Advertisement

ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

11:16 PM Jun 19, 2024 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕನ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಈಗ ಭಾರೀ ಲಾಬಿ ಪ್ರಾರಂಭವಾಗಿದ್ದು, ಒಕ್ಕಲಿಗ, ದಲಿತ ಅಥವಾ ಒಬಿಸಿ ಸಮುದಾಯದ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.

Advertisement

ಸಿ.ಟಿ. ರವಿ, ಛಲವಾದಿ ನಾರಾಯಣಸ್ವಾಮಿ ಹಾಗೂ ಎನ್‌.ರವಿಕುಮಾರ್‌ ಮಧ್ಯೆ ಈ ಸ್ಥಾನಕ್ಕಾಗಿ ಪೈಪೋಟಿ ಸೃಷ್ಟಿಯಾಗಿದ್ದು, ಛಲವಾದಿ ನಾರಾಯಣಸ್ವಾಮಿ ಪರ ವಿಧಾನಸಭೆಯ ವಿಪಕ್ಷ ನಾಯಕ ಆರ್‌. ಅಶೋಕ್‌ ಬ್ಯಾಟಿಂಗ್‌ ಪ್ರಾರಂಭಿಸಿದ್ದಾರೆ. ಆದರೆ, ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಈ ಆಯಕಟ್ಟಿನ ಸ್ಥಾನ ಕೊಡಲು ಬಿಜೆಪಿ ವರಿಷ್ಠರು ಒಪ್ಪುವರೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಧಾನಸಭೆ, ವಿಧಾನ ಪರಿಷತ್‌ ಎರಡೂ ಕಡೆ ಹಳೇ ಮೈಸೂರು ಭಾಗಕ್ಕೆ ಮಣೆ ಹಾಕಿದಂತಾಗುತ್ತದೆ.

ಈ ಸ್ಥಾನದ ಮೇಲೆ ಸಿ.ಟಿ.ರವಿ ಕಣ್ಣಿಟ್ಟಿದ್ದು, ಹೈಕಮಾಂಡ್‌ ನಾಯಕರ ಮೂಲಕ ಒತ್ತಡ ಹೇರಲಾಗುತ್ತಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬೆಂಬಲ ಅವರಿಗೆ ಲಭಿಸುವ ಸಾಧ್ಯತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸಿ.ಟಿ.ರವಿ ವಿಚಾರದಲ್ಲಿ ತುಸು ಮೆತ್ತಗಾಗಿದ್ದಾರೆ. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ಮುನ್ನೆಲೆಗೆ ಬಂದ ಸಂದರ್ಭದಲ್ಲಿ ಸಿ.ಟಿ.ರವಿ ಏಕಾಂಗಿಯಾಗಿ ವಕಾಲತ್ತು ವಹಿಸಿದ್ದು ಬಿಜೆಪಿಯ ಬದಲಾದ ರಾಜಕೀಯ ಸಮೀಕರಣದ ಸಂಕೇತ ಎಂದು ಹೇಳಲಾಗುತ್ತಿದೆ.

ಅಧಿವೇಶನ ವೇಳೆ ನೇಮಕ?
ವಿಪಕ್ಷ ನಾಯಕ ಸ್ಥಾನದ ವಿಚಾರದಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಅಳೆದೂ-ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಸನ್ನಿವೇಶ ಆಧರಿಸಿ ಸಿ.ಟಿ.ರವಿ ಅಥವಾ ಎನ್‌. ರವಿಕುಮಾರ್‌ ಪರ ಅವರ ನಿಲುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ಮಳೆಗಾಲದ ಅಧಿವೇಶನದಲ್ಲಿಯೇ ವಿಪಕ್ಷ ನಾಯಕ ಸ್ಥಾನಕ್ಕೆ ನೇಮಕವಾಗುವ ಸಾಧ್ಯತೆ ದಟ್ಟವಾಗಿದ್ದು, ತೆರೆಮರೆಯಲ್ಲಿ ಪ್ರಯತ್ನ ಬಿರುಸಾಗಿ ಸಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next