Advertisement

ಸೌಕರ್ಯವಿಲ್ಲದೆ ಸೊರಗುತ್ತಿರುವ ಶಾಲೆ

08:44 AM Jul 29, 2019 | Suhan S |

ಬೈಲಹೊಂಗಲ: ರಾಜ್ಯ ಸರಕಾರ ಶಾಲೆಗಳ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದರೂ ಸಹ ಸರಿಯಾಗಿ ಸದ್ಬಳಕೆಯಾಗುತ್ತಿಲ್ಲ ಎಂಬುದಕ್ಕೆ ಹಿರೇಬೂದನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಉದಾಹರಣೆ. ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಶಿಕ್ಷಕರ ನಿರ್ಲಕ್ಷ್ಯದಿಂದ ಶಾಲೆ ಆವರಣ ಸಮಸ್ಯೆಗಳ ತಾಣವಾಗಿದೆ.

Advertisement

ಹಿರೇಬೂದನೂರ ಗ್ರಾಮದಲ್ಲಿರುವ ಸರಕಾರಿ ಶಾಲೆಗೆ ನೀವೆನಾದರೂ ಬಂದರೆ ಮೂಗು ಮುಚ್ಚಿಕೊಳ್ಳಬೇಕು. ಇನ್ನು ಶಾಲಾ ಕಟ್ಟಡ ಆಗಲೋ ಈಗಲೋ ಬೀಳುವ ಸ್ಥಿತಿಯಿದೆ. ನೀರಿಲ್ಲದ ಜಲಕುಂಬ ಇದ್ದೂ ಇಲ್ಲದಂತಾಗಿದೆ. ಶಾಲೆಗೆ ನೀರಿನ ಪೂರೈಕೆ ಇಲ್ಲದಿರುವುದರಿಂದ ಮಕ್ಕಳು ನೀರು ತಂದು ಕುಡಿಯಬೇಕು. ಇಲ್ಲಿಯ ಶೌಚಾಲಯದಲ್ಲಿ ಅಸ್ವಚ್ಛತೆ ತಾಂಡವಾಡುತ್ತಿದೆ. ಕೊಠಡಿಯಲ್ಲಿ ಪಾಟೀಕಲ್ಲು ಒಡೆದು ಹೋಗಿವೆ. ಸಮಯಕ್ಕೆ ಸರಿಯಾದ ಬಾರದ ಶಿಕ್ಷಕರು. ಈ ಎಲ್ಲ ಸಮಸ್ಯೆಗಳಿಂದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ಶಿಕ್ಷಕರೇ ಶಾಲೆಗೆ ಚಕ್ಕರ್‌: ಹಿರೇಬೂದನೂರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸುಮಾರು 463 ವಿದ್ಯಾರ್ಥಿಗಳು ಇದ್ದಾರೆ. 12 ಶಿಕ್ಷಕರಿದ್ದರೂ ಸಹ ದಿನಕ್ಕೆ ನಾಲ್ಕೈದು ಶಿಕ್ಷಕರು ರಜೆ ಇರುತ್ತಾರೆ. ಇದರಿಂದ ವಿದ್ಯಾರ್ಥಿಗಳು ತರಗತಿಗಿಂತ ಶಾಲಾ ಆವರಣದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂಬುದು ಎಸ್‌ಡಿಎಂಸಿ ಅಧ್ಯಕ್ಷ ಫಕೀರಪ್ಪ ತಳವಾರ ಆರೋಪ.

ಅಸ್ವಚ್ಛತೆ ತಾಂಡವ: ಇನ್ನು ಶಾಲಾ ಆವರಣ ಅಸ್ವಚ್ಛತೆಯಿಂದ ಕೂಡಿದ್ದು, ಅಲ್ಲಿಯೇ ಬಿಸಿಯೂಟ ಅಡುಗೆ ಮಾಡುವುದರಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಶೌಚಾಲಯ ಬಳಿ ಕಿಡಿಗೇಡಿಗಳು ಸಾರಾಯಿ ಬಾಟಲಿ, ಕಲ್ಲು, ಮುಳ್ಳು ಹಾಕಿರುವುದರಿಂದ ಅಲ್ಲಿ ಹೋಗಲು ಸಾಧ್ಯವಾಗದ್ದರಿಂದ ವಿದ್ಯಾರ್ಥಿಗಳು ಶೌಚಕ್ಕೆ ಅನಾನುಕೂಲವಾಗಿದೆ.

ಶಾಲೆಯ ಕಾಂಪೌಂಡ್‌ ಸುತ್ತ ಕೊಳಚೆ, ಗಿಡಕಂಟಿ ಬೆಳೆದಿರುವುದರಿಂದ ಇದೇನು ಶಾಲೆಯೋ ಹಾಳು ಕೊಂಪೆಯೋ ಎನ್ನುವಂತಾಗಿದೆ. ಶಾಲೆಯ ಕಾಂಪೌಂಡ್‌ ಬಳಿ ಕಸದ ತೊಟ್ಟಿ ತುಂಬಿ ತುಳುಕುತ್ತಿದ್ದರೂ ವಿಲೇವಾರಿ ಮಾಡದಿರುವುದರಿಂದ ಗಬ್ಬೆದ್ದು ನಾರುತ್ತಿದೆ ಎಂದು ಗ್ರಾಮಸ್ಥರಾದ ವಾಸುದೇವ ಮರಗಾಲ, ಭೀರಪ್ಪ ತಳವಾರ, ರಂಗೇಶ ಗಿರೇನ್ನವರ ದೂರಿದ್ದಾರೆ.

Advertisement

ಈ ಶಾಲೆಯ ಸಮಸ್ಯೆಗಳ ಬಗ್ಗೆ ಬಿಇಒ, ಸಿಆರ್‌ಪಿ, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಶಾಲೆ ಸುಧಾರಣೆ ಕಂಡಿಲ್ಲ. ಶತಮಾನೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿರುವ ಶಾಲೆಗೆ ಇಂಥ ದುರ್ಗತಿ ಬಂದಿರುವುದು ವಿಪರ್ಯಾಸ. ಇನ್ನಾದರೂ ಮೇಲಧಿಕಾರಿಗಳು, ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಶಾಲೆ ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಹಿರೇಬೂದನೂರ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ ಬಗ್ಗೆ ಗೊತ್ತಾಗಿದೆ. ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ವಚ್ಛತೆ ಬಗ್ಗೆ ಮುಖ್ಯಶಿಕ್ಷಕರು, ಬಿಇಒ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ.• ಮಹಾಂತೇಶ ಕೌಜಲಗಿ,ಶಾಸಕ

ಶಾಲೆಯ ವಾತಾವರಣ ಸಂಪೂರ್ಣ ಹಾಳಾಗಿದೆ. ಕೂಡಲೇ ಶಾಲೆ ಕಟ್ಟಡ ದುರಸ್ತಿಗೆ, ಆವರಣ ಸ್ವಚ್ಛತೆ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು.• ನಿಂಗಪ್ಪ ಕುಂಟಮಾಯನ್ನವರ, ಹಿರೇಬೂದನೂರ ಗ್ರಾಮಸ್ಥ

 

•ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next