ಬೆಂಗಳೂರು: ಅನ್ಯಭಾಷಾ ನಾಮಫಲಕಗಳ ವಿರುದ್ಧ ಕ್ರಮಕೈಗೊಂಡು ಮಳಿಗೆಗಳ ಪರವಾನಗಿ ರದ್ದುಪಡಿಸುವಂತೆ ಕೌನ್ಸಿಲ್ ಸಭೆಯಲ್ಲಿ ನಿರ್ಣಯಕೈಗೊಂಡರೂ ಕ್ರಮಕ್ಕೆ ಮುಂದಾಗದ ಅಧಿಕಾರಿಗಳನ್ನು ಮೇಯರ್ ಸಂಪತ್‌ರಾಜ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿ ಭಿತ್ತಪತ್ರ ಹಾಗೂ ಗೋಡೆ ಬರಹ ಅಳಿಸಿ ಹಾಕುವ ಅಭಿಯಾನಕ್ಕೆ ಶನಿವಾರದಿಂದ ಚಾಲನೆ ನೀಡಿದ್ದ ಮೇಯರ್ ಸಂಪತ್‌ರಾಜ್ ಭಾನುವಾರವೂ ನಗರದ ಹಲವು ಭಾಗಗಳಲ್ಲಿ ಭಿತ್ತಿಪತ್ರ ತೆರವುಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಭಾನುವಾರ ಹಲಸೂರು ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರ ತೆರವುಗೊಳಿಸಿದ ಕಾರ್ಯಾಚರಣೆ ನಡೆಸುವ ವೇಳೆ ಅಂಗಡಿಗಳ ಮುಂಭಾಗದ ನಾಮಫಲಕದಲ್ಲಿ ನಿಯಮಾನುಸಾರ ಕನ್ನಡ ಭಾಷೆ ಬಳಸದಿರುವುದು ಕಂಡು ಕೋಪಗೊಂಡ ಮೇಯರ್, ಅಧಿಕಾರಿಗಳ ವಿರುದ್ಧ ಗರಂ ಆದರು.
ಜೀವನ್‌ಭೀಮಾನಗರ ವಾರ್ಡ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನ ಅವರನ್ನು ತರಾಟೆಗೆ ತೆಗೆದುಕೊಂಡ ಮೇಯರ್, ಎಲ್ಲ ರೀತಿಯ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಶೇ.40 ಇತರೆ ಭಾಷೆ ಬಳಸಬೇಕು ಎಂದು ಸೂಚಿಸಿದರೂ, ನಿಯಮ ಪಾಲಿಸದವರ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ. ಇನ್ನೆಷ್ಟು ಬಾರಿ ನಿಮಗೆ ಸೂಚನೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕನ್ನಡ ಬಳಸದಂತಹ ಮಳಿಗೆಗಳಿಗೆ ನೋಟಿಸ್ ಸರಿಪಡಿಸದಿದ್ದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ವೈದ್ಯಾಧಿಕಾರಿಗಳ ಜತೆ ಸಭೆ: ಅಂಗಡಿ-ಮುಂಗಟ್ಟುಗಳ ಮುಂದಿನ ನಾಮಫಲಕಗಳಲ್ಲಿ ಶೇ.60ರಷ್ಟು ಜಾಗವನ್ನು ಕನ್ನಡ ಭಾಷೆಗೆ ನೀಡುವ ಕುರಿತಂತೆ ವೈದ್ಯಾಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಲಾಗುವುದು ಎಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದರು.
ನಾಮಫಲಕದಲ್ಲಿ ಕನ್ನಡಭಾಷೆ ಬಳಕೆ ವಿಚಾರವಾಗಿ ಅಂಗಡಿ ಮಾಲಿಕರ ಬಳಿ ಕೇಳಿದರೆ, ನಾವು ನಾಮಫಲಕ ಮತ್ತೆ ಅಳವಡಿಸಬೇಕಾದರೆ 4 ರಿಂದ 5 ಸಾವಿರ ರು. ಬೇಕಾಗುತ್ತದೆ. ತಿಂಗಳೆಲ್ಲಾ ದುಡಿದರೂ 8 ಸಾವಿರ ಬರುವುದಿಲ್ಲ. ನಾವೇಗೆ ಅಳವಡಿಸಬೇಕು ಎಂದು ಪ್ರಶ್ನೆ ಮಾಡುತ್ತಾರೆ. ಕೆಲ ಖಾಸಗಿ ಸಂಸ್ಥೆಗಳು ಅಂಗಡಿಗಳಿಗೆ ನಾಮಫಲಕಗಳನ್ನು ಅಳವಡಿಸಿದ್ದು, ಈ ಕುರಿತು ಆರೋಗ್ಯಾಧಿಕಾರಿಗಳ ಜತೆ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.