Advertisement

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

10:30 PM Apr 25, 2024 | Team Udayavani |

ಹುಬ್ಬಳ್ಳಿ: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ. ನಮ್ಮ ಮನೆಗೆ ಪೊಲೀಸ್‌ ಭದ್ರತೆ ಕೊಡಬೇಕು. ಹಂತಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹತ್ಯೆಯಾದ ನೇಹಾಳ ತಂದೆ ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನನ್ನ ಮಗಳ ಕೊಲೆಯ ಹಿಂದೆ ಸಾಕಷ್ಟು ಪಿತೂರಿಗಳು ನಡೆದಿವೆ. ಕೊಲೆಗೂ ಮುಂಚೆ ನನ್ನ ಮನೆಯ ಸುತ್ತಮುತ್ತ ಕೆಲವರು ಬಂದು ಹೋಗಿದ್ದಾರೆ ಎಂದರು.

ಪ್ರಕರಣದ ಸಮಗ್ರ ತನಿಖೆ ನಡೆಸಬೇಕು. ಆರೋಪಿಯನ್ನು ಮಂಪರು ಪರೀಕ್ಷೆಗೊಳಪಡಿಸಿದರೆ ಎಲ್ಲ ಸತ್ಯಗಳು ಹೊರಬೀಳುತ್ತವೆ. ಈ ಬಗ್ಗೆ ಮುಖ್ಯಮಂತ್ರಿಗೂ ಒಂದಿಷ್ಟು ಮಾಹಿತಿಗಳನ್ನು ನೀಡಿದ್ದೇನೆ. ಕೊಲೆ ಆರೋಪಿ ಜತೆ ಶಾಮೀಲಾದವರ ಬಂಧನಕ್ಕೆ ಆಗ್ರಹಿಸಿದ್ದೇನೆ. ಸದ್ಯ ನಡೆಯುತ್ತಿರುವ ತನಿಖೆ ಇನ್ನೂ ಸಮಾಧಾನ ತಂದಿಲ್ಲ. ಸಿಐಡಿ ಅವರು ತಮ್ಮದೇ ಮಗ್ಗಲಿನಲ್ಲಿ ವಿಚಾರಣೆ ನಡೆಸಿದ್ದಾರೆ. ನನ್ನ ಮಗಳಿಗೆ ತ್ವರಿತಗತಿಯಲ್ಲಿ ನ್ಯಾಯ ಸಿಗಬೇಕು. ಆರೋಪಿಗೆ ಗಲ್ಲು ಶಿಕ್ಷೆಯಾದರೆ ಮಾತ್ರ ಸಮಾಧಾನವಾಗುತ್ತದೆ ಎಂದರು.

ತನಿಖೆಗೆ ಸಹಕಾರ:

ನೇಹಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿ ಸಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಮ್ಮ ಮನೆಗೆ ಆಗಮಿಸಿ ಘಟನೆ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ತನಿಖೆಗೆ ಸಹಕಾರ ನೀಡುವಂತೆ ಕೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಮಗ್ಗಲುಗಳಲ್ಲಿ ತನಿಖೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾ ಹಂತದಲ್ಲಿರುವಾಗ ಈ ಬಗ್ಗೆ ಹೆಚ್ಚಿನ ವಿವರಣೆ ಕೊಡಲು ಆಗುವುದಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ನಾನೇ ಪೂರ್ಣ ಮಾಹಿತಿ ನೀಡುತ್ತೇನೆ ಎಂದರು.

Advertisement

ನನ್ನ ಹೇಳಿಕೆಗಳನ್ನು ಬದಲಾವಣೆ ಮಾಡುತ್ತಿಲ್ಲ. ಅಂದು ಇದ್ದ ನಿಲುವೇ ಇವತ್ತೂ ಇದೆ. ಮಗಳ ಹತ್ಯೆ ಬಳಿಕ ಸರ್ವಜನಾಂಗದವರು ಮನೆಗೆ ಆಗಮಿಸಿ ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ. ಇದೇ ವೇಳೆ ಕೆಲವೊಂದು ಅನುಮಾನಾಸ್ಪದ ಸನ್ನಿವೇಶ ಕಂಡುಬಂದಿದೆ. ನೇಹಾಳ ಶಿವಗಣಾರಾಧನೆಯ ಐದನೇ ದಿನದಂದು ಸಂತಾಪದ ನೆಪದಲ್ಲಿ ಒಬ್ಬರು ಮನೆಯೊಳಗೆ ಬಂದು ವೀಡಿಯೋ ಮಾಡಿಕೊಂಡು ಹೋಗಿದ್ದಾರೆ. ಕೊಲೆ ಮಾಡುವ ಮುನ್ನ ಆರೋಪಿ ಬಿಡ್ನಾಳ ಬಸವನಗರದಲ್ಲಿ ಅನುಮಾನಾಸ್ಪದವಾಗಿ ಅಡ್ಡಾಡಿದ್ದನೆಂದು ತಿಳಿದುಬಂದಿದೆ. ಅನಾಮಧೇಯ ವ್ಯಕ್ತಿಗಳು ನಮ್ಮ ಮನೆಯ ಸುತ್ತಮುತ್ತ ಓಡಾಡುತ್ತಿದ್ದಾರೆ. ಇವತ್ತು ಕೆಲವರು ಯಾವುದೋ ಸಂಚು ಹಾಕಿದ್ದಾರೆ ಎಂದು ಅನುಮಾನ ಬಂದಿದೆ. ಕುಟುಂಬಕ್ಕೆ ಭದ್ರತೆ ಕೊಡುವುದಾಗಿ ಪೊಲೀಸ್‌ ಆಯುಕ್ತರು ಹೇಳಿದ್ದಾರೆ. ಅದಕ್ಕೆ ಪೂರಕವಾಗಿ ಭದ್ರತೆ ಕೂಡ ಒದಗಿಸಿದ್ದಾರೆ ಎಂದರು.

ನೇಹಾ ಕುಟುಂಬಕ್ಕೆ 120 ದಿನಗಳಲ್ಲಿ ನ್ಯಾಯ: ಸಿಎಂ

 ಹುಬ್ಬಳ್ಳಿ: ನೇಹಾ ಹತ್ಯೆ ಪ್ರಕರಣದಲ್ಲಿ 120 ದಿನಗಳಲ್ಲಿ ನ್ಯಾಯ ಕೊಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಂಜನ ಹಿರೇಮಠ ಕುಟುಂಬಕ್ಕೆ ಭರವಸೆ ನೀಡಿದರು.

ಬಿಡ್ನಾಳ ಬಸವ ನಗರದಲ್ಲಿರುವ ನೇಹಾ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಎಲ್ಲ ರೀತಿಯಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕಾಗಿ ಈಗಾಗಲೇ ವಿಶೇಷ ನ್ಯಾಯಾಲಯ ಮಾಡಲಾಗಿದ್ದು, 90ರಿಂದ 120 ದಿನದೊಳಗೆ ನೇಹಾ ಹತ್ಯೆ ಮಾಡಿರುವ ಆರೋಪಿಗೆ ಅತ್ಯಂತ ಕಠಿನ ಶಿಕ್ಷೆ ಕೊಡಿಸುವಲ್ಲಿ ಎಲ್ಲ ಸಹಕಾರ ನೀಡಲಾಗುವುದು ಎಂದರು.

ನೇಹಾ ಕುಟುಂಬಸ್ಥರಿಂದ  ಮಾಹಿತಿ ಪಡೆದ ಸಿಐಡಿ ತಂಡ

ಹುಬ್ಬಳ್ಳಿ: ನೇಹಾ ಹಿರೇಮಠ ನಿವಾಸಕ್ಕೆ ಗುರುವಾರ ಸಿಐಡಿ ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿ ಪಾಲಕರಿಂದ ಮಾಹಿತಿ ಕಲೆಹಾಕಿತು. ಸಿಐಡಿ ಎಡಿಜಿಪಿ ವಿಜಯಕುಮಾರ ಸಿಂಗ್‌, ಎಸ್ಪಿ ವೆಂಕಟೇಶ ಎನ್‌. ನೇತೃತ್ವದ ತಂಡವು ನಗರದ ಬಿಡ್ನಾಳ ಬಸವನಗರದಲ್ಲಿರುವ ನೇಹಾ ಮನೆಗೆ ಭೇಟಿ ನೀಡಿ ತಂದೆ ನಿರಂಜನ, ತಾಯಿ ಗೀತಾ ಅವರಿಂದ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಒಂದು ತಾಸು ಕೆಲವು ಹೇಳಿಕೆ ಪಡೆದುಕೊಂಡಿತು. ಇನ್ನುಳಿದಂತೆ ಪ್ರತ್ಯೇಕ ಎರಡು ತಂಡಗಳಲ್ಲಿ ತನಿಖೆ ಕೈಗೊಂಡ ಸಿಐಡಿ ತಂಡದವರು ಫಯಾಜ್‌ನಿಂದ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಹಾಗೂ ಘಟನ ಸ್ಥಳದಲ್ಲಿದ್ದ ಕೆಲವರಿಂದ ಘಟನೆ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next