ಹುಬ್ಬಳ್ಳಿ: ಯಾರು ಏನೇ ಹೇಳಿಕೆ ನೀಡಿದರೂ ಮೈತ್ರಿ ಸರ್ಕಾರ ಸುಭದ್ರವಾಗಿ ಇರಲಿದೆ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಅವರು ಮೈಸೂರು ಕ್ಷೇತ್ರ ತಮಗೆ ಬೇಕು ಎಂದು ಕೇಳಿದ್ದರು. ಆದರೆ, ನಮಗೆ ಆ ಕ್ಷೇತ್ರ ಬೇಕು ಎಂದಾಗ ತುಮಕೂರು ಕ್ಷೇತ್ರ ನೀಡಿ ಎಂದರು. ನಾವು ಒತ್ತಾಯ ಮಾಡಿ ಅವರಿಗೆ ತುಮಕೂರು ಕ್ಷೇತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ಅವರನ್ನು ಭೇಟಿಯಾದ ವೇಳೆ ನಾನು ಮೈತ್ರಿ ಸರ್ಕಾರದ ಬಗ್ಗೆ ಯಾವ ಅಸಮಾಧಾನ ಸಹ ತೋಡಿಕೊಂಡಿಲ್ಲ. ಅಲ್ಲದೆ, ನಮ್ಮಿಬ್ಬರ ನಡುವೆ ಏನು ಚರ್ಚೆ ನಡೆದಿದೆ ಎನ್ನುವುದೇ ಮೂರನೇ ವ್ಯಕ್ತಿಗೆ ಗೊತ್ತಿಲ್ಲ. ಹಾಗೆಯೇ, ನಾವು ಯಾರೊಂದಿಗೂ ಈ ವಿಷಯ ಹಂಚಿಕೊಂಡಿಲ್ಲ. ಹೀಗಿದ್ದಾಗ ಮಾಧ್ಯಮದಲ್ಲಿ ಊಹಾಪೋಹದ ಸುದ್ದಿ ಹರಿದಾಡುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಕುಮಾರಸ್ವಾಮಿ ಈ ಹಿಂದೆ ಸಿಎಂ ಆಗಿದ್ದಾಗಲೂ ಗ್ರಾಮ ವಾಸ್ತವ್ಯ ಮಾಡಿದ್ದರು. ಈಗ ಮೈತ್ರಿ ಸರ್ಕಾರವಿದ್ದು, ಈಗಲೂ ಅದನ್ನು ಮಾಡುತ್ತಿದ್ದಾರೆ. ಅವರು ಮೈತ್ರಿ ಸರ್ಕಾರದ ಸಿಎಂ ಆಗಿರುವುದರಿಂದ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳೂ ಗ್ರಾಮ ವಾಸ್ತವ್ಯ ಲಾಭವಾಗಲಿದೆ ಎಂದರು.
ಸೋಲಿನ ಪರಾಮರ್ಶೆಗೆ ಶೋಧನಾ ಸಮಿತಿ
ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ಸೋಲಿಗೆ ಕಾರಣ ಏನೆಂದು ಹುಡುಕಲು ಶೋಧನಾ ಸಮಿತಿ ರಚಿಸಿದ್ದೇವೆ. ಮುಂದಿನ ತಿಂಗಳು ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಪುನರ್ರಚನೆ ಮಾಡಲು ಮುಂದಾಗುತ್ತಿದ್ದೇನೆ.
ಬಲವರ್ಧನೆಗೆ ಯಾವೆಲ್ಲ ಯೋಜನೆ ಹಾಕಿಕೊಳ್ಳಬೇಕು ಅವೆಲ್ಲವನ್ನು ಕೈಗೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ಹೇಳಿದರು.