Advertisement

ತಾಲೂಕು ಕೇಂದ್ರದ ಪಕ್ಕದಲ್ಲಿದ್ರೂ ಸಮರ್ಪಕ ರಸ್ತೆ ಇಲ್ಲ

03:56 PM Sep 30, 2019 | Team Udayavani |

ಮಾಲೂರು: ದೀಪದ ಕೆಳಗೆ ಕತ್ತಲೆಯಂತಾದ ಕಾಡದೇನಹಳ್ಳಿ ಗ್ರಾಮಸ್ಥರ ಪಾಡು, ತಾಲೂಕು ಕೇಂದ್ರದಿಂದ ಕೂಗಳತೆ ದೂರಲ್ಲಿರುವ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದೇ, ಪರಿತಪಿಸುತ್ತಿರುವ ನಾಗರಿಕರು, ಪ್ರತಿನಿತ್ಯ ಇಲ್ಲಿನ ಜನರು ಅನುಭವಿಸುತ್ತಿರುವುದು ನರಕಯಾತನೆ ಕೇಳ್ಳೋರೇ ಇಲ್ಲದಂತಾಗಿದೆ? ಪಟ್ಟಣಕ್ಕೆ ಕೇವಲ ಮೂರು ಕಿ.ಮೀ. ಇರುವ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದೆ, ವಾಹನ ಸವಾರರು ನರಕಯಾತನೇ ಅನುಭವಿಸುತ್ತಿದ್ದಾರೆ.

Advertisement

ತಾಲೂಕಿನ ಇತರೆ ಗ್ರಾಮಗಳಂತೆ ಕಾಡದೇನಹಳ್ಳಿಯೂ ಹಣ್ಣು, ತರಕಾರಿ ಸೊಪ್ಪು ಬೆಳೆಯುವುದರಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಆದರೂ ಇಲ್ಲಿನ ಜನರಿಗೆ ಸಮರ್ಪಕ ರಸ್ತೆ ಸಂಪರ್ಕವಿಲ್ಲ.

ಬಸ್ಸೌಕರ್ಯವಿಲ್ಲ: ಗ್ರಾಮದ ಜನತೆಗೆ 100 ರೂ. ಅಗತ್ಯವಾಗಿರುವ ವಸ್ತುಗಳು ಬೇಕಿದ್ದರೂ ಮಾಲೂರು ಪಟ್ಟಣಕ್ಕೆ ಬಾರದೆ, ವಿಧಿ ಇಲ್ಲದ ಪರಿಸ್ಥಿತಿ ಇದೆ. ಇಲ್ಲಿನ ಜನರು ಮನೆಗೊಂದು ಸೈಕಲ್‌, ಇಲ್ಲವೇ ದ್ವಿಚಕ್ರ ವಾಹನ ಹೊಂದುವುದು ಕಡ್ಡಾಯವಾಗಿದೆ. ಈ ಗ್ರಾಮವು ಸೇರಿದಂತೆ ಸುತ್ತಮುತ್ತಲಿನ ನಲ್ಲಪ್ಪನಹಳ್ಳಿ, ಬೊಪ್ಪನಹಳ್ಳಿ ಚಿಕ್ಕಾಪುರ, ಹುರಳಗೆರೆ, ಮಾದನಹಟ್ಟಿ ಗ್ರಾಮಗಳು ಇದೇ ರಸ್ತೆಯಲ್ಲಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವಿಲ್ಲ.

ಈ ಮಾರ್ಗದಲ್ಲಿ ರಸ್ತೆ ಸಾರಿಗೆ ಬಸ್‌ ಇರಲಿ, ಆಟೋ, ಆ್ಯಂಬುಲೆನ್ಸ್‌ ಸಹ ಬರುವುದಿಲ್ಲ. ಕಾರಣ ಇಲ್ಲಿನ ಸಂಪರ್ಕ ರಸ್ತೆ ಆ ಮಟ್ಟಕ್ಕೆ ಹದಗೆಟ್ಟಿದೆ. ಇಂತಹ ಸೋಚನಿಯ ಪರಿಸ್ಥಿತಿಯನ್ನು ಕಂಡ ಪ್ರತಿಯೊಬ್ಬರಿಗೂ ಈ ರಸ್ತೆಯಲ್ಲಿನ ಗ್ರಾಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರು ಉಳಿದಿವೆಯೇ ಎನ್ನುವ ಭಾವನೆ ಬಾರದಿರದು. ಹೀಗಾಗಿ ಇಲ್ಲಿನ ಜನರ ಬದುಕು ದೀಪದ ಕೆಳಗಿನ ಕತ್ತಲೆಯಂತಾಗಿದೆ.

ಸ್ವಂತ ವಾಹನ ಹೊಂದುವುದು ಕಡ್ಡಾಯ: 20 ವರ್ಷಗಳ ಹಿಂದೆ ಡಾಂಬರು ಕಂಡಿದ್ದ ಈ ರಸ್ತೆ ಇದುವರೆಗೂ ಒಂದು ಜಲ್ಲಿ ಕಂಡಿಲ್ಲ. ಮಳೆ ಬಂದ್ರೆ ಕೆಸರುಗದ್ದೆ, ಬೇಸಿಗೆ ಬಂದ್ರೆ ದೂಳು ಸೇವಿಸುವ ಪರಿಸ್ಥಿತಿ, ಈ ರಸ್ತೆಯಲ್ಲಿ ಸಂಚರಿಸುವ ಜನರದ್ದು. ಗ್ರಾಮಗಳಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು, ಪ್ರೌಢಶಿಕ್ಷಣ, ಪಿಯುಸಿ, ಪದವಿ ಶಿಕ್ಷಣಕ್ಕಾಗಿ ಮಾಲೂರು ಪಟ್ಟಣಕ್ಕೆ ಬರಬೇಕಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಸೈಕಲ್‌ಗ‌ಳೇ ಆಧಾರವಾಗಿವೆ. ಗ್ರಾಮಸ್ಥರು ಕೂಡ ಸೈಕಲ್‌ ಇಲ್ಲವೆ, ದ್ವಿಚಕ್ರ ವಾಹನ ಹೊಂದುವುದು ಕಡ್ಡಾಯವಾಗಿದೆ.

Advertisement

ರಸ್ತೆ ಅಗೆದು ಹಾಗೆ ಬಿಟ್ರಾ: ಮಾಲೂರು ಪಟ್ಟಣದ ಒಳಚರಂಡಿ ನೀರನ್ನು ಸಂಸ್ಕರಿಸುವ ಉದ್ದೇಶದಿಂದ ರಾಜ್ಯ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯು ಪಟ್ಟಣದ ದೊಡ್ಡಕೆರೆಯ ಕಟ್ಟೆಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಅದಕ್ಕೆ ಪೈಪ್‌ಲೈನ್‌ ಅಳವಡಿಸಲು ಪಟ್ಟಣದಿಂದ ಘಟಕದವರೆಗೆ ರಸ್ತೆಯಲ್ಲಿ ಕಾಲುವೆ ತೋಡಿತ್ತು. ಕಾಮಗಾರಿ ಪೂರ್ಣಗೊಳಿಸಿದ ನಂತರ ಅರೆಬರೆಯಾಗಿ ಕಾಲುವೆ ಮುಚ್ಚಿದ್ದರಿಂದ ಮೊಣಕಾಲುದ್ದದ ಗುಂಡಿಗಳು ಬಿದ್ದು ವಾಹನ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ರಸ್ತೆ ಹದಗೆಟ್ಟು ಎರಡು ಮೂರು ವರ್ಷ ಕಳೆದರೂ ಇದುವರೆಗೂ ರಸ್ತೆ ಸರಿಪಡಿಸಿಲ್ಲ. ಮೊದಲೇ ದುರ್ಗಮವಾಗಿದ್ದ ಈ ರಸ್ತೆಯು ಒಳಚರಂಡಿ ಮಂಡಳಿಯ ಕಾಮಗಾರಿಯಿಂದ ಮತ್ತಷ್ಟು ಹಾಳಾಗಿದೆ. ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆ ಕೆಸರು ಮಯವಾಗಿದೆ.

ಮಾಲೂರು ಪಟ್ಟಣಕ್ಕೆ ಒಂದಲ್ಲ ಒಂದು ಕಾರಣಕ್ಕೆ ಬರಲೇಬೇಕಾಗಿರುವ ಈ ಭಾಗದ ಜನರು, ದೊಡ್ಡ ಕೆರೆಯ ಕಟ್ಟೆಯ ಮೇಲೆ ಸಂಚರಿಸಲು ಹೋಗಿ ಕೆಸರಿನಲ್ಲಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಇನ್ನಾದರೂ ಶಾಸಕ ನಂಜೇಗೌಡ, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಈಭಾಗದ ಜಿಪಂ ಸಿಇಒ, ಪುರಸಭೆ ಮುಖ್ಯಾಧಿಕಾರಿಗಳು, ಒಳಚರಂಡಿ ಮಂಡಳಿ ಅಧಿಕಾರಿಗಳು ಕಾಡದೇನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂಪರ್ಕ ರಸ್ತೆಗೆ ಮುಕ್ತಿ ನೀಡಬೇಕಿದೆ.

ಕಾಡದೇನಹಳ್ಳಿ ರಸ್ತೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರಲಿದೆ. ಜಿಪಂ ಅನುದಾನದಲ್ಲಿ ದುರಸ್ತಿ ಪಡಿಸಬೇಕಾಗಿದೆ, ಒಳಚರಂಡಿ ಮಂಡಳಿ ಪೈಪ್‌ಲೈನ್‌ ಹಾಕಲು ರಸ್ತೆ ಅಗೆದಿದ್ದ ಕಾರಣ ಗುಂಡಿಗಳು ಬಿದ್ದಿವೆ. ಒಳಚರಂಡಿ ನೀರು ಸಂಗ್ರಹ ಘಟಕದವರೆಗೂ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಹೊಣೆ ಒಳಚರಂಡಿ ಮಂಡಳಿಯ ವ್ಯಾಪ್ತಿಗೆ ಬರಲಿದೆ.● ಎಂ.ರಾಜು, ಸಹಾಯಕ ಎಂಜಿನೀಯರ್‌, ಲೋಕೋಪಯೋಗಿ ಇಲಾಖೆ

 

-ಎಂ.ರವಿಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next