ಬೆಂಗಳೂರು: ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ. ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೂತನ ನಿವಾಸ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪರಿಷತ್‌ಗೆ ಟಿಕೆಟ್ ಕೈ ತಪ್ಪಿರುವ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ.
ಅವರು ನಾಲಿಗೆ ಮೇಲೆ ನಡೆಯುವ ನಾಯಕ. ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ನನಗೂ ಅವಕಾಶ ಮಾಡಿಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಸುಪ್ರೀಂ ಕೋರ್ಟ್ ನಾಮ ನಿರ್ದೇಶನಕ್ಕೆ ಅವಕಾಶ ನೀಡಬಾರದು ಎಂದು ಎಲ್ಲಿಯೂ ಹೇಳಿಲ್ಲ. ಜನರ ಮುಂದೆ ನಿಂತು ಬನ್ನಿ ಎಂದು ಹೇಳಿತ್ತು. ನಾವು ಚುನಾವಣೆ ಎದುರಿಸಿ ಸೋತು ಬಂದಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪು ನಮಗೆ ಅಡ್ಡ ಬರುವುದಿಲ್ಲ.
ನನಗೆ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಹೇಳಿದರು. ಆರ್.ಶಂಕರ್ ಮಾತನಾಡಿ, ವಿಶ್ವನಾಥ್ ಅಧಿಕಾರ ಇಲ್ಲದೇ ಬಂದ ವರಲ್ಲ. ಅವರು ಪಕ್ಷ ತೊರೆದು ಬಂದಿದ್ದರಿಂದಲೇ ನಾವೆಲ್ಲ ಬಿಜೆಪಿಗೆ ಬಂದಿದ್ದೇವೆ. ವಿಶ್ವನಾಥ್ ಅವರಿಗೆ ವಯಸ್ಸಾಗಿ ದೆ. ಇಂತಹ ಸಂದರ್ಭದಲ್ಲಿ ಅವರಿಗೆ ಅವಕಾಶ ನೀಡದಿದ್ದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ನಾವೆಲ್ಲ ಒಟ್ಟಾಗಿ ಅವರ ಪರವಾಗಿ ಒತ್ತಡ ಹೇರುತ್ತೇವೆ ಎಂದು ಹೇಳಿದರು.
ಎಚ್.ವಿಶ್ವನಾಥ ಅವರಿಗೆ ಅವಕಾಶ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಾನು ಸಾಮಾನ್ಯ ಕಾರ್ಯಕರ್ತ. ಯಾರಿಗೆ ಯಾವ ಅವಕಾಶ ಕೊಡುತ್ತಾರೆ ಎಂದು ನಾನು ಹೇಳಲು ಆಗುವುದಿಲ್ಲ. ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ.
-ಎಂ.ಪಿ.ರೇಣುಕಾಚಾರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ