ಬೆಂಗಳೂರು: ಚೀನ-ಭಾರತ ಗಡಿಭಾಗದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸಾವಿನ ವಿಷಯದಲ್ಲಿ ಕೇಂದ್ರ ಸರಕಾರ ಜನರ ದಾರಿ ತಪ್ಪಿಸುವ ಕೆಲಸ ಮಾಡುವ ಮಾಡುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೀನ ಸೈನಿಕರು ನಮ್ಮ ಗಡಿಯನ್ನು ದಾಟಲಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಹಾಗಾದರೆ ನಮ್ಮ ಸೈನಿಕರು ಸಾವನ್ನಪ್ಪಿದ್ದು ಹೇಗೆ? ಚೀನ ಗಡಿಯಲ್ಲಿ ಸಾವನ್ನಪ್ಪಿದರೋ ಅಥವಾ ಭಾರತದ ಗಡಿಯಲ್ಲಿ ಹುತಾತ್ಮರಾದರೊ ಎನ್ನುವುದು ಸ್ಪಷ್ಟವಾಗಬೇಕು. ಇದರಲ್ಲಿ ಏನೋ ಶಂಕೆ ವ್ಯಕ್ತವಾಗುತ್ತಿದೆ. ಸೈನಿಕರ ಸಾವಿನ ಕಾರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
20 ಸೈನಿಕರು ಹುತಾತ್ಮರಾಗಿದ್ದು ಹೇಗೆ ಎನ್ನುವುದನ್ನೇ ನಮ್ಮ ನಾಯಕರು ಕೇಂದ್ರ ಸರಕಾರವನ್ನು ಕೇಳುತ್ತಿದ್ದಾರೆ. ಆದರೆ ಸರಕಾರ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಪ್ರವಾಸದ ವೇಳೆ ಸಭೆ ಮಾಡಿದ್ದಾರೆ. ಸಭೆಗಳಿಗೆ ಸಂಸದರು, ಶಾಸಕರು ಯಾರನ್ನೂ ಕರೆದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ ವಿರುದ್ಧ ಅಸಮಾಧಾನ ಹೊರ ಹಾಕಿದರು.
ನಾವು ಸಭೆಗೆ ಬೇಡ ಎಂದರೆ ಪರವಾಗಿಲ್ಲ. ಅವರೇ ಸಭೆ ಮಾಡಿಕೊಳ್ಳಲಿ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಎಲ್ಲರ ಸಹಕಾರ ಮುಖ್ಯ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.