ದೇವನಹಳ್ಳಿ: ದೇಶದ ಗಡಿ ಕಾಯುವ ಯೋಧರಂತೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದದ್ದು. ಪೊಲೀಸರ ಶ್ರಮ ಅವಿರತವಾಗಿದ್ದು, ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಹುತಾತ್ಮರಾದ ಪೊಲೀಸರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ಹೇಳಿದರು.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಬ್ಯಾಡರಹಳ್ಳಿಯಲ್ಲಿರುವ ಪೋಲೀಸ್ ಕವಾಯಿತು ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ನಗರ ಜಿಲ್ಲೆಯ ವತಿಯಿಂದ ಪೊಲೀಸ್ ಸಂಸ್ಮರಣೆ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಪುತ್ಥಳಿಗೆ ಗೌರವ ಸಮರ್ಪಿಸಿ ಮಾತನಾಡಿದರು.
ಪೊಲೀಸ್ ಮತ್ತು ಖಾಕಿ ಎಂದರೆ ಎಲ್ಲರಲ್ಲೂ ಸುರಕ್ಷತೆಯ ಮನೋಭಾವ ಮೂಡಬೇಕು. ಪೊಲೀಸರು ಶತ್ರುಗಳ ವಿರುದ್ಧ ನಿಂತು ಹೋರಾಡಿ ಪ್ರಾಣ ಕಳೆದುಕೊಳ್ಳುತ್ತಾರೆ. ಪೊಲೀಸ್ ಕಾರ್ಯಕ್ಕಿಂತ ಶ್ರೇಷ್ಠ ಸೇವೆ ಮತ್ತೂಂದಿಲ್ಲ. ಗಡಿಯಲ್ಲಿ ದೇಶ ಕಾಯುವ ಸೈನಿಕರು ಹೇಗೋ, ಅದೇ ರೀತಿ ಸಮಾಜದ ಒಳಗೆ ದಿನದ 24 ಗಂಟೆಯೂ ಜನಸಾಮಾನ್ಯರ ರಕ್ಷಣೆಯಲ್ಲಿ ಕಾರ್ಯನಿರತವಾಗಿರುವ ಪೊಲೀಸರು ಕೂಡ, ಸಮಾಜ ರಕ್ಷಿಸುವ ಸೈನಿಕರಾಗಿದ್ದಾರೆ.
ಸಮಾಜದಲ್ಲಿ ಜನತೆ ನೆಮ್ಮದಿಯಿಂದ ನಿದ್ರಿಸುತ್ತಾರೆ ಎಂದರೆ ಅದಕ್ಕೆ ಪೊಲೀಸರ ಶ್ರಮ ಕಾರಣ ಎಂದು ಪೊಲೀಸರ ಕಾರ್ಯವನ್ನು ಶ್ಲಾ ಸಿದರು. ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಮಾತನಾಡಿ, ಪೊಲೀಸರು ಮತ್ತು ಖಾಕಿ ದರ್ಪದ ಸಂಕೇತವಾಗಬಾರದು. ಅದು ಬದ್ಧತೆ ಮತ್ತು ಭದ್ರತೆಯ ಸಂಕೇತವಾಗಬೇಕು. ಪ್ರತಿಯೊಬ್ಬರೂ ಶಾಂತಿಯಿಂದ ನೆಲಸಲು ಪೋಲೀಸರ ಪಾತ್ರ ಮುಖ್ಯವಾಗಿದೆ. ನಾಗರೀಕ ಸುರಕ್ಷತೆ ಮತ್ತು ಸಂರಕ್ಷಣೆಯಲ್ಲಿ ಪೋಲೀಸರ ಪಾತ್ರ ಪ್ರಮುಖವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ರವಿ ಚೆನ್ನಣ್ಣವರ್ ಮಾತನಾಡಿ, ಕರ್ತವ್ಯದ ವೇಳೆ ಮೃತರಾದ ಪೊಲೀಸರನ್ನು ಸ್ಮರಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 292 ಮಂದಿ ಪೊಲೀಸರು ದೇಶದಲ್ಲಿ ಮೃತಪಟ್ಟಿದ್ದರೆ, ರಾಜ್ಯದಲ್ಲಿ 12 ಮಂದಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ನಾವು ಕಾನೂನು ತಿಳಿಯದಿದ್ದರೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐಜಿ ಶರತ್ ಚಂದ್ರ, ಅಡಿಷನಲ್ ಎಸ್‌ಪಿ ಸಜಿತ್, ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ರಾಘವ ಗೌಡ, ಮತ್ತಿತರರು ಇದ್ದರು.