ಬೆಂಗಳೂರು: ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯುತ್ತಿದ್ದು ಯಾವುದೇ ಗೊಂದಲಗಳು ಅಥವಾ ಭಿನ್ನಾಭಿಪ್ರಾಯಗಳು ಯಾರಲ್ಲೂ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 100 ದಿನ ಸುರಕ್ಷಿತ ಹಾಗೂ ಯಾವುದೇ ಸಣ್ಣ ಅಹಿತಕರ ಘಟನೆ ಇಲ್ಲದಂತೆ ಆಡಳಿತ ನೀಡಿದ್ದೇವೆ. ಇದು ಮುಂದಿನ ಐದು ವರ್ಷಕ್ಕೆ ದಿಕ್ಸೂಚಿ ಎಂದು ಹೇಳಿದರು.
ಬಿಜೆಪಿಯವರು ಮೊದಲ ದಿನದಿಂದಲೇ ಸರ್ಕಾರದ ಬಗ್ಗೆ ಟೀಕೆಗಳು ಮಾಡುತ್ತಲೇ ಇದ್ದಾರೆ. ಸಾಲ ಮನ್ನಾ ಘೋಷಣೆ ಆದಾಗ ಸಾಧ್ಯವಾ ಎಂದು ಪ್ರಶ್ನಿಸಿದರು. ಆದರೆ, ಸರ್ಕಾರ ಹೇಳಿದಂತೆ ನಡೆದುಕೊಂಡಿದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ಪೂರೈಸಿದ ಸಂದರ್ಭದಲ್ಲಿ ಜೆಡಿಎಸ್ ಜಾಹೀರಾತು ನೀಡಿರುವ ಕುರಿತು ಪ್ರತಿಕ್ರಿಯಿಸಿ, ಅವರ ಪಕ್ಷದಿಂದ ಅವರು ಕೊಟ್ಟಿದ್ದಾರೆ. ನಮ್ಮ ಪಕ್ಷದಿಂದ ನಾವು ಕೊಟ್ಟಿದ್ದೇವೆ. ಇದರಲ್ಲಿ ವಿಶೇಷ ಏನೂ ಇಲ್ಲ. ಅದು ಸರ್ಕಾರದ ಜಾಹೀರಾತು ಅಲ್ಲ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೆಡಿಎಸ್ ನೀಡಿರುವ ಜಾಹೀರಾತು ಎಂದು ಹೇಳಿದರು.
ಸಿದ್ದುರಿಂದ ಫೋನ್ ಬಂತು: ಪತ್ರಿಕಾಗೋಷ್ಠಿ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಡಿ.ಕೆ.ಶಿವಕುಮಾರ್ ಅವರಿಗೆ ವರುಣಾ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸದ ವಿಚಾರದಲ್ಲಿ ದೂರವಾಣಿ ಕರೆ ಬಂದಿತ್ತು. ಡಿ.ಕೆ.ಶಿವಕುಮಾರ್ ಮಾತನಾಡುವಾಗ, ಹೌದು ಒಂದು ಕಡೆಯೇ ಆಗಿದೆ ಎಂದು ಹೇಳಿದರು. ಇದಕ್ಕೆ ಮಾಧ್ಯಮದವರು, ಒಂದು ಕಡೆ ಎಂದರೆ ಜೆಡಿಎಸ್ ಜಾಹೀರಾತು ವಿಚಾರವೇ ಎಂದಾಗ, ಅಯ್ಯೋ ಅದಲ್ಲಾ, ಬಿಡ್ರಿ. ಸಿದ್ದರಾಮಯ್ಯ ಅವರು ಆ ಬಗ್ಗೆ ಮಾತನಾಡುವುದೇ ಇಲ್ಲ. ವಿಶ್ವವಿದ್ಯಾಲಯಗಳಿಗೆ ನಾಮನಿರ್ದೇಶನ ವಿಚಾರದಲ್ಲಿ ಮೈಸೂರು ಭಾಗಕ್ಕೆ ಮಾತ್ರ ಆಗುವುದು ಬೇಡ. ರಾಜ್ಯದ ಎಲ್ಲ ಭಾಗಗಳಿಗೂ ಅವಕಾಶ ಕೊಡಿ ಎಂದು ಹೇಳಿದ್ದು ಎಂಬ ಸಮಜಾಯಿಷಿ ನೀಡಿದರು.