ಬೆಂಗಳೂರು: ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆ ವೇಳೆ ಪ್ರಭಾವಿಗಳಿಂದ ಒತ್ತಡ ತಂದು, ಲಾಬಿ ಮಾಡಿ ಅಧ್ಯಕ್ಷರಾದ ಸಾಕಷ್ಟು ಪಾಲಿಕೆ ಸದಸ್ಯರಿಗೆ, ತಾವು ಸ್ಥಾಯಿ ಸಮಿತಿ ಅಧ್ಯಕ್ಷರು ಎಂಬುದೇ ಮರೆತು ಹೋಗಿದ್ದು, ಸ್ಥಾಯಿ ಸಮಿತಿ ಸಭೆ ನಡೆಸಲು ನಿರಾಸಕ್ತಿ ತೋರುತ್ತಿದ್ದಾರೆ.
ನಗರದ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ಉದ್ದೇಶದಿಂದ ಮೇಯರ್ ಆರ್.ಸಂಪತ್‌ರಾಜ್ ತಿಂಗಳಿಗೆ ನಾಲ್ಕೈದು ಸಭೆ ನಡೆಸುತ್ತಿದ್ದು, ಪಾಲಿಕೆಯಲ್ಲಿ ಅತಿ ಹೆಚ್ಚು ಸಭೆಗಳನ್ನು ನಡೆಸಿದ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆದರೆ, ಸ್ಥಾಯಿ ಸಮಿತಿ ಅಧ್ಯಕ್ಷರು ಮಾತ್ರ ಸಮಿತಿ ಸಭೆಗಳನ್ನು ನಡೆಸಲು ಹಿಂದೇಟು ಹಾಕುತ್ತಿರುವುದು ದಾಖಲೆಗಳಿಂದ ಬೆಳಕಿಗೆ ಬಂದಿದೆ.
ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ವ್ಯಾಪ್ತಿಗೆ ಪಾಲಿಕೆಯ ವಿವಿಧ ವಿಭಾಗಗಳು ಬರುತ್ತವೆ. ವಿಭಾಗದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಸ್ಥಾಯಿ ಸಮಿತಿ ಅಧ್ಯಕ್ಷರು ಮೇಲ್ವಿಚಾರಣೆ ನಡೆಸಿ, ಆಡಳಿತ ಸುಧಾರಣೆಗಾಗಿ ಸಲಹೆಗಳನ್ನು ನೀಡಬಹುದಾಗಿದೆ. ಜತೆಗೆ ಕಡ್ಡಾಯವಾಗಿ ತಿಂಗಳಿಗೆ ಒಂದು ಸಮಿತಿ ಸಭೆ ನಡೆಸಬೇಕೆಂಬ ನಿಯಮವಿದೆ.
ಆದರೆ, ಪಾಲಿಕೆಯ ಎಲ್ಲ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸ್ಥಾಯಿ ಸಮಿತಿ ಸಭೆಗಳನ್ನು ಸಮರ್ಪಕವಾಗಿ ನಡೆಸದ ಹಿನ್ನೆಲೆಯಲ್ಲಿ, ಸ್ಥಾಯಿ ಸಮಿತಿ ಸಭೆಯಲ್ಲಿ ಕೈಗೊಳ್ಳಬೇಕಾದ ಹಲವಾರು ನಿರ್ಣಯಗಳನ್ನು ಅಧಿಕಾರಿಗಳೇ ತೆಗೆದುಕೊಳ್ಳುತ್ತಿದ್ದಾರೆ. ಪರಿಣಾಮ ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿವೆ ಎಂಬದು ಪಾಲಿಕೆಯ ಹಿರಿಯ ಪಾಲಿಕೆ ಸದಸ್ಯರ ಆರೋಪವಾಗಿದೆ.
ಪಾಲಿಕೆಯ ಸ್ಥಾಯಿ ಸಮಿತಿಗಳ ಅಧಿಕಾರವಧಿ ಅಕ್ಟೋಬರ್‌ಗೆ ಅಂತ್ಯಗೊಳ್ಳಲಿದೆ. ಆದರೂ ಸಮಿತಿ ಅಧ್ಯಕ್ಷರು ಸಭೆಗಳನ್ನು ನಡೆಸುತ್ತಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್ ಅವರು ಹಲವು ಸರಣಿ ಸಭೆಗಳನ್ನು ನಡೆಸಿದ್ದಾರೆ. ಆದರೆ, ಪಾಲಿಕೆಯ ಆಸ್ಪತ್ರೆಗಳ ಸುಧಾರಣೆ ಹಾಗೂ ಗುಣಮಟ್ಟ ಹೆಚ್ಚಿಸಬೇಕಾದ ಆರೋಗ್ಯ ಸ್ಥಾಯಿ ಸಮಿತಿ ಮಾತ್ರ 2018-19ನೇ ಸಾಲಿನ ಏಪ್ರಿಲ್ 1ರಿಂದ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ.
ಹಿರಿಯ ಸದಸ್ಯರು ಸಭೆ ಕರೆಯಬಹುದು: ಸ್ಥಾಯಿ ಸಮಿತಿ ಅಧ್ಯಕ್ಷರು ಸಮರ್ಪಕವಾಗಿ ಸಮಿತಿ ಸಭೆ ನಡೆಸದ ಸಂದರ್ಭದಲ್ಲಿ ಸಮಿತಿಯಲ್ಲಿರುವ ಹಿರಿಯ ಸದಸ್ಯರು ಸಭೆ ಕರೆಯಬಹುದು. ಜತೆಗೆ ಸಮಿತಿ ವ್ಯಾಪ್ತಿಗೆ ಬರುವ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲೂ ಅವರಿಗೆ ಅವಕಾಶವಿದೆ. ಆದರೆ ಅಂತಹ ಪ್ರಯತ್ನಕ್ಕೆ ಹಿರಿಯ ಸದಸ್ಯರು ಮುಂದಾಗಿಲ್ಲ.
2018-19ರಲ್ಲಿ ಯಾವ ಸಮಿತಿಯಿಂದ ಎಷ್ಟು ಸಭೆ?
-ಒಂದು ಬಾರಿಯೂ ಸಭೆ ನಡೆಸದ ಸಮಿತಿ
ಆರೋಗ್ಯ ಸ್ಥಾಯಿ ಸಮಿತಿ
ಸಾಮಾಜಿಕ ನ್ಯಾಯ, ಶಿಕ್ಷಣ, ಮಾರುಕಟ್ಟೆ, ತೆರಿಗೆ ಮತ್ತು ಆರ್ಥಿಕ, ತೋಟಗಾರಿಕೆ, ವಾರ್ಡ್ ಮಟ್ಟದ ಕಾಮಗಾರಿ, ಅಪೀಲು, ನಗರ ಯೋಜನೆ ಸ್ಥಾಯಿ -ಸಮಿತಿಗಳಿಂದ ಒಮ್ಮೆ ಮಾತ್ರ ಸಭೆ
-ಎರಡು ಬಾರಿ ಸಭೆ ನಡೆಸಿರುವ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ
-ಮೂರು ಬಾರಿ ಸಭೆ ನಡೆಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ
-ಲೆಕ್ಕಪತ್ರ ಸ್ಥಾಯಿ ಸಮಿತಿಯಿಂದ 8 ಬಾರಿ ಸಭೆ