Advertisement

ಬಿಸಿಲಿನ ಬೇಗೆಗೆ ಹೈರಾಣಾದ ಜನತೆ… ಮುಂಗಾರು ಆರಂಭದಲ್ಲಿ ಬಿರುಸಾಗಿರುವ ಸಾಧ್ಯತೆಯೂ ಕಡಿಮೆ

11:13 PM May 28, 2023 | Team Udayavani |

ಉಡುಪಿ: ಕರಾವಳಿಯಾದ್ಯಂತ ಬಿಸಿಲಿನ ತಾಪಕ್ಕೆ ಜನರು ಹೈರಾಣಾಗುತ್ತಿದ್ದಾರೆ. ಕೂಲಿ ಕಾರ್ಮಿಕರು ಸಹಿತ ಬಿಸಿಲಿಗೆ ಮೈಯೊಡ್ಡಿ ಕೆಲಸ ನಿರ್ವಹಿಸುವವರು ಬಿಸಿಲಿನ ಬೇಗೆಗೆ ಬಳಲುತ್ತಿದ್ದಾರೆ.

Advertisement

ಬೇಸಗೆ ಮಳೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ಇರುವುದು ಕೂಡ ಬಿಸಿಲಿನ ತಾಪ ಹೆಚ್ಚಲು ಕಾರಣವಾಗಿದೆ. ಬೆಳಗ್ಗೆ 10ರ ಬಳಿಕ ಸಂಜೆ 4 ಗಂಟೆಯವರೆಗೂ ಹೊರಗೆ ಹೋಗುವುದಕ್ಕೆ ಅಸಾಧ್ಯ ಎಂಬಷ್ಟು ಪ್ರಖರವಾಗಿರುತ್ತದೆ ಬಿಸಿಲು.

ಇವಿಷ್ಟೇ ಅಲ್ಲದೆ ನಗರದಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಕಟ್ಟಡಗಳು ಹಾಗೂ ಗ್ರಾಮಾಂತರದಲ್ಲಿ ಕಾಂಕ್ರೀಟ್‌ ರಸ್ತೆಗಳು ಕೂಡ ಬಿಸಿಲಿನ ಕಾವು ಏರಲು ಕಾರಣವಾಗುತ್ತಿದೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಮಾರ್ಚ್‌ನಿಂದಲೇ ಬೇಸಗೆ ಮಳೆ ಸುರಿದ ಪರಿಣಾಮ ಮರಗಳು ಚಿಗುರಿ ಹೆಚ್ಚಿನ ಕಡೆ ಸ್ವಲ್ಪವಾದರೂ ತಂಪಗಿನ ವಾತಾವರಣ ಇತ್ತು. ಆದರೆ ಈ ಬಾರಿ ಇನ್ನೂ ಸರಿಯಾಗಿ ಮಳೆ ಬಾರದೆ ಮರ ಗಿಡಗಳು ಒಣಗಿ ನಿಂತಿವೆ. ಬಾವಿ ಮತ್ತು ನದಿಗಳಲ್ಲಿ ಕೂಡ ನೀರಿನ ಮಟ್ಟ ತೀರಾ ಇಳಿದಿರುವುದರಿಂದ ತೋಟಗಳಿಗೂ ನೀರಿಲ್ಲದೆ ಹೆಚ್ಚಿನ ಕಡೆ ಬಿಸಿಗಾಳಿಯ ಅನುಭವವಾಗುತ್ತಿದೆ.

ಮುಂದಿದೆ ಮತ್ತಷ್ಟು ಸೆಕೆ
ಜಿಲ್ಲೆಯಲ್ಲಿ ಮೇ 21 ರಂದು 34.3, ಮೇ 22ರಂದು 34.8, ಮೇ 23ರಂದು 34.6, ಮೇ 24ರಂದು 34.5, ಮೇ 25ರಂದು 34.8, ಮೇ 26ರಂದು 35, ಮೇ 27ರಂದು 33.5, ಮೇ 28ರಂದು 33.5 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಮೇ 29ರಂದು 34.3, ಮೇ 30ರಂದು 34.2, ಮೇ 31ರಂದು 33.9 ಹಾಗೂ ಜೂನ್‌ 1ರಂದು 33.3 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ನಿರೀಕ್ಷೆ ಹೊಂದಲಾಗಿದೆ. ಈ ವಾರ ಸಂಜೆಯ ವೇಳೆ ಮೋಡ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಇದರಿಂದ ಕನಿಷ್ಠ ತಾಪಮಾನದಲ್ಲಿ ಅಲ್ಪ ಇಳಿಕೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಮಳೆ ಬಾರದಿದ್ದರೆ ಮತ್ತಷ್ಟು ಸಂಕಷ್ಟ
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್‌ 4ರ ಬಳಿಕ ಮಳೆ ಸುರಿಯುವ ಸಾಧ್ಯತೆಗಳಿವೆ. ಆದರೆ ಮೊದಲ ಒಂದೆರಡು ವಾರ ಮುಂಗಾರು ದುರ್ಬಲವಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

Advertisement

ಈಗಲೇ ನೀರಿನ ಅಭಾವ ಉಂಟಾಗಿದೆ. ಈ ನಡುವೆ ಸೋಮವಾರ ಶಾಲಾರಂಭವಾಗಲಿದೆ. ಈ ನಡುವೆ ಆರಂಭದಲ್ಲಿಯೇ ಮುಂಗಾರು ದುರ್ಬಲವಾದರೆ ವಿಪರೀತ ಬಿಸಿಲು ಹಾಗೂ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಗಳಿವೆ.

ವಾಹನ ಸವಾರರೂ ಹೈರಾಣು
ನಗರದಲ್ಲಿ ಓಡಾಟ ನಡೆಸುವ ದ್ವಿಚಕ್ರ ವಾಹನ ಸವಾರರೂ ಬಿಸಿಲಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಒಂದೆಡೆ ಟ್ರಾಫಿಕ್‌ ದಟ್ಟಣೆಯಾದರೆ ಮತ್ತೂಂದೆಡೆ ಬಿಸಿಲಿನ ಧಗೆಯನ್ನು ಎದುರಿಸುವುದೇ ದೊಡ್ಡ ಸವಾಲಿನ ಕೆಲಸ ಎಂಬಂತಾಗಿದೆ.

ನೆರಳಿಗಾಗಿ ಹುಡುಕಾಟ !
ಮನೆಯಿಂದ ಹೊರಗೆ ಬಂದವರು ಸೆಕೆ ತಾಳಲಾರಂದೆ ನೆರಳು ಎಲ್ಲಿದೆ ಎಂದು ಹುಡುಕಾಡುವಂತಾಗಿದೆ. ಹಿಂದೆ ನಗರದ ಅಲ್ಲಲ್ಲಿ ಮರಗಳು ಇದ್ದುದರಿಂದ ನೆರಳು ಸಿಗುತ್ತಿತ್ತು. ಈಗ ಅಲ್ಲೆಲ್ಲ “ಕಾಂಕ್ರೀಟ್‌ ಕಾಡು’ ಬೆಳೆದಿದೆ. ಅದರಡಿ ನಿಂತರೆ ಸೆಕೆ ಮತ್ತಷ್ಟು ಹೆಚ್ಚಾಗುವುದೇ ವಿನಾ ಕಡಿಮೆಯಾಗುವುದಿಲ್ಲ. ಇದರಿಂದ ಎಲ್ಲೂ ನೆಮ್ಮದಿ ಇಲ್ಲದೆ ಸುತ್ತಾಡುವಂತಾಗುತ್ತಿದೆ.

ಈ ವಾರಪೂರ್ತಿ ಬಿಸಿಲು
ಸದ್ಯದ ಹವಾಮಾನ ವರದಿಯ ಅನ್ವಯ ಜಿಲ್ಲೆಯಲ್ಲಿ ಜೂನ್‌ 4 ರ ಬಳಿಕ ಮಳೆ ಸುರಿಯುವ ಸಾಧ್ಯತೆಗಳಿವೆ. ಪ್ರಸ್ತುತ ಬಿಸಿಲಿನ ತಾಪವೂ ಅಧಿಕವಾಗಿದ್ದು, ಒಂದು ವಾರಗಳ ಕಾಲ ಹೀಗೆಯೇ ಬಿಸಿಲಿನ ಝಳ ಮುಂದುವರಿಯಲಿದೆ.
-ಪ್ರವೀಣ್‌ ಕೆ.ಎಂ., ತಾಂತ್ರಿಕ ಅಧಿಕಾರಿ, ಜಿಕೆಎಂಎಸ್‌ ಪ್ರಾಜೆಕ್ಟ್, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರ ಬ್ರಹ್ಮಾವರ

Advertisement

Udayavani is now on Telegram. Click here to join our channel and stay updated with the latest news.

Next