ಖಾಲಿ ಜೀವನದಲ್ಲಿ ಕವಿತೆಗಳು ಬೇಗನೇ ಹುಟ್ಟಿಕೊಳ್ಳುತ್ತವೆ ಎನ್ನುವ ಮಾತುಂಟು. ಇದನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಒಂದು ಇನ್ನೂ ಹಸಿಯಾದ ತಿಳಿ ಮನಸ್ಸಿನ ಸುಂದರ ಕವಿತೆಗಳು. ಮತ್ತೂಂದು, ಪ್ರೀತಿಸಿ ಬರಡಾಗಿ ಹೋದ ವಿರಹಗೀತೆಗಳು. ಪ್ರೀತಿಯ ಅಂಬರವೇರಿದವನಿಗೆ ಸ್ವರ್ಗಕ್ಕೆ ಮೂರೇ ಗೇಣಿನಂತ ಜೀವನ. ಅದೇ ಪ್ರಪಾತಕ್ಕೆ ಬಿದ್ದವರಿಗೆ ಸಣ್ಣ ಅಲೆಯೂ ತ್ಸುನಾಮಿಯಂತೆ ಗೋಚರವಾಗುತ್ತದೆ. ಇವೆರಡರ ನಡುವೆ ಸಮತೋಲನದ ಹೆಜ್ಜೆ ಇಟ್ಟಲ್ಲಿ ಜೀವನದ ಹಾದಿ ಕಂಡೀತು.
ಪ್ರೀತಿ-ಪ್ರೇಮ ಇದ್ದಲ್ಲಿ, ವಿರಹ-ನೋವು ಹೊಸದಲ್ಲ. ಅದು ಇಂದು ನಿನ್ನೆಯ ಕತೆಯೂ ಅಲ್ಲ. ಗಂಡಹೆಂಡತಿಯರ ಮಧ್ಯೆಯೂ ಒಂದಿಷ್ಟು ವಿರಸಗಳು ಮೂಡಿ ಬೇರಾಗಿ ಮತ್ತೆ ಒಂದಾದ ಉದಾಹರಣೆಗಳಿವೆ. ಶಿವನೊಡನೆ ಮುನಿಸಿಕೊಂಡು ಹೋದ ಪಾರ್ವತಿ, ವಿಷ್ಣುವಿನೊಡನೆ ಸಿಟ್ಟು ಮಾಡಿಕೊಂಡು ಧರೆಗಿಳಿದ ಲಕ್ಷ್ಮಿಯ ಕತೆಯೇ ನಮ್ಮ ಮುಂದಿದೆ. ಪ್ರೇಮಕ್ಕಿಂತಲೂ ತೀವ್ರವಾಗಿ ಇರಿಯುವುದು ವಿರಹವೇ. ಜಾನೇ ಕಹಾ ಗಯೇ ವೋ ದಿನ್, ಕಹೆ¤à ಥೇ ತೇರಿ ರಾಹ್ ಮೇ ;ನಝರೋಂಕೋ ಹಮ್ ಬಿಚಾಯೇಂಗೇಎಂಬ ಮುಖೇಶ್ ಹಾಡುಗಳು ನೋವನ್ನು ಮತ್ತಷ್ಟು ಕಾಡುವ ಸಾಲುಗಳು. ಚಾಹೇಂಗೆ ತುಮ್ ಉಮರ್‌ಭರ್ ಎನ್ನುವ ಸಾಲಿನಲ್ಲಿ ನೋವು ತುಳುಕಿ ತುಳುಕಿ ಕಾಡುತ್ತದೆ. ವಿಷಾದ ಗೀತೆ ಯಾಕೋ ಹೃದಯಕ್ಕೆ ಬಲು ಹತ್ತಿರ.
ವಿರಹದ ಕತೆಗಿಂತಲೂ ಪ್ರೇಮವಂಚನೆಯ ಕತೆಗಳನ್ನು ಜನರು ಇಷ್ಟಪಡುತ್ತಾರೇನೋ. ವಂಚಿಸುವ ಅವಳನ್ನು ಮತ್ತಷ್ಟು ಪ್ರೀತಿಸುವ “ಅವನು’ ಮತ್ತು ಅವನ ಹಾಡುಗಳು ಹೆಚ್ಚು ಹಿಟ್ ಆದದ್ದುಂಟು. ಕಳೆದ ವರ್ಷ ಬಿಡುಗಡೆಯಾದ “ಬಡಾ ಪಚ್‌ತಾವೋಗೇ…’ ಆಲ್ಬಂ ಹಾಡು ಯಾರಿಗೆ ಗೊತ್ತಿಲ್ಲ. ಅರ್ಜಿತ್ ಸಿಂಗ್ ಧ್ವನಿಯಲ್ಲಿ ಮೂಡಿಬಂದ ಹಾಡನ್ನು ಯುವ ಮನಸ್ಸುಗಳು ಬಹಳ ಇಷ್ಟಪಟ್ಟಿದ್ದವು.
ಈ ಹಾಡಿನಲ್ಲಿ ಅವಳನ್ನು ಮೋಸಗಾತಿ ಎಂದು ಜರೆಯುವುದಿಲ್ಲ. ಹೊ ಮುಜೆ ಚೋಡ್‌ಕರೆ ಜೋ ತುಮ್ ಜಾವೋಗೆ, ಬಡಾ ಪಚ್‌ತಾವೋಗೆ ಎನ್ನುತ್ತ, ಮತ್ತೂಬ್ಬನ ಪ್ರೀತಿಸುವ ಅವಳನ್ನು, ಪ್ರೇಮಿಯು ಇನ್ನಷ್ಟು ಪ್ರೀತಿಸುತ್ತಾನೆ. ನೀನು ಪಶ್ಚಾತ್ತಾಪ ಪಡುತ್ತೀ ಎಂಬ ಸಣ್ಣ ಕಿವಿಮಾತು ಹೇಳುತ್ತಲೇ ಅವಳಿಗೆ ಬೇಡವಾದ ತಾನು ಇಲ್ಲವಾಗಿ ಬಿಡುತ್ತಾನೆ.
ಪ್ರೇಮವು ಬದುಕಿಗೆ ನೀರುಣಿಸುವ ಅಂತರ್ಜಲವೂ ಹೌದು. ತಪ್ಪಿ ನಡೆದರೆ ಪತಂಗದ ರೆಕ್ಕೆ ಸುಡುವ ಬೆಂಕಿಯೂ ಹೌದು ಎಂಬ ಮಾತಿದೆಯಲ್ಲ. ಪ್ರೀತಿ ವಿಷವಾದ ಹಾಡು ಅದು. ಪ್ರೀತಿ ವಿಷವಾಗಲು ಮತ್ತೂಂದು ಜೀವದ ಪ್ರವೇಶ ಆಗಬೇಕೆಂದೇನೂ ಇಲ್ಲ. ಆಶಿಕ್2 ಎಂಬ ಸಿನಿಮಾದಲ್ಲೊಂದು ಹಾಡು. ದೂರದ ಬೆಟ್ಟದಿಂದ ಸೀಳಿಕೊಂಡು ಬರುವ ಆರ್ತನಾದದಂತೆ ಇರುವ ಮೃದು ಧ್ವನಿಯ ಆ ಹಾಡು ಬಹಳ ಜನಪ್ರಿಯವಾಗಿತ್ತು. ಸುನ್ ರಹಾ ಹೇ ನ ತೂ… ರೋ ರಹಾ ಹೂಂ ಮೆ ಎಂಬ ಹಾಡು ಪ್ರೀತಿಯ ತೀವ್ರತೆಯನ್ನು ಸ್ವತಃ ಭರಿಸಲಾರದೇ ಸೊರಗುವ ನಾಯಕನ ಆರ್ತತೆ. ಪ್ರೀತಿಯು ಸಂಭ್ರಮವೂ ಹೌದು. ನೋವೂ ಹೌದು. ಸುಳಿಯೊಳಗಿನ ಸೆಳೆತದಂತೆ ನಿಯಂತ್ರಣ ತಪ್ಪಿಸುವ ಭಾವವೂ ಹೌದು. ಇಸ್ ಪ್ಯಾರ್ ಕೋ ಮೇ ಕ್ಯಾ ನಾಮ್ ದೂಂ… ಎನ್ನುವ ಹಾಡು ಕೇಳಿಲ್ಲವೇ.
ಯಾವುದೋ ಕಾರಣಕ್ಕೆ ಪ್ರೀತಿ ಮುರಿದು ಬೀಳಬಹುದು. ಅದು ತೀವ್ರ ನೋವು ಕೊಡಬಹುದು. ಅಂದ ಮಾತ್ರಕ್ಕೆ ಅಷ್ಟರವರೆಗೆ ಸವಿದ ಪ್ರೀತಿಯ ಕಡೆಗೆ ಒಂದು ಗೌರವದ ನೋಟವಿರಲಿ.
-ರೇಖಾ ಕೆ. ಎಂ.
ದ್ವಿತೀಯ ಬಿಎ
ಶ್ರೀ ಧ.ಮಂ. ಕಾಲೇಜು, ಉಜಿರೆ