ಮಂಗಳೂರು: ಮಂಗಳೂರು ನಗರದ ಹೃದಯ ಭಾಗವನ್ನೂ ಒಳಗೊಂಡಂತೆ ಮಹಾನಗರ ಪಾಲಿಕೆಯ 37 ವಾರ್ಡ್‌ಗಳು ಹಾಗೂ ಮಂಗಳೂರು ತಾಲೂಕಿನ ಕೆಲವು ಪ್ರದೇಶಗಳನ್ನೊಳಗೊಂಡ ಪ್ರಮುಖ ಕ್ಷೇತ್ರ ಮಂಗಳೂರು ನಗರ ದಕ್ಷಿಣ. ಒಂದೊಮ್ಮೆ ಕಾಂಗ್ರೆಸ್‌ನ ಬಿಗಿಮುಷ್ಟಿಯಲ್ಲಿದ್ದ ಈ ಕ್ಷೇತ್ರ ಪ್ರಸ್ತುತ ಬಿಜೆಪಿ ತೆಕ್ಕೆಯಲ್ಲಿದೆ.
ಕ್ಷೇತ್ರದಲ್ಲಿ ಹಾಲಿ ಶಾಸಕ ವೇದವ್ಯಾಸ ಕಾಮತ್ ಬಿಜೆಪಿ ಯಿಂದ ಈ ಬಾರಿಯೂ ಸ್ಪರ್ಧಿಸುವುದು ಬಹುತೇಕ ಖಚಿತ. ಟಿಕೆಟ್ ಘೋಷಣೆ ಅಧಿಕೃತವಾಗಿ ಆಗಬೇಕಷ್ಟೇ. ಬಿಜೆಪಿಯಲ್ಲಿ ಬೇರೆ ಹೆಸರುಗಳು ಅಷ್ಟೊಂದು ದಟ್ಟವಾಗಿ ಕೇಳಿಬರುತ್ತಿಲ್ಲ.
ಕಾಂಗ್ರೆಸ್ ಇಲ್ಲಿ ಯಾವಾಗಲೂ ಪ್ರಬಲ ಪೈಪೋಟಿ ಕೊಡುವಂಥದ್ದು. ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿ ಯುವವರು ಯಾರು ಎನ್ನುವ ಕುತೂಹಲಕ್ಕೆ ಕೊನೆ ಹಾಡಿಲ್ಲ. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವವರ ಪೈಕಿ ಮಾಜಿ ಶಾಸಕ ಜೆ.ಆರ್.ಲೋಬೋ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ’ಸೋಜಾ ನಡುವೆ ಪೈಪೋಟಿ ಜೋರಾಗಿದೆ. ಪಕ್ಷದ ವರಿಷ್ಠರು ಯಾರು ಗೆಲ್ಲುವ ಕುದುರೆ? ಎಂಬ ಲೆಕ್ಕಾಚಾರದಲ್ಲಿ ಮುಳುಗಿರುವುದರ ಜತೆಗೆ, ರಾಜಕೀಯ ಕ್ಷೇತ್ರಕ್ಕೆ ಇನ್ನೂ ಪರಿಚಯವಾಗದ ಸಾಮಾಜಿಕ, ಧಾರ್ಮಿಕ ಚಟುವಟಿಕೆಯಲ್ಲಿ ನಿರತರಾಗಿರುವ ಯುವ ಮುಖವೊಂದನ್ನು ಪರಿಚಯಿಸಿದರೂ ಅಚ್ಚರಿ ಇಲ್ಲ.
ಜಿಲ್ಲೆಯಲ್ಲಿ ಬಿಲ್ಲವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ಈ ಕ್ಷೇತ್ರದ ಮೂಲಕ ಈಡೇರಿಸಲು ಪದ್ಮರಾಜ್ ಆರ್. ಅವರಿಗೆ ಅವಕಾಶ ನೀಡಿದರೂ ನೀಡಬಹುದು. ಶಾಲೆಟ್ ಪಿಂಟೋ, ಎ.ಸಿ. ವಿನಯ್‌ರಾಜ್, ಲಾರೆನ್ಸ್ ಡಿ’ಸೋಜಾ, ಆಶಿತ್ ಪಿರೇರಾ, ಮೆರಿಲ್ ರೇಗೋ, ವಿಶ್ವಾಸ್‌ಕುಮಾರ್ ದಾಸ್ ಅರ್ಜಿ ಸಲ್ಲಿಸಿದ ಇತರ ಆಕಾಂಕ್ಷಿ ಗಳು. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯನ್ನು ಗಮನಿಸಿ ತನ್ನ ಮುಂದಿನ ನಡೆ ನಿರ್ಧರಿಸುವುದಾಗಿ ಜೆಡಿಎಸ್ ಹೇಳಿದೆ. ಎಡಪಕ್ಷ, ಎಸ್‌ಡಿಪಿಐ ಸಹ ಇದೇ ಧಾಟಿಯಲ್ಲಿವೆ.
Related Articles
ಕ್ಷೇತ್ರದ ಚುನಾವಣ ಇತಿಹಾಸವನ್ನು ಗಮನಿಸಿದರೆ, ಕೊಂಕಣಿ ಭಾಷಿಗ ಮತದಾರರನ್ನು ಅಧಿಕ ಸಂಖ್ಯೆಯಲ್ಲಿ ಹೊಂದಿರುವ ಈ ಕ್ಷೇತ್ರದ ಮತದಾರರು ಕೊಂಕಣಿ ಭಾಷಿಗ ಅಭ್ಯರ್ಥಿಯನ್ನೇ ಕೆಳಮನೆಗೆ ಕಳುಹಿಸಿರುವುದು ಗಮನಾರ್ಹ ಸಂಗತಿ. ಮಂಗಳೂರು, ಮಂಗಳೂರು -1 ಎಂಬುದಾಗಿ ಗುರುತಿಸಲ್ಪಡುತ್ತಿದ್ದ ಈ ಕ್ಷೇತ್ರ 2008ರಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರವಾಗಿ ಪುನರ್ ವಿಂಗಡಣೆ ಯಾಯಿತು. 1952ರಿಂದ 1978ರ ವರೆಗೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಈ ಕ್ಷೇತ್ರ 1983ರಲ್ಲಿ ಬಿಜೆಪಿ ವಶವಾಗಿತ್ತು.
ಬಳಿಕ ಮತ್ತೆರಡು ಅವಧಿಗೆ ಕಾಂಗ್ರೆಸ್‌ಗೆ ಮಣೆ ಹಾಕಿದ್ದ ಇಲ್ಲಿನ ಮತದಾರರು 1994ರಿಂದ 2008ರ ವರೆಗೆ ಬಿಜೆಪಿಗೆ ಜೈ ಅಂದಿದ್ದರು. 2013ರಲ್ಲಿ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದ ಕಾಂಗ್ರೆಸ್ 2018ರ ಚುನಾ ವಣೆಯಲ್ಲಿ ಬಿಜೆಪಿಗೆ ಶರಣಾಯಿತು. ಹಾಗಾಗಿ ಇಲ್ಲಿ ಎರಡೂ ಪಕ್ಷಗಳು ಗೆಲ್ಲಲೇಬೇಕೆಂಬ ಜಿದ್ದಾಜಿದ್ದಿನಲ್ಲಿವೆ. ಹಾಲಿ ಆಡಳಿತದಲ್ಲಿರುವ ಬಿಜೆಪಿ ನಾಯಕರು ಗೆಲುವಿನ ಹುಮ್ಮಸ್ಸಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಕೇಂದ್ರದ ನಾಯಕರ ಸಮಾವೇಶ, ರೋಡ್ ಶೋ ಮೂಲಕ ಗೆಲು ವಿನ ವಿಶ್ವಾಸದಲ್ಲಿರುವ ಬಿಜೆಪಿ, ಇತ್ತೀಚೆಗಷ್ಟೇ ಕ್ಷೇತ್ರ ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮಕ್ಷಮದಲ್ಲಿ ಫಲಾನುಭವಿಗಳ ಸಮಾವೇಶವನ್ನು ಆಯೋಜಿಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತ್ತು.
ಕಾಂಗ್ರೆಸ್ ತಾನೇನೂ ಕಮ್ಮಿ ಇಲ್ಲ ಎಂಬಂತೆ ಈಗಾಗಲೇ ರಾಜ್ಯ ಮಟ್ಟದ ಪ್ರಜಾಧ್ವನಿ ಯಾತ್ರೆಯ ಬೃಹತ್ ಸಮಾ ವೇಶವನ್ನು ನಗರದ ಕೇಂದ್ರ ಭಾಗದಲ್ಲಿ ನಡೆಸಿ, ಪಕ್ಷದ ಹಿರಿಯ ನಾಯಕರನ್ನು ಕರೆಯಿಸಿ ಬಹಿರಂಗ ಸಮಾವೇಶದ ಮೂಲಕ ಗ್ಯಾರಂಟಿ ಕಾರ್ಡ್ ಜತೆಗೆ ಕರಾವಳಿಗೆ ಪ್ರತ್ಯೇಕ ಘೋಷಣೆಯನ್ನೂ ಮಾಡಿಸಿದೆ. ಇದು ಪಕ್ಷದ ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಿಸಿದೆ. ಪಕ್ಷದ ಟಿಕೆಟ್ ಆಕಾಂಕ್ಷಿ ನಾಯಕರು, ಕಾರ್ಯಕರ್ತರು ಕ್ಷೇತ್ರ ದುದ್ದಕ್ಕೂ ಬಿಜೆಪಿ ಸರಕಾರ ಮತ್ತು ನಾಯಕರ ಮೇಲಿನ ಭ್ರಷ್ಟಾಚಾರ ಆರೋಪ, ಬೆಲೆ ಏರಿಕೆ ವಿಷಯಗಳನ್ನು ವಿವ ರಿಸುತ್ತಾ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.
ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಈಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಅಧಿಕೃತ ಘೋಷಣೆಯ ಬಳಿಕವೇ ಮತಬೇಟೆಯ ಮೇಲಾಟ ಕಾಣಬಹುದಾಗಿದೆ.
~ ಸತ್ಯಾ ಕೆ.