Advertisement

ಕಾಂಗ್ರೆಸ್‌ ಆಡಳಿತ ವಿರೋಧಿ ಅಲೆ ಇಲ್ಲ

09:09 AM Nov 24, 2017 | Team Udayavani |

ವಿಧಾನಸಭೆ: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಂಬುದು ಇಲ್ಲ. ಉತ್ತರ ಕರ್ನಾಟಕ ಭಾಗದವರೂ ಸೇರಿ ಸಮಗ್ರ ಕರ್ನಾಟಕದ ಜನ ನಮ್ಮ ಸರ್ಕಾರದ ಸಾಧನೆ ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ರಾಜಕೀಯ ಮಾತನಾಡಲ್ಲ ಎಂದು ಹೇಳುತ್ತಾ ರಾಜಕೀಯವಾಗಿಯೇ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ, ಐದು ವರ್ಷ ಆಡಳಿತ ನಡೆಸಿದ ಸರ್ಕಾರದ ವಿರುದ್ಧ ಸಹಜವಾಗಿ ಆಡಳಿತ ವಿರೋಧಿ ಅಲೆ ಇರುವುದು ಸಹಜ. ಆದರೆ, ನಮ್ಮ ಸರ್ಕಾರಕ್ಕೆ ಆ ರೀತಿಯ ಅಲೆ ಯಾವುದೂ ಇಲ್ಲ ಎಂದು ಪ್ರತಿಪಾದಿಸಿದರು. ಮಿಷನ್‌ 150 ಎಂಬುದು ನಿಮ್ಮ ಭ್ರಮೆ. ಬಿಜೆಪಿಯ ಮಿಷನ್‌ 150 ಏನಾಗಿದೆ ಎಂಬುದು ಗೊತ್ತಿದೆ. ಮಿಷನ್‌ 150 ಹೋಗಿ 50 ಆಗಲಿದೆ ಎಂಬ ಆತಂಕದಿಂದ ಬಿಜೆಪಿಯವರು ಹತಾಶರಾಗಿ ನಿರಾಧಾರ ಆರೋಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಗೇಯೋ ಎತ್ತಿಗೆ ಮೇವು ಹಾಕಿ ಎಂಬುದು ನಮ್ಮ ಮನವಿ. ಐದು ವರ್ಷ ನಿಮ್ಮ ನಿರೀಕ್ಷೆಗೆ ತಕ್ಕಂತೆ ನುಡಿದಂತೆ ನಡೆದಿದ್ದೇವೆ. ಮುಂದೆಯೂ ಆಶೀರ್ವಾದ ಮಾಡಿ ಎಂದು ಜನರ ಮುಂದೆ ಹೋಗುತ್ತಿದ್ದೇವೆ ಎಂದು ಹೇಳಿದರು. ಮುಂದಿನ ಬಾರಿ ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿಕೊಳ್ಳಿ. ಅದಕ್ಕೇನೂ ತಕರಾರಿಲ್ಲ. ಏಕೆಂದರೆ ನೀವು ಆ ರೀತಿ ಹೇಳಲೇ  ಬೇಕು. ಆದರೆ, ಮಿಷನ್‌ 150  ಎಂದು ತಿರುಗಾಡುತ್ತಿರಬೇಡಿ ಎಂದು ಬಿಜೆಪಿಯವರಿಗೆ ಟಾಂಗ್‌ ನೀಡಿದರು.

ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪ ಚುನಾವಣೆಯಲ್ಲಿ ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗಿದರು. ಚುನಾವಣೆ ಸಿದ್ದರಾಮಯ್ಯ -ಯಡಿಯೂರಪ್ಪ ನಡುವೆ, ಸಿದ್ದರಾಮಯ್ಯ- ಶ್ರೀನಿವಾಸ  ಪ್ರಸಾದ್‌ ನಡುವೆ, ಮುಂದಿನ ವಿಧಾನಸಭೆ ಚುನಾವಣೆ ದಿಕ್ಸೂಚಿ ಎಂದೆಲ್ಲಾ ಹೇಳಿದರು. ಫಲಿತಾಂಶಕ್ಕೆ ಮುನ್ನಾದಿನ ವಿಜಯೋತ್ಸವ ಆಚರಿಸಲು ಹೋಗುತ್ತಿದ್ದೇವೆ ಎಂದು ಹೇಳಿದರು. ಇವರ ಅಬ್ಬರ ನೋಡಿ ನನಗೂ ಒಮ್ಮೆ ಆತಂಕವಾಗಿತ್ತು. ಆದರೆ, ನಾವು ಕೆಲಸ ಮಾಡಿ ಅದಕ್ಕೆ ಕೂಲಿ ಕೊಡಿ ಎಂದು ಕೇಳಿದ್ದೇವು. ಜನರ ಆಶೀರ್ವಾದ ಸಿಕ್ಕಿತು ಎಂದು ಹೇಳಿದರು.

ಸಾಲಮನ್ನಾ: ರಾಜ್ಯದಲ್ಲಿ ರೈತರ 52 ಸಾವಿರ ಕೋಟಿ ರೂ.ಅಲ್ಪಾವಧಿ ಸಾಲ ವಿದ್ದು ಆ ಪೈಕಿ 10730 ಕೋಟಿ ರೂ. ಸಹಕಾರ ಬ್ಯಾಂಕುಗಳಲ್ಲಿನ ಸಾಲದ ಮೊತ್ತ. ಅದರಲ್ಲಿ ರಾಜ್ಯ ಸರ್ಕಾರದಿಂದ 22 ಲಕ್ಷ ರೈತರಿಗೆ 50 ಸಾವಿರ ರೂ. ನಂತೆ 8165 ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆ. ರೈತರ ಬಗ್ಗೆ ನೀವು ಮಾತನಾಡುವುದಾದರೆ ಮೊದಲು ಕೇಂದ್ರದ ಬಳಿ ಹೋಗಿ ರಾಷ್ಟ್ರೀಕೃತ ಬ್ಯಾಂಕು ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸಿಕೊಂಡು ಬನ್ನಿ. ಆಗ ಮಾತ್ರ ನಿಮಗೆ ರೈತರ ಬಗ್ಗೆ ಮಾತನಾಡಲು ನೈತಿ ಕತೆ ಇರುತ್ತದೆ ಎಂದು ಬಿಜೆಪಿ ನಾಯಕರನ್ನು ಚುಚ್ಚಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ನಮ್ಮ ಸರ್ಕಾರದ ಈ ಅವಧಿಯ ಕೊನೆಯ ಅಧಿವೇಶನ ಇದು. ಮೊದಲ ವರ್ಷ ಬಿಟ್ಟರೆ ಈ ಬಾರಿ ವೈದ್ಯರ ಮುಷ್ಕರ ಹೊರತುಪಡಿಸಿ ಪ್ರತಿಭಟನೆಗಳು, ಹೋರಾಟಗಳು ಕಡಿಮೆಯಾಗಿವೆ. ಇದು ಸಹ ಸರ್ಕಾರದ ಬಗ್ಗೆ ಜನರಿಗೆ ಸಮಾಧಾನ ಇದೆ ಎಂಬುದು ತೋರಿಸುತ್ತದೆ ಎಂದರು. 

Advertisement

ಕೈಮುಗಿದು ಪಿಎಂಗೆ ಮನವಿ ಮಾಡ್ತೇನೆ: ಸಿದ್ದರಾಮಯ್ಯ
ವಿಧಾನಸಭೆ: ಮಹದಾಯಿ ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಮೋದಿ ಅವರ ಮಧ್ಯಪ್ರವೇಶವೊಂದೇ ಪರಿಹಾರ ಎಂದು 
ಪುನರುಚ್ಚರಿಸಿರುವ ಸಿದ್ದರಾಮಯ್ಯ, ನ್ಯಾಯಾಧಿಕರಣದ ಹೊರಗೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು
ನಾವು ಈಗಲೂ ಸಿದ್ಧ ಎಂದು ಹೇಳಿದರು. ಜತೆಗೆ, ಕೈ ಮುಗಿದು ಕೇಳಿಕೊಳ್ಳುತ್ತೇನೆ.  ಪ್ರಧಾನಿಯವರು ತಕ್ಷಣ 3 ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು. ನಾವು ಮುಕ್ತ ಮನಸ್ಸಿ ನಿಂದ ಇದ್ದೇವೆ ಎಂದು ಸದನದ ಮೂಲಕ ಮನವಿ ಮಾಡಿದರು. ಈ ವಿಚಾರದಲ್ಲಿ ಮೂರು ಬಾರಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆ ದಿದ್ದು, ಗೋವಾ ಮುಖ್ಯಮಂತ್ರಿಯ ವರಿಗೆ ಮನವಿ ಮಾಡಿದ್ದನ್ನು ವಿವರಿಸಿದ ಅವರು, ಸೂಕ್ತ ಸ್ಪಂದನೆ ಸಿಗದ ಬಗ್ಗೆ ಅಸಮಾಧಾನ
ವ್ಯಕ್ತಪಡಿಸಿದರು. 

ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಸ್ಯೆ ಬಗೆಹರಿಸುವುದು ಸಮಸ್ಯೆಯಾಗದು. ನಾವೂ ಸಹ ಮುಕ್ತವಾಗಿದ್ದೇವೆ. ಆದರೆ, ಪ್ರತಿಪಕ್ಷದವರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಹೇಳುವುದು ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿ ಸದಸ್ಯರತ್ತ ಛಾಟಿ ಬೀಸಿದರು. ಇನ್ನು ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದ ನೆರವಿಲ್ಲದೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಮಹದಾಯಿ ವಿವಾದ ಬಗೆಹರಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.  ಸಮಸ್ಯೆ ಪರಿಹಾರವಾದರೆ ನಾವು ಸ್ವಾಗತಿಸುತ್ತೇವೆ. ಕುರುಡನಿಗೆ ಯಾರಾ  ದರೂ ಕಣ್ಣು ಕೊಟ್ಟರೆ ಅದು ಸಂತೋಷವಲ್ಲವೇ ಎಂದರು.

ಮಾತನಾಡಿದವರು ನಾಲ್ವರು!
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಚರ್ಚಿಸಲು ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಸಮಯ ನಿಗದಿಪಡಿಸಲಾಗಿತ್ತು. ಆದರೂ, ಸಿಕ್ಕಿದ್ದು 5 ಗಂಟೆ 15 ನಿಮಿಷ ಕಾಲಾವಧಿ. ಆ ಪೈಕಿ ಮಾತನಾಡಿದವರು ಕೇವಲ ನಾಲ್ಕು ಸದಸ್ಯರು. ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಜೆಡಿಎಸ್‌ನ ವೈ.ಎಸ್‌.ವಿ.ದತ್ತ ಹಾಗೂ ಕೋನರೆಡ್ಡಿ, ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಎ.ಎಸ್‌. ಪಾಟೀಲ್‌ ನಡಹಳ್ಳಿ ಮಾತ್ರ.

ಸಿಎಂಗೆ ಜ್ವರ
ಮುಖ್ಯಮಂತ್ರಿ ಸಿದ್ದರಾಮಯ್ಯ ಜ್ವರದಿಂದ ಬಳಲುತ್ತಿದ್ದು, ಅದರ ನಡುವೆಯೇ ಗುರುವಾರ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರಿಸಿದರು. ಜ್ವರದಿಂದ ಬಳಲುತ್ತಿರುವ ಬಗ್ಗೆ ತಿಳಿಸಿದ ಅವರು, ಒಮ್ಮೆ ನೀರು ಕುಡಿದು ಸುಧಾರಿಸಿಕೊಂಡರು. ನಾನೆಂದೂ ಉತ್ತರ ನೀಡುವಾಗ ನೀರು ಕುಡಿಯವುದೇ ಇಲ್ಲ. ಆದರೆ, ಜ್ವರದಿಂದ  ಬಳಲುತ್ತಿದ್ದೇನೆ. ಹೀಗಾಗಿ, ನೀರು ಕುಡಿದೆ ಎಂದು ಹೇಳಿದರು.

ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ವಿಚಾರದಲ್ಲಿ ನಮ್ಮ ಸರ್ಕಾರ ಎಳ್ಳಷ್ಟೂ ತಾರತಮ್ಯ ಮಾಡಿಲ್ಲ. ಸಮಗ್ರ ಕರ್ನಾಟಕ, ಅಖೀಲ ಕರ್ನಾಟಕ ಅಭಿವೃದ್ಧಿಯೇ ನಮ್ಮ ಮಂತ್ರ.
 ●ಸಿದ್ದರಾಮಯ್ಯ, ಮುಖ್ಯಮಂತ್ರಿ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದರು

Advertisement

Udayavani is now on Telegram. Click here to join our channel and stay updated with the latest news.

Next