Advertisement
ಬೆಳಗಾವಿ ಅಧಿವೇಶನದಿಂದ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಅಲ್ಲಿನ ಜನರಿಗೆ ಎಷ್ಟು ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ, ಕುಂದಾ ತಯಾರಿಸಿ ಮಾರಾಟ ಮಾಡುವವರಿಗೆ ವ್ಯಾಪಾರದ ಬಾಗಿಲನ್ನು ತೆರೆದು ಕೊಟ್ಟಿದೆ. ಅದರಲ್ಲೂ, ಅಧಿವೇಶನದ ಕೊನೆಯ ಮೂರು ದಿನಗಳ ಅವಧಿಯಲ್ಲಿ ನಡೆಯುವ ಭರ್ಜರಿ ವ್ಯಾಪಾರ, ಕುಂದಾ ಮಾರಾಟಗಾರರಿಗೆ ಸಾಕಷ್ಟು ಲಾಭ ಮಾಡಿಕೊಟ್ಟಿದೆ.ಅಧಿವೇಶನದಲ್ಲಿ ಭಾಗವಹಿಸುವ ರಾಜಕಾರಣಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಇದೇ ಸಂದರ್ಭ ಪ್ರತಿಭಟನೆ ನಡೆಸಲು ಬರುವ ಸಂಘಟನೆಗಳ ಕಾರ್ಯಕರ್ತರು ಕುಂದಾ ಅಂಗಡಿಗಳಿಗೆ ಮುಗಿ ಬೀಳುವುದೇ ಇದಕ್ಕೆ ಸಾಕ್ಷಿ. ಹೀಗಾಗಿ, ಅಧಿವೇಶನದ ಸಮಯದಲ್ಲಿ ಸ್ವೀಟ್ ಮಾರ್ಟ್‌ಗಳಲ್ಲಿ ಸಾವಿರದ ಬದಲು ಲಕ್ಷ ರೂ.ಗಳಲ್ಲಿ ವ್ಯಾಪಾರ ನಡೆಯುತ್ತದೆ.
ಬೆಳಗಾವಿಯಲ್ಲಿ ಸುಮಾರು 250 ಸ್ವೀಟ್ ಮಾರ್ಟ್‌ಗಳಿವೆ. ಅದರಲ್ಲಿ ರಾಜಸ್ತಾನಿ ಸಮಾಜದವರ 200 ಅಂಗಡಿಗಳಿವೆ. ಈ 250 ಅಂಗಡಿಗಳಲ್ಲಿ ಪ್ರತಿನಿತ್ಯ ಸುಮಾರು 1,000 ಕೆ.ಜಿ.(1 ಟನ್) ಕುಂದಾ ತಯಾರಾಗುತ್ತದೆ. ಮಾರಾಟವಾಗದೆ ಉಳಿಯುವ ಪ್ರಮಾಣ ಬಹಳ ಕಡಿಮೆ. ಆದರೆ, ಅಧಿವೇಶನದ ಸಮಯದಲ್ಲಿ ಈ ಎಲ್ಲ ಮಿಠಾಯಿ ಅಂಗಡಿಕಾರರಿಗೆ ಶುಕ್ರದೆಸೆ. ಉಳಿದೆಲ್ಲ ಸಿಹಿ ತಿಂಡಿಗಳಿಗಿಂತ ಕುಂದಾಕ್ಕೆ ಎಂದೂ ಕಾಣದ ಬೇಡಿಕೆ. ಪ್ರತಿದಿನ 1000 ಕೆ.ಜಿ. ಪ್ರಮಾಣದಲ್ಲಿ ತಯಾರಾಗುವ ಕುಂದಾದ ಬೇಡಿಕೆ ಅಧಿವೇಶನದ ಅವಧಿಯಲ್ಲಿ 3,000 ಕೆ.ಜಿ. (3 ಟನ್) ತಲುಪಿರುತ್ತದೆ. ಕೆಲ ಸ್ವೀಟ್ ಮಾರ್ಟ್‌ಗಳಲ್ಲಿ ಸುಮಾರು 500 ಕೆಜಿವರೆಗೆ ಕುಂದಾ ತಯಾರಾಗಿ ಮಾರಾಟವಾಗುತ್ತದೆ. ಅಧಿವೇಶನದ ದಿನಗಳು ಹತ್ತಿರ ಬರುತ್ತಿದ್ದಂತೆ ಸಿಹಿತಿಂಡಿಗಳ ಮಾರಾಟದ ಅಂಗಡಿಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಕುಂದಾ ಸಿಹಿಯನ್ನು ವಿಭಿನ್ನ ಬಗೆಯಲ್ಲಿ ನೀಡಲು ತಯಾರಿ ನಡೆದಿದೆ. ಬಹಳ ದಿನಗಳ ಕಾಲ ಬಾಳಿಕೆಗೆ ಬರುವಂತೆ ಟಿನ್‌ಗಳಲ್ಲಿ ಕುಂದಾ ಪ್ಯಾಕ್ ಮಾಡಿ ಇಡಲಾಗುತ್ತದೆ. ಇದರ ಜೊತೆಗೆ, ಆನ್‌ಲೈನ್‌ನಲ್ಲಿ ಸಹ ಬುಕ್ ಮಾಡಿ ಕುಂದಾ ಪಡೆಯಬಹುದು ಎಂಬುದನ್ನು ಗ್ರಾಹಕರಿಗೆ ಪರಿಚಯಿಸಲು ವ್ಯಾಪಾರಸ್ಥರು ಯೋಚಿಸಿದ್ದಾರೆ.
Related Articles
Advertisement
ಪ್ರತಿ ಕೆ.ಜಿ.ಕುಂದಾಕ್ಕೆ 320 ರೂ.ನಿಂದ 400 ರೂ.ವರೆಗೆ ದರ ಇದೆ. ಬೆಲೆ ಹೆಚ್ಚು ಎನಿಸಿದರೂ, ಜನರ ಬೇಡಿಕೆ ಕಡಿಮೆಯಾಗಿಲ್ಲ. ಸಾಮಾನ್ಯ ದಿನಗಳಲ್ಲಿ ಒಂದು ಅಂಗಡಿಯಲ್ಲಿ 100 ಕೆ.ಜಿ.ವರೆಗೆ ಮಾರಾಟವಾಗುವ ಕುಂದಾ ಅಧಿವೇಶನದ ಸಮಯದಲ್ಲಿ 300 ಕೆ.ಜಿ. ದಾಟುತ್ತದೆ.– ಪವನ್ ಓಝಾ, ಕುಂದಾ ವ್ಯಾಪಾರಿ. ಸಾಮಾನ್ಯ ದಿನಗಳಲ್ಲಿ ನಮಗೆ ಕುಂದಾ ತಯಾರಿಕೆಯ ಪ್ರಮಾಣ ಗೊತ್ತಾಗುತ್ತದೆ. ಆದರೆ, ಅಧಿವೇಶನದ ಸಮಯದಲ್ಲಿ ಭಾರೀ ಬೇಡಿಕೆ ಇರುವುದರಿಂದ ಸಹಜವಾಗಿಯೇ ನಾವು ಉಳಿದ ದಿನಗಳಿಗಿಂತ ಹೆಚ್ಚು ತಯಾರು ಮಾಡುತ್ತೇವೆ. ನಮ್ಮದು ಬೆಳಗಾವಿಯ ಮೊದಲ ಹಾಗೂ ಅತ್ಯಂತ ಹಳೆಯ ಅಂಗಡಿಯಾಗಿರುವುದರಿಂದ ಜನರು ಹೆಸರು ಕೇಳಿಕೊಂಡು ಬರುತ್ತಾರೆ.
– ಕಮಲ್ ಕಿಶೋರ, ಗಜಾನನ ಮಿಠಾಯಿವಾಲಾ ಅಂಗಡಿ. – ಕೇಶವ ಆದಿ