ವಿಜಯಪುರ: ದೇಶದಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದೆ, ಮೋದಿ ಸರ್ಕಾರದಿಂದ ರಾಜಕೀಯ ಪ್ರೇರಿತ ದಾಳಿಯಾಗುತ್ತಿದೆ. ಚಿದಂಬರಂ ಆಯಿತು, ಇದೀಗ ಡಿಕೆಶಿ. ಐಟಿ ರೆಡ್ ಕೇವಲ ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಹಣಿಯಲು ಟಾರ್ಗೆಟ್ ಮಾಡಲಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹರಿಹಾಯ್ದಿದ್ದಾರೆ.
ಬುಧವಾರ ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಷನ್ ಕಮಲದ ಬಗ್ಗೆ ತನಿಖೆ ಯಾಕೆ ಮಾಡುತ್ತಿಲ್ಲ. ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಈ ಬಗ್ಗೆ ಚಕಾರ ಎತ್ತದ ಕೇಂದ್ರ ಸರಕಾರ, ಸ್ವಾಯತ್ತ ಸಂಸ್ಥೆಗಳನ್ನುಸ್ವಾದೀನದಲ್ಲಿ ಇಟ್ಟುಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಕಾಂಗ್ರೆಸ್ ಪಕ್ಷ ಡಿ.ಕೆ. ಶಿವಕುಮಾರ ಬೆಂಬಲಕ್ಕೆ ನಿಲ್ಲಲಿದೆ. ಶಿವಕುಮಾರ ಅವರು ಅದಷ್ಟು ಬೇಗ ಈ ಕಷ್ಟದಿಂದ ಹೊರ ಬರುತ್ತಾರೆ. ನಮ್ಮ ಕಾರ್ಯಕರ್ತರು ಅವರು ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದರು.
ಡಿ.ಕೆ. ಶಿವಕುಮಾರ್ ಬೆಂಬಲಿಗರಿಂದ ಪ್ರತಿಭಟನೆ ಹಾಗೂ ದಾಂಧಲೇ ಮಾಡಿದ್ದು, ಅಭಿಮಾನಿಗಳಿಗೆ ನೋವಾಗಿದೆ. ಬಿಜೆಪಿ ಹಾಗೂ ಕೇಂದ್ರದ ದ್ವೇಷ ರಾಜಕಾರಣ ವಿರುದ್ಧ ನಾವೆಲ್ಲ ಹೋರಾಟ ಮಾಡಲಿದ್ದೇವೆ. ಆದರೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಬೇಡಿ ಎಂದ ಮನವಿ ಮಾಡಿದರು.
ಬಿಜೆಪಿ ದ್ವೇಷದ ರಾಜಕಾರಣದ ವಿರುದ್ಧ ಉಗ್ರ ಹೋರಾಟ ಮಾಡೋಣ. ಜನಾರ್ಧನ ರೆಡ್ಡಿ ಬಂಧನ ಮಾಡಿದ್ದಾಗಲೂ ಇಡಿ ಬಳಕೆ ಮಾಡಲಾಗಿದೆ ಎಂಬ ಆರೋಪ ಮಾಡುವುದು ಸರಿಯಲ್ಲ, ಜನಾರ್ಧನ ರೆಡ್ಡಿ ಪ್ರಕರಣ ಬೇರೆ, ಈ ಪ್ರಕರಣ ಬೇರೆ. ಅಕ್ರಮ ಗಣಿಗರಿಕೆ ಪ್ರಕರಣದಲ್ಲಿ ರೆಡ್ಡಿ ಜೈಲು ಪಾಲಾಗಿದ್ದರು. ಹೀಗಾಗಿ ಅದಕ್ಕೂ ಇದಕ್ಕೂ ಹೋಲಿಕೆ ಸಲ್ಲದು ಎಂದರು.