ಬಾಗಲಕೋಟೆ: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಅಧೀನದಲ್ಲಿ ನಗರದಲ್ಲಿ ನಡೆಯುತ್ತಿರುವ ಎಸ್. ಆರ್. ಕಂಠಿ ಅನುಭಾವ ಸಂಗಮ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಬಾಗಲಕೋಟೆಯಲ್ಲೇ ಮುಂದುವರಿಸಬೇಕು ಎಂದು ಎಬಿವಿಪಿ ಒತ್ತಾಯಿಸಿದೆ. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಾಗಲಕೋಟೆ ಶಾಖೆಯಿಂದ ವಿದ್ಯಾರ್ಥಿಗಳ ವಿವಿಧ ಸಮಸ್ಯೆ ಬಗೆಹರಿಸುವಂತೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.
ಎಸ್‌ಆರ್ ಕಂಠಿ ಅನುಭಾವ ಸಂಗಮ ಸ್ನಾತಕೋತ್ತರ ಕೇಂದ್ರವನ್ನು ಬಾಗಲಕೋಟೆ ನಗರದಲ್ಲಿ ಮುಂದುವರಿಸಬೇಕು. ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಸಮಯಕ್ಕೆ ಸರಿಯಾಗಿ ವಿಶ್ವವಿದ್ಯಾಲಯ ಕಾಲೇಜುಗಳಿಗೆ ತಲುಪಿಸಬೇಕು. ಪ್ರವೇಶದ ಸಮಯದಲ್ಲಿ ಆನ್‌ಲೈನ್‌ನಲ್ಲಿ ಆಗಿರುವ ಡಬಲ್ ಹಾಗೂ ಮಲ್ಟಿಪಲ್ ಪೇಮೆಂಟ್ ಗಳನ್ನು ವಿದ್ಯಾರ್ಥಿಗಳಿಗೆ ಕೂಡಲೇ ಹಿಂತಿರುಗಿಸಬೇಕು. ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ವರ್ಗಾವಣೆ ಹೊಂದುವುದು ವಿದ್ಯಾರ್ಥಿಗಳ ಹಕ್ಕಾಗಿದ್ದು, ಈಗಿರುವ 5 ಸಾವಿರ ಶುಲ್ಕ ಬಡವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಆದ್ದರಿಂದ ವರ್ಗಾವಣೆ ಶುಲ್ಕವನ್ನು ಕಡಿಮೆಗೊಳಿಸಬೇಕು.
ಘಟಿಕೋತ್ಸವ ಪ್ರಮಾಣಪತ್ರವನ್ನು ಕಾಲೇಜಿಗೆ ಅಥವಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವೇ ಶೀಘ್ರವಾಗಿ ತಲುಪಿಸಬೇಕು ಎಂದು ಆಗ್ರಹಿಸಿದರು. ಪ್ರವೇಶ ಹಾಗೂ ಪರೀಕ್ಷೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಡವಾದಾಗ ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ದಂಡ ವಿಧಿಸಬೇಕು. ಈಗಿರುವ 1500 ರೂ.ಗಳ ದಂಡ ಅಮಾನವೀಯವಾಗಿದೆ. ತಕ್ಷಣವೇ ಅದನ್ನು ಕಡಿಮೆಗೊಳಿಸಬೇಕು. ರಾಜ್ಯದ ಬೇರೆ ವಿಶ್ವವಿದ್ಯಾಲಯಗಳು ಕೋವಿಡ್-19ರ ಸಮಯದಲ್ಲಿ ಶೇ.50 ಪರೀಕ್ಷಾ ಶುಲ್ಕವನ್ನು ಮಾತ್ರ ಪಡೆದಿವೆ. ಆದರೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶೇ.100 ಶುಲ್ಕ ಪಡೆದಿದೆ. ಆದ್ದರಿಂದ ತಕ್ಷಣವೇ ಶೇ.50 ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹಿಂತಿರುಗಿಸಬೇಕು.
ವಿಶ್ವವಿದ್ಯಾಲಯವು ಸುತ್ತೋಲೆ, ಯಾವುದೇ ಸೂಚನೆಗಳನ್ನು ಸಾಕಷ್ಟು ಮುಂಚಿತವಾಗಿ ಹಾಗೂ ವ್ಯವಸ್ಥಿತವಾಗಿ ನೀಡಬೇಕು ಎಂದು ಒತ್ತಾಯಿಸಿದರು. ಎಬಿವಿಪಿ ಕರ್ನಾಟಕ ರಾಜ್ಯ ಹಾಸ್ಟೆಲ್ ಪ್ರಮುಖ ಪ್ರಕಾಶ್ ಪೂಜಾರ, ಜಿಲ್ಲಾ ಸಂಚಾಲಕ ಉನ್ನತ ಬೇವಿನಕಟ್ಟಿ, ತಾಲೂಕು ಸಂಚಾಲಕ ಪ್ರಶಾಂತ್ ಮುರನಾಳ, ಕಾರ್ಯಕರ್ತರಾದ ಹಯವದನ ದೇಸಾಯಿ, ನಿಖೀಲ್ ಹೆಬ್ಟಾಳ, ಫನ್ನಿ ದೇಸಾಯಿ, ಶ್ರೇಯಸ್ ಶೆಟ್ಟಿ, ಧೀರಜ್ ವರ್ನೆàಕರ, ಜ್ಯೋತಿ ಸಜ್ಜನ, ಭವಾನಿ, ಸ್ವಸ್ತಿಕ್ ಶೆಟ್ಟಿ, ಚಂಡಕ, ವೈಜಿನಾಥ ಮುಂತಾದವರು ಉಪಸ್ಥಿತರಿದ್ದರು.