ಹರಪನಹಳ್ಳಿ: ನಾಮ ಹಲವಾದರೂ ದೇವರ ಮೂಲ ಸ್ವರೂಪ ಒಂದೇ ಆಗಿದೆ. ದೇವಸ್ಥಾನಗಳು ನಮ್ಮ ಧರ್ಮ, ಸಂಸ್ಕೃತಿಯ ಕೇಂದ್ರಗಳಾಗಿವೆ. ಆದರೆ ಧರ್ಮ, ದೇವರ ಹೆಸರಲ್ಲಿ ಸಂಘರ್ಷ ಬೇಡ ಎಂದು ಶ್ರೀಶೈಲ ಪೀಠದ ಡಾ| ಚೆನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮಂಜುನಾಥ ಸ್ವಾಮಿ ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಮಂಜುನಾಥಸ್ವಾಮಿ, ಶ್ರೀ ವಿಜ್ಞೇಶ್ವರ ಮತ್ತು ಶ್ರೀ ಚೌಡೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತರು ಹೆಚ್ಚಾದಂತೆ ಕ್ಷೇತ್ರಗಳು ಬೆಳೆಯುತ್ತವೆ. ದೇವರು ಇಲ್ಲದ ಜಾಗವಿಲ್ಲ, ಹಾಗಾದರೆ ದೇವಸ್ಥಾನ ಏಕೆ ಕಟ್ಟಬೇಕು ಎನ್ನಬಹುದು. ಆದರೆ ದೇವರು ಪ್ರಕಟವಾಗುವುದು ದೇವಸ್ಥಾನದಲ್ಲಿರುವ ಮೂರ್ತಿಗಳ ಮೂಲಕ ಎಂದ ಶ್ರೀಗಳು, ಭಾರತ ಧರ್ಮ ಪ್ರಧಾನವಾದ ದೇಶ. ಇಲ್ಲಿ ಧರ್ಮ ಮತ್ತು ದೇವರಿಗೆ ಇರುವಷ್ಟು ಮಹತ್ವ ಬೇರೆ ಯಾವುದಕ್ಕೂ ಇಲ್ಲ ಎಂಬುದನ್ನು ಜನತೆ ತೋರಿಸುತ್ತಾ ಬಂದಿದ್ದಾರೆ. ಭಾರತದಲ್ಲಿ ಇದ್ದಷ್ಟು ದೇವಸ್ಥಾನಗಳು ಜಗತ್ತಿನಲ್ಲಿ ಎಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಗ್ರಾಮಗಳು ಅಭಿವೃದ್ಧಿ ಕಾಣದಿದ್ದರೂ ದೇವಸ್ಥಾನಗಳು ಕಡ್ಡಾಯವಾಗಿ ಇರುತ್ತವೆ. ಇದಕ್ಕೆ ಜನರ ಶ್ರದ್ಧೆ, ವಿಶ್ವಾಸ ಕಾರಣವಾಗಿದೆ. ಯಾರ ಹಣೆಯ ಮೇಲೆ ವಿಭೂತಿ ಇಲ್ಲವೊ ಹಾಗೂ ದೇವಾಲಯವಿಲ್ಲದ ಊರಿಗೆಧಿಕ್ಕಾರ ಎಂದು ವೇದ ಹೇಳುತ್ತದೆ ಎಂದು ಅವರು ಹೇಳಿದರು. ಹರಪನಹಳ್ಳಿ ಸುರಪುರ ಮಠದ ಕೊಟ್ರೇಶಯ್ಯಸ್ವಾಮಿ ಪ್ರಸ್ತಾವಿಕ ಮಾತನಾಡಿದರು. ಶ್ರೀಶೈಲ ಜಗದ್ಗುರುಗಳನ್ನು ಗ್ರಾಮದ ಹೊರವಲಯದಲ್ಲಿ ಸುಮಂಗಲೆಯರು ಪೂರ್ಣ ಕುಂಭ ಹಾಗೂ ಕಳಸಗಳೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನೂತನ ಶಿಲಾಮೂರ್ತಿಗಳ ದಾನಿಗಳನ್ನು ಸನ್ಮಾನಿಸಲಾಯಿತು.
ದೇವಸ್ಥಾನದ ಧರ್ಮಕರ್ತ ಮಂಜುನಾಥ ಸ್ವಾಮಿ ನೇತೃತ್ವ ವಹಿಸಿದ್ದರು. ಹಿರೇಹಡಗಲಿ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ, ಕೂಲಹಳ್ಳಿ ಗೋಣಿ ಬಸವೇಶ್ವರ ಮಠದ ಪಟ್ಟದ ಚಿನ್ಮಯ ಸ್ವಾಮೀಜಿ, ವಕೀಲ ಗೋಣಿಬಸಪ್ಪ ಇತರರು ಇದ್ದರು