ಹಾಸನ: ಜಿಲ್ಲೆಯಲ್ಲಿ ಹಕ್ಕಿ ಜ್ವರ ಇಲ್ಲ. ಮಾಂಸಾಹಾರಿಗಳು ಕೋಳಿ ಮಾಂಸ ತಿನ್ನಲು ಹೆದರಬೇಕಾಗಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಬಿ.ಎಂ.ವಿಜಯ್ ಸ್ಪಷ್ಟಪಡಿಸಿದರು. ಹಾಸನ ತಾಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬೇರೆ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಹಕ್ಕಿಜ್ವರ ಇದುವರೆಗೂ ದೃಢಪಟ್ಟಿಲ್ಲ. ಜಿಲ್ಲೆಯಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಧೈರ್ಯವಾಗಿ ಕೋಳಿ ಮಾಂಸ ತಿನ್ನಬಹುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕ್ಷಯ ಮತ್ತು ಚಿಕೂನ್ ಗುನ್ಯಾ ಗಣನೀಯವಾಗಿ ಕಡಿಮೆಯಾಗಿದೆ. ಕೋವಿಡ್ ಆವರಿಸಿದ ನಂತರ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಟ್ಟಿದ್ದರಿಂದ ಹಲವು ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದಿವೆ. ಗರ್ಭೀಣಿ ಯರೂ ಎಚ್ಚರಿಕೆ ವಹಿಸಿದ ಕಾರಣ ಅವರಲ್ಲೂ ಆರೋಗ್ಯ ಸುಧಾರಿಸಿದೆ ಎಂದು ತಿಳಿಸಿದರು.
ಲಸಿಕೆಯಿಂದ ಅಡ್ಡಪರಿಣಾಮ ಇಲ್ಲ: ಕೋವಿಡ್ ವಿರುದ್ಧ ಹೋರಾಡುವ ಲಸಿಕೆ ಹಾಕಲು ಸರ್ಕಾರ ಈಗಾಗಲೇ ಚಾಲನೆ ನೀಡಿದೆ. ಲಸಿಕೆ ಪಡೆಯು ವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಲಸಿಕೆ ಪಡೆದ ದಿನ ರಾತ್ರಿ ವೇಳೆ ಸಲ್ಪ ಮೈಕೈ ನೋವು ಮತ್ತು ಜ್ವರ ಬರಬಹುದಷ್ಟೇ ಎಂದು ಸ್ಪಷ್ಟಪಡಿಸಿದರು. ಸಾಂಕ್ರಾಮಿಕ ರೋಗವೂ ನಿಯಂತ್ರಣಕ್ಕೆ: ಗರ್ಭೀಣಿಯರು, ಹಾಲುಣಿಸುವ ತಾಯಂದಿರು ಹಾಗೂ 18 ವರ್ಷ ಒಳಗಿನವರಿಗೆ ಕೋವಿಡ್ ಲಸಿಕೆ ಹಾಕುವಂತಿಲ್ಲ. ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ಗೆ ಲಸಿಕೆ ಹಾಕಲಾಗುತ್ತಿದೆ. ಮುಂದಿನ ಹಂತದಲ್ಲಿ ಸಾರ್ವಜನಿಕರಿಗೂ ನೀಡಲಾಗುವುದು.
ಇದನ್ನೂ ಓದಿ:ಉದ್ಯೋಗ ಖಾತ್ರಿಯಿಂದ ಜೀವನ ಹಸನು
ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋವಿಡ್ ಅನ್ನು ಶೇ.80 ತಡೆಗಟ್ಟಬಹುದಾಗಿದೆ. ಲಸಿಕೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗ ಕಾಲಕ್ರಮೇಣ ಕಡಿಮೆಯಾಗುತ್ತದೆ. ಅದೇ ರೀತಿ ಕೊರೊನಾವೂ ನಿಯಂತ್ರಣಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಬಗ್ಗೆ ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ತಾಪಂ ಅಧ್ಯಕ್ಷೆ ಎಚ್.ಕೆ.ರಂಜಿನಿ, ಉಪಾಧ್ಯಕ್ಷೆ ಬೇಬಿ, ಇಒ ಡಾ.ಕೆ.ಎಲ್.ಯಶವಂತ್ ಸಭೆಯಲ್ಲಿ ಉಪಸ್ಥಿತರಿದ್ದರು.