Advertisement
ಹೆದ್ದಾರಿ ಅಗಲೀಕರಣ ಯೋಜನೆಗೆ ಅರ್ಧ ಗುಂಟೆಯಿಂದ 1 ಗುಂಟೆ, 2-4 ಗುಂಟೆ ಭೂಮಿ ಕಳೆದುಕೊಂಡವರೇ ಹೆಚ್ಚು. ಹಾಗಂತ ಈವರೆಗೆ ಪರಿಹಾರವನ್ನೇ ಪಡೆದಿಲ್ಲ ಎಂದಲ್ಲ. ಹಲವರು ಭೂಮಿಗೆ ದಾಖಲೆಗಳನ್ನು ನೀಡಿ ಪರಿಹಾರ ಪಡೆದಿದ್ದಾರೆ. ಇನ್ನು ಕೆಲ ಭೂ ಮಾಲೀಕರು, ಮಾಜಾಳಿ, ಚಿತ್ತಾಕುಲಾದಿಂದ ದೂರದ ನಗರಗಳಲ್ಲಿ ನೆಲೆಸಿದ್ದಾರೆ. ಕೆಲವರು ಮೃತಪಟ್ಟಿದ್ದಾರೆ. ಪಹಣಿಯಲ್ಲಿ ಮೃತರ ಹೆಸರಿದೆ. ಅವರ ವಾರಸುದಾರರು ದೂರದ ಪುಣೆ, ಮುಂಬಯಿ ಸೇರಿದಂತೆ ದೇಶ ವಿದೇಶಗಳಲ್ಲಿ ನೆಲಸಿರುವ ಕಾರಣ ಅವರಿಗೆ ಪರಿಹಾರ ಪಡೆದುಕೊಳ್ಳಿ ಎಂದು ತಾಲೂಕು ಆಡಳಿತ ತಿಳಿಸಲು, ಭೂ ಮಾಲೀಕರ ಮಕ್ಕಳು, ಮೊಮ್ಮಕ್ಕಳ ವಿಳಾಸ ಸಹ ಇಲ್ಲವಾಗಿದೆ. ಅಂಥ ವಿಳಾಸವೇ ಇಲ್ಲದ ಭೂ ಮಾಲೀಕರ ಪರಿಹಾರದ ಮೊತ್ತವನ್ನು ಕೋರ್ಟ್‌ಗೆ ಜಮಾ ಮಾಡಲಾಗುತ್ತಿದೆ.
Related Articles
Advertisement
ಪರಿಹಾರ ನೀಡಿದ ಮೊತ್ತ 78.01 ಕೋಟಿ ರೂ.: ಹೆದ್ದಾರಿ ಬದಿಯ ಮಾಜಾಳಿ ನಿವಾಸಿಗಳಿಗೆ 3.60 ಕೋಟಿ, ಚಿತ್ತಾಕುಲಾದವರಿಗೆ 1.36, ಕೋಡಿಬಾಗದವರಿಗೆ 2.23, ಬಾಡ ಗ್ರಾಮದವರಿಗೆ 0.08, ಬಿಣಗಾದವರಿಗೆ 18.20 ಕೋಟಿ, ಅರ್ಗಾದವರಿಗೆ 12.89, ಚೆಂಡಿಯಾದವರಿಗೆ 19.13, ತೋಡೂರಿನವರಿಗೆ 8.17, ಅಮದಳ್ಳಿಯವರಿಗೆ 12.35 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಈ ಪ್ರಕರಣಗಳಲ್ಲಿ ದಾಖಲೆ ಸಹಿತ ಬಂದ 130 ಕುಟುಂಗಳಿಗೆ ಪರಿಹಾರದ ಹಣ ವಿತರಿಸಲಾಗಿದೆ. ಅರ್ಗಾ ಬಳಿ ಕ್ವಾರಿಯೊಂದರ 6 ಗುಂಟೆ ಭೂಮಿಯ ವಿವಾದ ಇತ್ಯರ್ಥಕ್ಕೆ ಬಾಕಿಯಿದೆ. ಅಲ್ಲದೇ ಕೋಡಿಭಾಗದ ಖಾಸಗಿ ಕಟ್ಟಡದ ಕಾಂಪೌಂಡ್ ಹಾಗೂ 4 ಗುಂಟೆ ಜಾಗದ ಮೊತ್ತ 8 ಲಕ್ಷ ರೂ.ಗಳನ್ನು ಕೋರ್ಟ್‌ಗೆ ಜಮಾ ಮಾಡಲಾಗಿದೆ. ಸಂಬಂಧಿತ ಭೂ ಮಾಲೀಕರು ಪರಿಹಾರ ಪಡೆಯಲು ಮುಂದಾಗಿಲ್ಲ.
ಉಳಿದಂತೆ ಕಾರವಾರ ಬಳಿಯ ಸುರಂಗ ಮಾರ್ಗ 2020 ಸೆಪ್ಟೆಂಬರ್‌ಗೆ ಮುಗಿಯಲಿದ್ದು, ಹೆಚ್ಚು ಕಡಿಮೆ ಅದೇ ವೇಳೆಗೆ ಮೇಲ್ಸೇತುವೆ ಕಾಮಗಾರಿ ಸಹ ಮುಗಿಯುವ ನಿರೀಕ್ಷೆ ಇದೆ. ಬಾಳೆಗುಳಿ ಸಮೀಪದ ಟೋಲ್ಗೇಟ್ ಇದೇ ಡಿಸೆಂಬರ್ ವೇಳೆಗೆ ಕಾರ್ಯಾರಂಭ ಮಾಡುವ ಲಕ್ಷಣಗಳಿವೆ. ಕುಮಟಾ ಬೈಪಾಸ್, ಹೊನ್ನಾವರ, ಭಟ್ಕಳ ನಗರಗಳಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಮುಗಿದರೆ ಬಹುತೇಕ ರಾ.ಹೆ.66 ಕಾಮಗಾರಿ ಪೂರ್ಣಗೊಂಡು, ವಾಹನ ಸಂಚಾರಕ್ಕೆ 2021ಕ್ಕೆ ಮುಕ್ತವಾಗುವ ಲಕ್ಷಣಗಳಿವೆ. ಕಾರವಾರ ತಾಲೂಕಿನಲ್ಲಿ ಒಂದೆರಡು ಕಡೆ ಭೂ ವಿವಾದವಿದ್ದು, ಅದು ಕಂದಾಯ ಇಲಾಖೆ ಭೂಮಿಯಲ್ಲ. ಯೋಜನೆ ಅನುಷ್ಠಾನ ಮಾಡುತ್ತಿರುವ ಕಂಪನಿ ಆಸಕ್ತಿವಹಿಸಿ ರಾ.ಹೆ. ಪ್ರಾಧಿಕಾರದ ನೆರವು ಪಡೆದು, ಅರಣ್ಯ ಇಲಾಖೆ ನೆರವಿನೊಂದಿಗೆ ವಿವಾದ ಬಗೆಹರಿಸಿಕೊಂಡರೆ ವರ್ಷದಲ್ಲಿ ಚತುಷ್ಪಥದಲ್ಲಿ ಸಂಚರಿಸುವ ಭಾಗ್ಯ ನಾಗರಿಕರದ್ದು.
•ನಾಗರಾಜ ಹರಪನಹಳ್ಳಿ