Advertisement
ಮಾಹಿತಿ ಹಕ್ಕು ಕಾಯಿದೆ ಬಂದಂದಿನಿಂದ ಸಾರ್ವಜನಿಕರು ಆದನ್ನು ತಮ್ಮ ಅಗತ್ಯಕ್ಕಿಂತ ಪ್ರಯೋಗಕ್ಕೆ, ಪ್ರದರ್ಶನಕ್ಕೆ ಮತ್ತು ಸ್ವಾರ್ಥಕ್ಕೆ ಉಪಯೋಗಿಸಿಕೊಂಡ ಹಲವಾರು ನಿದರ್ಶನಗಳಿವೆ. ಯಾರೇ ಆದರೂ ಮತ್ತು ಎಲ್ಲರೂ ಮಾಹಿತಿ ಹಕ್ಕು ಕಾಯಿದೆಯಂತೆ ಮಾಹಿತಿಯನ್ನು ಪಡೆಯಬಹುದು. ಆದರೆ ಈ ರೀತಿಯ ಕಡಿವಾಣವಿಲ್ಲದ ಹಕ್ಕು ಆಡಳಿತವನ್ನು ಕುಂಠಿತಗೊಳಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅಭಿಪ್ರಾಯ ಪಟ್ಟಿದೆ. ಅಲ್ಲದೆ, ಮಾಹಿತಿ ಹಕ್ಕಿನ ದುರ್ಬಳಕೆ ಮತ್ತು ಅದರಿಂದಾಗಬಹುದಾದ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸಲು ಸಲಹೆಯನ್ನು ಕೇಳಿದೆ. ಇನ್ನೊಂದೆಡೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಸರಕಾರಿ ಆಡಳಿತದೊಂದಿಗೆ ಸಾರ್ವಜನಿಕರ ಸಂವಹನ ಬಹುತೇಕ ಉಚಿತವಾಗಿದೆ. ಯಾರೇ ಆದರೂ ಯಾವಾಗಲಾದರೂ ಸರಕಾರಿ ಆಡಳಿತವನ್ನು ಇ-ಮೈಲ್ ಅಥವಾ ಸಾಮಾಜಿಕ ಇ-ಮಾಧ್ಯಮದ ಮೂಲಕ ಸಂಪರ್ಕಿಸಬಹುದು. ಇಂತಹ ಅನಿಯಂತ್ರಿತ ಸಾರ್ವಜನಿಕ ಸಂಪರ್ಕವು ಸರಕಾರಿ ಅಧಿಕಾರಿಗಳಿಗೆ ಉತ್ತಮ ಆಡಳಿತವನ್ನು ನೀಡುವುದಕ್ಕೆ ಮಾರಕವಾಗಿ ಪರಿಣಮಿಸಿದೆ. ಕಾಯಿದೆಗಳು ಕೊಡಮಾಡುವ ಇಂತಹ ಅವಕಾಶಗಳು ಪ್ರಜೆಗಳ ಅನಗತ್ಯಕ್ಕೆ ಅನುಕೂಲವಾಗಿ, ಸರಕಾರಿ ಆಡಳಿತದ ಅಗತ್ಯಕ್ಕೆ ಪ್ರತಿಕೂಲವಾಗಿ ಪರಿಣಮಿಸುತ್ತಿವೆ.
Related Articles
Advertisement
ಕಾಯಿದೆಗಳ ದುರ್ಬಳಕೆಯಲ್ಲಿ ಸಮಾಜದ ಶಿಕ್ಷಿತ ವರ್ಗದ ಪಾತ್ರವೆ ಹೆಚ್ಚಾಗಿರುತ್ತದೆ. ಇದನ್ನು ಶಿಕ್ಷಿತ ವರ್ಗದ ಅನಾಗರಿಕ ದೃಷ್ಟಿಕೋನವೆಂದೆ ಬಗೆಯಬಹುದು. ಉದಾಹರಣೆಗೆ: ಭವಿಷ್ಯ ನಿಧಿ ಕಾಯ್ದೆ ಬಂದು ಅದೆಷ್ಟೋ ವರ್ಷಗಳೇ ಸಂದರೂ ಅದನ್ನು ಪಾಲಿಸದೆ ಇರುವ ದೊಡ್ಡ ಸಂಸ್ಥೆಗಳು ಇವೆ. ನೌಕರರು ಈ ಬಗ್ಗೆ ದೂರನ್ನು ಕೊಟ್ಟಾಗ ಭವಿಷ್ಯನಿಧಿ ಅಧಿಕಾರಿಗಳು ತನಿಖೆ ಮಾಡಿ ಸೂಕ್ತ ಕ್ರಮವನ್ನು ತೆಗೆದುಕೊಂಡ ನಿದರ್ಶನಗಳು ಹಲವಿವೆ. ಆದರೆ ಕಾನೂನನ್ನು ತಿಳಿದ ಶಿಕ್ಷಿತ ಆಡಳಿತ ಮಂಡಳಿಗಳು, ಕೇವಲ ನೌಕರರಿಗೆ ತೊಂದರೆ ಕೊಡುವ ಉದ್ದೇಶದಿಂದ ಅಂತಹ ಕ್ರಮಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದವರೆಗೂ ದಾವೆಯನ್ನು ಹೂಡಿವೆ. ನ್ಯಾಯಾಲಯದ ಆದೇಶದಂತೆ ಭವಿಷ್ಯ ನಿಧಿ ಪಾವತಿಸಲೇ ಬೇಕಾಗುತ್ತದೆ ಎಂದು ತಿಳಿದೂ ಶಿಕ್ಷಿತ ಆಡಳಿತ ಮಂಡಳಿಗಳ ಈ ಕ್ರಮವು ಅಧಿಕಾರಿಗಳ, ನ್ಯಾಯಾಲಯಗಳ ಮತ್ತು ಪರೋಕ್ಷವಾಗಿ ಸಾರ್ವಜನಿಕರ ಅಮೂಲ್ಯ ಸಮಯವನ್ನು ಮತ್ತು ಸಂಪನ್ಮೂಲಗಳನ್ನು ಹಾಳು ಮಾಡುತ್ತವೆ. ಮಾತ್ರವಲ್ಲ, ಹಾಗೆ ವ್ಯವಹರಿಸುವಲ್ಲಿ ಸಾರ್ವಜನಿಕ ಹಣವನ್ನೆ ಆಡಳಿತ ಮಂಡಳಿಗಳು ವ್ಯಯಿಸಿರುತ್ತವೆ.
ಅಂತೆಯೆ, ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಹಾಗೂ ಕಲ್ಯಾಣ ಕಾಯಿದೆಯು 2007ನೆ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸಂಬಂಧಿಸಿದವರೆಲ್ಲರಿಗೆ ಯಾವುದೆ ಕಾಯಿದೆಯು ಅನುಕೂಲವಾಗುವುದದಾರೆ ಮಾತ್ರ ಅಂತಹ ಕಾಯ್ದೆಗಳನ್ನು ಪೂರ್ವಾನ್ವಯವಾಗುವಂತೆ ಅನುಷ್ಠಾನವಾಗಿಸಲು ಸಾಧ್ಯ. ಆದರೆ ಹಿರಿಯ ನಾಗರಿಕರ ಕಾಯಿದೆಯನ್ನು ಪೂರ್ವಾನ್ವಯಗೊಳಿಸಿದರೆ, ಅದು ಸಂಬಧಿಸಿದವರನ್ನು ಪೋಷಕರು ಮತ್ತು ಮಕ್ಕಳು ಎಂದು ವಿಂಗಡಿಸಿ, ಒಬ್ಬರಿಗೆ ಅನುಕೂಲವಾಗಿಯೂ ಮತ್ತು ಇನ್ನೊಬ್ಬರಿಗೆ ಪ್ರತಿಕೂಲವಾಗಿಯೂ ಪರಿಣಮಿಸಬಹುದು.
ಆದರೆ ಆ ಕಾಯಿದೆ ಜಾರಿಗೆ ಬಂದ ಬಳಿಕ ಅದಕ್ಕೆ ಸರಿಯಾಗಿ ವ್ಯವಹರಿಸುವುದು ಪೋಷಕರ ಮತ್ತು ಮಕ್ಕಳ ಜವಾಬ್ದಾರಿ. ಇಲ್ಲೂ ಕೂಡ, ಶಿಕ್ಷಿತ ಮತ್ತು ಅನುಭವಿ ಹಿರಿಯ ನಾಗರಿಕರು, ಅನಿವಾರ್ಯತೆ ಇಲ್ಲದಿದ್ದರೂ, ಈ ಕಾಯಿದೆಯನ್ನು ದುರುಪಯೋಗ ಪಡಿಸಿಕೊಂಡದ್ದಿದೆ. ಉದಾಹರಣೆಗೆ: ಹಣ ಬಂದರೆ ಬರಲಿ ಎಂಬ ಉದ್ದೇಶಕ್ಕೆ ಪಿಂಚಣಿಯನ್ನು ಪಡೆಯುತ್ತಿರುವ ಹಿರಿಯ ನಾಗರಿಕರೂ ಈ ಕಾಯಿದೆಯಂತೆ ಅಧಿಕಾರಿಗಳ ಮೊರೆ ಹೋಗಿರುವುದು ಒಂದು ವಿಪರ್ಯಾಸ. ಕಾಯಿದೆಯೇ ತಿಳಿಸುವಂತೆ ಹಿರಿಯ ನಾಗರಿಕನು ತನ್ನ ಸಂಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಸಮರ್ಥನಾದರೆ ಮಾತ್ರ ಗರಿಷ್ಠ 10,000 ರೂಪಾಯಿಯವರೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
ಪೂರ್ವಾಪರ ವಿವೇಚನೆಯಿಲ್ಲದೆ ಯಾವುದೇ ಕಾಯಿದೆಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು, ವಿವೇಕವಿಲ್ಲದ, ಶಿಕ್ಷಣವಿಲ್ಲದ, ಅಥವಾ ಅನುಭವವಿಲ್ಲದ ಅನಾಗರಿಕತೆಯ ಲಕ್ಷಣವಾಗುತ್ತದೆ. ವಿವೇಚನೆ ಯಿಂದ ಕಾಯಿದೆಗಳನ್ನು ಬಳಸಿಕೊಂಡಲ್ಲಿ, ಪ್ರಜಾಪ್ರಭುತ್ವದ ಸಂಪನ್ಮೂಲಗಳಿಂದ ತ್ವರಿತ, ಉತ್ತಮ ಆಡಳಿತವನ್ನು ಮತ್ತು ನ್ಯಾಯವನ್ನು ನಿರೀಕ್ಷಿಸಬಹುದು.
ರವಿರಾಜ ಹೊಳ್ಳ ಎಂ.