Advertisement

ರಾಜ್ಯದಲ್ಲಿ ಸದ್ಯ ಲಾಕ್‌ಡೌನ್‌ ಇಲ್ಲ : ಸಚಿವ ಸಂಪುಟ ನಿರ್ಧಾರ

12:11 AM Mar 23, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚಳವಾಗುತ್ತಿದ್ದರೂ ಸದ್ಯ ಲಾಕ್‌ಡೌನ್‌ ಮಾಡದಿರಲು ಸಚಿವ ಸಂಪುಟ ನಿರ್ಧರಿಸಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದ್ದು, ಯಾವುದೇ ಕಾರಣಕ್ಕೂ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸದಿರಲು ಸರಕಾರ ನಿರ್ಧರಿಸಿದೆ. ಸೋಂಕಿನ ಪ್ರಮಾಣ ಹೆಚ್ಚಳವಾದರೆ ಬಿಗಿ ಕ್ರಮ ಕೈಗೊಂಡು, ಸೋಂಕು ಹರಡುವಿಕೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

Advertisement

ಕೊರೊನಾ ಪ್ರಮಾಣ ಹೆಚ್ಚಳ ಕುರಿತು ಒಂದು ವಾರ ಕಾದುನೋಡಲು ಸರಕಾರ ನಿರ್ಧರಿಸಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಶಾಲೆ-ಕಾಲೇಜು ಸ್ಥಗಿತವಿಲ್ಲ
ಈಗಾಗಲೇ ಆರಂಭವಾಗಿರುವ ಶಾಲಾ, ಕಾಲೇಜುಗಳನ್ನು ಸ್ಥಗಿತ ಮಾಡುವುದಿಲ್ಲ. ಆಫ್ಲೈನ್‌, ಆನ್‌ಲೈನ್‌ ತರಗತಿಗಳು ಶೈಕ್ಷಣಿಕ ವೇಳಾಪಟ್ಟಿಯಂತೆ ನಡೆಯ ಲಿವೆ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥ ನಾರಾಯಣ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಡೋಸ್‌ ಅವಧಿ ಹೆಚ್ಚಳ
ಕೊವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ಪಡೆಯಲು ಇರುವ ಅವಧಿಯನ್ನು ಈಗಿನ 28 ದಿನಗಳ ಬದಲಾಗಿ 6-8 ವಾರಗಳಿಗೆ ಹೆಚ್ಚಿಸಬೇಕು ಎಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಪತ್ರ ಬರೆದಿದೆ. ಕೊವ್ಯಾಕ್ಸಿನ್‌ ಲಸಿಕೆಗೆ ಈ ನಿಯಮ ಅನ್ವಯವಾಗದು ಎಂದೂ ಸ್ಪಷ್ಟಪಡಿಸಿದೆ.

ಲಾಕ್‌ಡೌನ್‌ ಬೇಡ, ಲಸಿಕೆ ಕೊಡಿ
“ಮತ್ತೆ ಲಾಕ್‌ಡೌನ್‌ ಬೇಡ, ಲಸಿಕೆ ಕೊಡಿ’ ಎಂಬ ಕೂಗು ಕಾರ್ಮಿಕರು, ಉದ್ಯಮಿಗಳ ಸಹಿತ ಸಾರ್ವಜನಿಕ ವಲಯದಿಂದ ಬಲವಾಗಿದೆ.

Advertisement

ಪ್ರಸ್ತುತ ಕೊರೊನಾ ಎರಡನೇ ಅಲೆ ಭೀತಿಯಿಂದಾಗಿ ಮತ್ತೆ ಲಾಕ್‌ಡೌನ್‌ ಚರ್ಚೆ ಮುನ್ನೆಲೆಗೆ ಬಂದಿದೆ.

ಕಳೆದ ವರ್ಷದ ಲಾಕ್‌ಡೌನ್‌ನಿಂದ ತೊಂದರೆ ಅನುಭವಿಸಿ ಇಂದಿಗೂ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಶ್ರಮಿಕ ವರ್ಗ ಲಾಕ್‌ಡೌನನ್ನು ಬಲವಾಗಿ ವಿರೋಧಿಸುತ್ತಿದೆ. ಸೋಂಕು ಹತೋಟಿಗೆ “ಲಸಿಕೆ” ಪರ್ಯಾಯ ಮತ್ತು ಪ್ರಬಲ ಮಾರ್ಗ ವಾಗಿದ್ದು, ಶೀಘ್ರ ನಮಗೆಲ್ಲ ಲಸಿಕೆ ಕೊಡಿ ಎಂದು ಒತ್ತಾಯಿಸುತ್ತಿವೆ.

ರಾಜ್ಯದಲ್ಲಿ ಶ್ರಮಿಕರು ಮೂರು ಕೋಟಿಗೂ ಅಧಿಕ ಮಂದಿ ಇದ್ದಾರೆ. ಇವರು ದಿನದ ಅಥವಾ ಮಾಸಿಕ ಕೂಲಿಯನ್ನು ಅವಲಂಬಿಸಿದ್ದಾರೆ. ಮತ್ತೆ ಲಾಕ್‌ಡೌನ್‌ ಅವರ ಕೂಲಿಯನ್ನು ಕಿತ್ತುಕೊಂಡಂತೆ. ಲಸಿಕೆ ಲಭ್ಯವಿದ್ದು, ಕಾರ್ಮಿಕ ವರ್ಗಕ್ಕೆ ನೀಡಬೇಕು. ಕೆಲಸ ಸ್ಥಳದಲ್ಲಿ ಮುಂಜಾಗ್ರತೆ ಕ್ರಮ ಪಾಲನೆಗೆ ಜಾಗೃತಿ ಮೂಡಿಸಿ, ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿ ಸೋಂಕಿನಿಂದ ರಕ್ಷಿಸಬೇಕು ಎಂದು ರಾಜ್ಯ ಕಾರ್ಮಿಕ ಸಂಘಟನೆಗಳ ಮುಖಂಡರಾದ ವರಲಕ್ಷ್ಮೀ ಆಗ್ರಹಿಸಿದ್ದಾರೆ.

ಆರ್ಥಿಕತೆಯ ಆಧಾರಸ್ತಂಭಕ್ಕೆ ಲಸಿಕೆ ನೀಡಿ
ಶ್ರಮಿಕ ವರ್ಗವೇ ದೇಶದ ಆರ್ಥಿಕತೆಯ ಆಧಾರಸ್ತಂಭ. ಮೊದಲು ಅವರಿಗೆ ಲಸಿಕೆ ನೀಡಿ ಸೋಂಕು ಹರಡುವಿಕೆ ತಡೆಗಟ್ಟಬೇಕು ಎನ್ನುವುದು ಆರ್ಥಿಕ ತಜ್ಞರ ಅಭಿಪ್ರಾಯ.

ಸದ್ಯ ಕೊರೊನಾ ಲಸಿಕೆ ಲಭ್ಯವಿದ್ದು, ದೊಡ್ಡ ಪ್ರಮಾಣದಲ್ಲಿ, ಹೆಚ್ಚು ಜನರಿಗೆ ಶೀಘ್ರದಲ್ಲಿ ಲಸಿಕೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ತರಬೇಕು. ಮುಖ್ಯವಾಗಿ ಸೋಂಕು ಹರಡುವಿಕೆಗೆ ಕಾರಣರಾಗುವ 20ರಿಂದ 45 ವರ್ಷದವರಿಗೆ ಶೀಘ್ರ ಲಸಿಕೆ ಹಾಕಬೇಕು. ಇದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು.
– ಡಾ| ದೇವಿ ಶೆಟ್ಟಿ , ಅಧ್ಯಕ್ಷರು, ನಾರಾಯಣ ಹೃದಯಾಲಯ

Advertisement

Udayavani is now on Telegram. Click here to join our channel and stay updated with the latest news.

Next