲ್ಲಿ ಅವರ ಸಂಪರ್ಕದಲ್ಲಿ ಯಾರ್ಯಾರು ಇದ್ದರು ಎಂಬುದನ್ನು ಕಲೆ ಹಾಕಲಿದೆ ಎಂದರು. ಜಿಲ್ಲೆಯ ಚಿಕ್ಕಮಗಳೂರು ತಾಲೂಕು 11, ಕಡೂರು 13, ತರೀಕೆರೆ 10, ಮೂಡಿಗೆರೆ 8, ಕೊಪ್ಪ 5, ಎನ್‌ ಆರ್‌ ಪುರ 5, ಶೃಂಗೇರಿ 2 ತಂಡ ರಚಿಸಿದ್ದು, ಅಲ್ಲದೇ ಕಾಂಟ್ಯಾಕ್ಟ್ ಟ್ರೆಸಿಂಗ್‌ ತಂಡಗಳ ರಚನೆಲಾಗಿದೆ ಎಂದು ತಿಳಿಸಿದರು.

ಸಚಿವ ಸಿ.ಟಿ. ರವಿ ಮಾತನಾಡಿ, ಈ ತಂಡಗಳ ಕಾರ್ಯ ನಿರ್ವಹಣೆಯ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು, ಜಿಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ತಕ್ಷಣ ಮಾಹಿತಿಯ ರವಾನಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ತಾಲೂಕಿನ ಜನರಿಗೆ 2 ತಿಂಗಳ ಪಡಿತರ ಮುಂಚಿತವಾಗಿ ನೀಡಬೇಕಾಗಿದ್ದು, ಆಹಾರ ಸರಬರಾಜು ಇಲಾಖೆ ಅಕ್ಕಿ ಮತ್ತು ಗೋಧಿ ಸರಿಯಾದ ಸಮಯದಲ್ಲಿ ವಿತರಣೆ ಮಾಡಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ನಾಗರಾಜ್‌ ಅವರಿಗೆ ಸಚಿವರು ಸೂಚಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೋವಿಡ್‌-19  ವೈರಸ್‌ ಸೋಂಕಿನಿಂದಾಗಿ ಜನರು ಹಸಿವಿನಿಂದ ನರಳುತ್ತಿದ್ದು, ಅದನ್ನು ತಪ್ಪಿಸಲು ಸರ್ಕಾರ 2 ತಿಂಗಳ ಪಡಿತರವನ್ನು ಮುಂಚಿತವಾಗಿ ನೀಡಲು ಕ್ರಮ ವಹಿಸಿದ್ದು, ಯಾವ ತಾಲೂಕುಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಯಾವಾಗ ಪಡಿತರ ನೀಡಲಾಗುತ್ತದೆ ಎಂಬುದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ನಾಗರಾಜ್‌ ಅವರಿಗೆ ತಿಳಿಸಿದರು.

Advertisement

ಸಭೆಯಲ್ಲಿ ಕಡೂರು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್‌, ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ವಿಜಯ್‌ ಕುಮಾರ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ ಕುಮಾರ್‌, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಎಸ್‌. ಪೂವಿತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾ ಧಿಕಾರಿ ಡಾ| ಕುಮಾರ್‌, ನಗರಸಭೆ ಆಯುಕ್ತ ಚಂದ್ರಶೇಖರ್‌ ಮತ್ತಿತರರು ಇದ್ದರು.

 

18 ಅಕ್ರಮ ಮದ್ಯ ಪ್ರಕರಣ :  ಲಾಕ್‌ಡೌನ್‌ ವಿಧಿ ಸಿದ ನಂತರ ಜಿಲ್ಲೆಯಲ್ಲಿ 27 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅದರಲ್ಲಿ 18 ಅಕ್ರಮ ಮದ್ಯ ಮಾರಾಟಕ್ಕೆ ಸಂಬಂ ಧಿಸಿದ್ದು, 6 ಪ್ರಕರಣಗಳು ಲಾಕ್‌ ಡೌನ್‌ ಉಲ್ಲಂಘನೆಗೆ ಸಂಬಂಧಿಸಿವೆ. ಮೂರು ಪ್ರಕರಣಗಳು ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡಿದಕ್ಕೆ ಸಂಬಂಧಿಸಿದ್ದಾಗಿದೆ. ಲಾಕ್‌ಡೌನ್‌ ನಂತರ ಶೇ. 50ರಷ್ಟು ಅಪಘಾತ ಪ್ರಕರಣ ಮತ್ತು ಶೇ.75 ರಷ್ಟು ಕ್ರೈಂ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಾಗಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next