ಸುಬ್ರಹ್ಮಣ್ಯ: ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕ ನಿಗದಿಯಾಗಿದೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಈಗಾಗಲೇ ಕೆಲಸ ಕಾರ್ಯಗಳನ್ನು ಆರಂಭಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಮಾಡಿ ಇನ್ನು ನಿರ್ಧಾರ ಹೈಕಮಾಂಡ್ ಗೆ ಕಳುಹಿಸಬೇಕಿದೆ. ಆದರೆ ಅಭ್ಯರ್ಥಿ ಆಯ್ಕೆಯಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.
ಅವರು ರವಿವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಪತ್ರಕರ್ತರ ಜತೆ ಮಾತನಾಡಿದರು.
ಸುಳ್ಯಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿ ಆಕಾಂಕ್ಷಿಗಳು ಇದ್ದಾರೆ. ಸ್ಪರ್ಧೆಗೆ ಆಕಾಂಕ್ಷೆ ಯಾರೂ ವ್ಯಕ್ತಪಡಿಸಬಹುದು. ಆದರೆ ನಿರ್ಧಾರವನ್ನು ಪಾರ್ಟಿ ಮಾಡಲಿದೆ. ಅದರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದ ಅವರು ರಾಜ್ಯದಲ್ಲಿ ಈ ಬಾರಿ 135 ಕ್ಕೂ ಅಧಿಕ ಸೀಟುಗಳನ್ನು ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಕ್ಷೇತ್ರದಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ಬಳಿಕ ಶ್ರೀ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಬ್ರಹ್ಮಣ್ಯ ದೇವಳದ ಮಾಸ್ಟರ್ ಪ್ಲಾನ್ ಸಮಿತಿಯ ಸದಸ್ಯ ಮನೋಜ್ ಎಸ್, ಸುಬ್ರಹ್ಮಣ್ಯ ಬಿಜೆಪಿ ಮುಖಂಡ ಶ್ರೀಕುಮಾರ್, ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮ ರಾವ್, ಸೀಮಂತ ಜೋಳದಪ್ಪಗೆ, ವ್ಯವಸ್ಥಾಪನ ಸಮಿತಿ ಸದಸ್ಯ ಶೋಭಾ ಗಿರಿಧರ್, ಮುಂತಾದವರು ಉಪಸ್ಥಿತರಿದ್ದರು.