Advertisement

ಕದಡಿದ ಕಾಂಗ್ರೆಸ್‌ ವಾತಾವರಣ: “ಗುಂಪುಗಾರಿಕೆ” ರಾಜಕಾರಣದ ಬೀಜ ಮೊಳಕೆಯೊಡೆಯುತ್ತಿರುವ ಆತಂಕ

11:24 PM Sep 21, 2023 | Team Udayavani |

ಬೆಂಗಳೂರು: ವಿಪಕ್ಷಗಳ ಕೈಗೆಟುಕದಷ್ಟು ಭರ್ಜರಿ ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ ಸರಕಾರ ಇತ್ತೀಚೆಗಷ್ಟೇ ನೂರು ದಿನಗಳನ್ನು ಪೂರೈಸಿದೆ. ಆದರೆ ಈ ಸಂಭ್ರಮದ ಹೊತ್ತಲ್ಲೇ ಸಚಿವರು-ಶಾಸಕರು ನೀಡುತ್ತಿರುವ ಸಿಎಂ-ಡಿಸಿಎಂ ಹುದ್ದೆ, ಅಧಿಕಾರ ಹಂಚಿಕೆ ಮುಂತಾದ ಹೇಳಿಕೆಗಳು ಕಾಂಗ್ರೆಸ್‌ ವಾತಾವರಣವನ್ನು ಕದಡಿದಂತಾಗಿದೆ.

Advertisement

ಸುಭದ್ರ ಸರಕಾರದ ಸಂಕಲ್ಪ ದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಆರಂಭದಿಂದಲೂ ಒಡಕಿನ ಮಾತುಗಳೇ ಹೆಚ್ಚಾಗಿವೆ. ಆಡಳಿತ ಯಂತ್ರವನ್ನು ಸರಿದಾರಿಗೆ ತರುವುದು, ಗ್ಯಾರಂಟಿಗಳ ಜಾರಿ ಹೊರತಾಗಿಯೂ ಇತರ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಿರುವ ಸಂಪನ್ಮೂಲ ಸಂಗ್ರಹ ಮತ್ತಿತರ ಆದ್ಯತಾ ವಲಯಗಳ ಕಡೆ ಗಮನಹರಿಸಬೇಕಿದ್ದ ನಾಯಕರು ಪೈಪೋಟಿಗೆ ಬಿದ್ದಂತೆ ರಾಜಕೀಯ ಹೇಳಿಕೆಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಇದರ ಹಿಂದಿನ/ಮುಂದಿನ ಉದ್ದೇಶಗಳು ಮಾತ್ರ ನಿಗೂಢವಾಗಿವೆ. ಕಾಣದ ಕೈಗಳ ಪ್ರಭಾವವಿದೆಯೇ ಎಂಬ ಅನುಮಾನವೂ ಮೂಡುತ್ತಿದೆ. ಜತೆಗೆ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ (ಬಣ) ರಾಜಕಾರಣದ ಬೀಜ ಮೊಳಕೆ ಒಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಮೂಡುತ್ತಿದೆ.

ಗ್ಯಾರಂಟಿ ಯೋಜನೆಗಳ ಜಾರಿಯಿಂದ ವೃದ್ಧಿಸಿದ್ದ ಸರಕಾರ ಹಾಗೂ ಪಕ್ಷದ ವರ್ಚಸ್ಸು ಸಿಎಂ-ಡಿಸಿಎಂ ನಡುವೆ ಆಗಿದೆ ಎನ್ನಲಾದ 50:50 ಅಧಿಕಾರ ಹಂಚಿಕೆ ಸೂತ್ರ, ದಲಿತ ಸಿಎಂ ಕೂಗು, ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ, ವಿಧಾನ ಪರಿಷತ್ತಿನ ವಿಪಕ್ಷದ ಮಾಜಿ ನಾಯಕ ಬಿ.ಕೆ.ಹರಿಪ್ರಸಾದ್‌ ಸಿಎಂ ಸಿದ್ದರಾಮಯ್ಯ ಕುರಿತು ಪರೋಕ್ಷವಾಗಿ ನೀಡಿದ್ದ ಹೇಳಿಕೆ ಜತೆಗೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಅವರ 2 ಡಿಸಿಎಂ ಬೇಡಿಕೆ ಹಾಗೂ ಲೋಕಸಭಾ ಚುನಾವಣೆ ಬಳಿಕ ಸರಕಾರ ಇರುತ್ತದೋ ಇಲ್ಲವೋ ಎಂಬ ಮಾತುಗಳಿಂದ ಮತ್ತಷ್ಟು ಗೊಂದಲ ಮೂಡಿದೆ. ಇದು ಹೈಕಮಾಂಡ್‌ಗೂ ತಲೆನೋವು ಉಂಟು ಮಾಡಿದೆ.

ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡಲೆ
ಡಿಸಿಎಂ ಹುದ್ದೆ ಸೃಷ್ಟಿ ಕಾಂಗ್ರೆಸ್‌ ಪಾಲಿಗೆ ಅಷ್ಟೊಂದು ಸುಲಭವಾಗಿಲ್ಲ. ದಲಿತ ಸಮುದಾಯದಿಂದ ಡಾ| ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ, ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್‌, ಈಶ್ವರ ಖಂಡ್ರೆ, ವಾಲ್ಮೀಕಿ ಸಮಾಜದಿಂದ ಸತೀಶ್‌ ಜಾರಕಿಹೊಳಿ, ಕೆ.ಎನ್‌.ರಾಜಣ್ಣ, ಮುಸ್ಲಿಂ ಸಮಾಜದಿಂದಲೂ ಹಲವರು ಸ್ಪರ್ಧೆಯಲ್ಲಿದ್ದಾರೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದು ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ಈ ಹಂತದಲ್ಲಿ ಪಕ್ಷ ಹಾಗೂ ಸರಕಾರದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ಈ ರೀತಿ ಗೊಂದಲಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕದಿದ್ದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗಲಿದ್ದು, ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪೆಟ್ಟು ತಿನ್ನಬೇಕಾಗುತ್ತದೆ ಎಂಬ ಆತಂಕ ಮತ್ತೂಂದು ವರ್ಗವನ್ನು ಕಾಡುತ್ತಿದೆ.

 ಎಂ.ಎನ್‌.ಗುರುಮೂರ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next