Advertisement

“ಪ್ರಕೃತಿ ವಿಕೋಪ ಪರಿಹಾರಕ್ಕೆ ಅನುದಾನ ಕೊರತೆ ಇಲ್ಲ’

07:10 AM Jun 30, 2018 | Team Udayavani |

ಕುಂದಾಪುರ: ಪ್ರಕೃತಿ ವಿಕೋಪ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅನುದಾನದ ಕೊರತೆ ಇಲ್ಲ. ಯಾವುದೇ ರೀತಿಯ ಹಾನಿ ಸಂಭವಿಸಿದರೂ ತತ್‌ಕ್ಷಣ ತಾಲೂಕು ಆಡಳಿತದ ಗಮನಕ್ಕೆ ತನ್ನಿ. ಪರಿಹಾರ ಕಾರ್ಯಾಚರಣೆಗೆ ಅನುಮತಿಗೆ ಕಾಯದೇ ಕಾರ್ಯಾಚರಣೆ ನಡೆಸಿ ಅನಂತರ ಹಣ ಪಡೆದುಕೊಳ್ಳಬಹುದು ಎಂದು ತಹಶೀಲ್ದಾರ್‌ ರವಿ ತಿಳಿಸಿದ್ದಾರೆ.

Advertisement

ಅವರು ಶುಕ್ರವಾರ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಸಮಾಲೋಚನೆಗೆ ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಖಾಸಗಿಯಾದರೂ ಕಾಮಗಾರಿ ಮಾಡಿ
ಸಾರ್ವಜನಿಕರಿಗೆ ಅನುಕೂಲವಾಗುವುದಾದರೆ, ನೆರೆ ನೀರು ಹರಿದು ಹೋಗಬೇಕಾದ ಅನಿವಾರ್ಯ ಇದ್ದರೆ ಖಾಸಗಿ ಜಾಗವಾದರೂ ಅಲ್ಲಿ ಕಾಮಗಾರಿ ನಡೆಸಬಹುದು. ಖಾಸಗಿಯವರ ಕಾಮಗಾರಿಯಿಂದಾಗಿ ಇನ್ನೊಬ್ಬರ ಮನೆ ಮುಳುಗಿಹೋಗುವುದು, ರಸ್ತೆ ಮುಳುಗುವುದು ಇತ್ಯಾದಿಗಳಿದ್ದರೆ ಅದನ್ನು ತೆರವು ಮಾಡಿ ರಕ್ಷಣಾತ್ಮಕ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಜಿಲ್ಲಾಧಿಕಾರಿಗಳ ಆದೇಶವಾಗಿದೆ  ಎಂದು ತಹಶೀಲ್ದಾರ್‌ ಹೇಳಿದರು. ಗಂಗೊಳ್ಳಿಯಲ್ಲಿ ಇಂತಹ ಎಡವಟ್ಟಿನಿಂದಾಗಿ ಮನೆಗೆ ನೀರು ನುಗ್ಗುವ ಸಂದರ್ಭ ಇದ್ದುದನ್ನು ತೆರವು ಮಾಡಬಹುದು ಎಂದರು. 

ಸಮಾನ ಮೊತ್ತ
ಕೇಂದ್ರ ವಿಕೋಪ ಪರಿಹಾರ ನಿಧಿ ಹಾಗೂ ರಾಜ್ಯ ಪರಿಹಾರ ನಿಧಿಯಿಂದ ಸಮಾನವಾಗಿ ಪರಿಹಾರ ಮೊತ್ತ ವಿತರಿಸಲಾಗುವುದು. ಪ್ರಕೃತಿ ವಿಕೋಪದಿಂದ ಮೃತಪಟ್ಟರೆ ಅವರ ಮನೆಯವರಿಗೆ 4 ಲಕ್ಷ ರೂ. ಪರಿಹಾರ, 1 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ವಾರದ ಒಳಗಾಗಿ ನೀಡಲಾಗುವುದು. 60 ಶೇ.ಗಿಂತ ಹೆಚ್ಚಿನ ವೈಕಲ್ಯ ಉಂಟಾದರೆ 2 ಲಕ್ಷ ರೂ., 40ರಿಂದ 50 ಶೇ. ವೈಕಲ್ಯವಾದರೆ 59 ಸಾವಿರ ರೂ., ತೀವ್ರ ಗಾಯವಾಗಿ 1 ವಾರ ಆಸ್ಪತ್ರೆಗೆ ದಾಖಲಾದರೆ 12,700 ರೂ., 1 ದಿನ ದಾಖಲಾದರೆ 4,100 ರೂ. ಪರಿಹಾರ ನೀಡಲಾಗುವುದು. 

ನೆರೆಯಿಂದ ಬಟ್ಟೆ ನಾಶ ಆದರೆ 1,800 ರೂ., ಪಾತ್ರೆ ಇತ್ಯಾದಿ ನಾಶವಾದರೆ 2 ಸಾವಿರ ರೂ., ಬರ, ನೆರೆಯಿಂದಾಗಿ ಕೂಲಿಗೆ ಹೋಗಲು ಅಸಾಧ್ಯವಾದರೆ ಕಾರ್ಮಿಕರಿಗೆ 60 ರೂ. ದಿನಭತ್ಯೆ ನೀಡಲಾಗುವುದು. ನೆರೆ ಪರಿಹಾರಕ್ಕೆ ಉಪಯೋಗಿಸಿದ ದೋಣಿ ಬಾಡಿಗೆ, ಜೆಸಿಬಿ ಬಾಡಿಗೆ ಇತ್ಯಾದಿಗಳನ್ನು ಕೂಡಾ ಮಂಜೂರು ಮಾಡಲಾಗುವುದು ಎಂದರು.

Advertisement

ಮನೆಹಾನಿ
ವಾಸದ ಮನೆಗೆ ಶೇ.75ಕ್ಕಿಂತ ಹೆಚ್ಚಿನ ಹಾನಿ ಸಂಭವಿಸಿದ್ದರೆ  ಅದನ್ನು ಪೂರ್ಣ ಹಾನಿ ಎಂದು ಪರಿಗಣಿಸಲು ಸೂಚನೆ ಬಂದಿದೆ. ಇದಕ್ಕಾಗಿ 95,100 ರೂ.  ಪರಿಹಾರ ದೊರೆಯುತ್ತದೆ. ಶೇ.15ರಷ್ಟು ಮನೆಹಾನಿ ಆದರೆ 5,200 ರೂ. ಪರಿಹಾರಧನ ನೀಡಬಹುದು. ಶೇ.15ರಿಂದ ಶೇ.75ರ ನಡುವಿನ ಮನೆ ಹಾನಿಗೆ ಪರಿಹಾರ ನಿಗದಿ ಮಾಡಿಲ್ಲ. ಆದ್ದರಿಂದ ಇದಕ್ಕೊಂದು ಮಾರ್ಗಸೂಚಿ ಕೊಡುವಂತೆ ಡಿಸಿಯವರು ಸರಕಾರಕ್ಕೆ ಮನವಿ ಮಾಡಿದ್ದಾರೆ . ರಸ್ತೆ, ಸೇತುವೆ ತಾತ್ಕಾಲಿಕ ಉಪಶಮನಕ್ಕೆ ಪರಿಹಾರ ಇದೆ. ಶಾಲಾ ಕಟ್ಟಡ, ಪಶುವೈದ್ಯಕೀಯ, ಆಸ್ಪತ್ರೆ ಇತ್ಯಾದಿಗಳಿಗೆ ಮಳೆಯಿಂದ ಹಾನಿಯಾದರೂ ದುರಸ್ತಿಗೆ ಅನುದಾನ ಇದೆ ಎಂದರು.

ಪರಿಹಾರ
ಸಿಡಿಲು ಬಡಿದು ಹಾನಿಯಾದರೂ ಪರಿಹಾರ ಇದ್ದು ಈಚೆಗೆ ನೂಜಾಡಿಯಲ್ಲಿ ಕರು ಮೃತಪಟ್ಟದ್ದಕ್ಕೆ ಪರಿಹಾರ ನೀಡಲಾಗುವುದು. ವಕ್ವಾಡಿ ನವನಗರದಲ್ಲಿ ಚಲಿಸುತ್ತಿರುವ ಬೈಕಿನ ಮೇಲೆ ಮರ ಬಿದ್ದು ರವಿ ದೇವಾಡಿಗ ಅವರು ಮೃತಪಟ್ಟುದಕ್ಕೆ ಮನೆಯವರಿಗೆ 5 ಲಕ್ಷ ರೂ. ನೀಡಲಾಗಿದೆ. ಮಾಹಿತಿ ಇದ್ದರೆ ಸಹಾಯ ಮಾಡಬಹುದು. ಮಾಹಿತಿಯ ಕೊರತೆ ಇದ್ದರೆ ಸಾರ್ವಜನಿಕರಿಗೆ ಸಹಾಯ ಮಾಡಲಾಗುವುದಿಲ್ಲ. ನೆರೆ ಇತ್ಯಾದಿ ಸಂದರ್ಭ ಮಾನವೀಯತೆಯಿಂದ ವರ್ತಿಸಿ, ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ದೊರೆಯುವಂತೆ ನೋಡಿಕೊಳ್ಳಿ. ಪ್ರಕೃತಿ ವಿಕೋಪ ಎನ್ನುವುದು ಮಾನವ ನಿರ್ಮಿತ ಅಲ್ಲ. ಆದ್ದರಿಂದ ಕರುಣೆಯಿಂದ ವರ್ತಿಸಿ. ಜೀವ ಉಳಿಸುವ ಕಾರ್ಯ ಮೊದಲು ಮಾಡಿ ಎಂದು ಕಿವಿಮಾತು ಹೇಳಿದರು.

ಮಾಹಿತಿ ಕೊಡಿ
ಘಟನೆ ನಡೆದ ತತ್‌ಕ್ಷಣ ತಹಶೀಲ್ದಾರ್‌ ಹಾಗೂ ಇಒಗೆ ಮಾಹಿತಿ ಕೊಡಿ ಎಂದು ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ  ಕಿರಣ ಕೆ. ಪೆಡೆ°àಕರ್‌ ಹೇಳಿದರು. ಪ್ರಕೃತಿ ವಿಕೋಪ ಸಂಭವಿಸಬಹುದಾದ ಜಾಗಗಳ ಕುರಿತು ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳಿ. ಈ ಸಂದರ್ಭ ನೆರವಿಗೆ ಬರುವವರ ಮಾಹಿತಿಯನ್ನೂ ಇಟ್ಟುಕೊಳ್ಳಿ. ದೋಣಿ ನಡೆಸುವವರು, ಜೆಸಿಬಿ, ಈಜುಗಾರರು ಇತ್ಯಾದಿ ಆಪದಾºಂಧವರ ಮಾಹಿತಿ ಇರಲಿ. ರಾಜ್ಯ ಸರಕಾರದ 33 ಇಲಾಖೆಗಳಿದ್ದು ಅವುಗಳ ಮುಖ್ಯಸ್ಥರ ಸಂಪರ್ಕ ಸಂಖ್ಯೆ ಇಟ್ಟುಕೊಳ್ಳಿ. ಆಯಾ ಇಲಾಖೆಗೆ ಸಂಬಂಧಿಸಿದ ಮಾಹಿತಿ ಆಯಾ ಇಲಾಖೆಯವರಿಗೆ ನೀಡಬಹುದು ಎಂದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಇಬ್ರಾಹಿಂಪುರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next