Advertisement

ಪ್ರಕೃತಿಯೇ ನನ್ನನ್ನು ಬಳಸಿಕೋ ಎನ್ನುವುದಕ್ಕೂ ವ್ಯತ್ಯಾಸವಿದೆ! 

10:55 AM Jun 17, 2018 | |

ಕವಿತೆ ಎಂದರೆ ಅಥವಾ ಎಲ್ಲ ಕಲೆಗಳು ಕೂಡ ನಮ್ಮನ್ನು ನಾವು ತೋಡಿಕೊಳ್ಳುವ ಸೃಜನ ವ್ಯಾಪಾರವಾಗಿವೆ. ತನ್ನನ್ನು ತೋಡಿಕೊಳ್ಳುವ ಈ ಸ್ವಾಭಿವ್ಯಕ್ತಿಗೆ ನೂರು ಮುಖಗಳಿರಬಹುದು, ಆ ಮಾತು ಬೇರೆ. ಆದರೆ ತೋಡಿಕೊಳ್ಳುವುದೆನ್ನುವುದು ಜೀವದ ಅಗತ್ಯವಾಗಿದೆ. ಮತ್ತು ಅದು ಜೀವದ ಸಹಜ ಚಟುವಟಿಕೆಯೂ ಆಗಿದೆ. ಹಾಡು-ಕುಣಿತ-ಚಿತ್ರಬಣ್ಣಗಳಿಲ್ಲದ ಜನಾಂಗವೇ ಇಲ್ಲ. ನಾವು ತೋಡಿಕೊಳ್ಳುವೆವೆಂದರೆ ನಮಗೆ ಪ್ರೇಕ್ಷಕನಾಗಿ, ಶ್ರೋತೃವಾಗಿ ಸಾಕ್ಷಿಯಾಗಿ ಲೋಕ ನಮ್ಮ ಮುಂದಿದೆ. ತೋಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತಿದೆ. ಲೋಕಕ್ಕೂ ಇದು ಗೊತ್ತಿರುವಂಥದೇ. ಆದರೆ ನಮ್ಮ ಬದುಕಿನ ಶೈಲಿಯೊಂದಿಗೇ ಸೇರಿಹೋದಂತಿರುವ, ಮೇಲ್ನೋಟಕ್ಕೆ ಸರಳವಾಗಿ ತೋರುವ ಈ ವ್ಯವಹಾರದಲ್ಲಿ ವಿಶೇಷ ಸಂಗತಿಗಳಿರುವಂತೆ ಕಂಡುಬರುತ್ತದೆ. ಅದು ಕಲೆಗೆ ಸಂಬಂಧಪಟ್ಟ ನಮ್ಮ ಅಸ್ತಿತ್ವದ ಆಳವಾದ ಸ್ತರಗಳಿಗೆ ಸಂಬಂಧಪಟ್ಟ ಸಂಗತಿಗಳು. ಹೇಗೆಂದರೆ, ನಮ್ಮನ್ನು ನಾವು ತೋಡಿಕೊಳ್ಳುವಾಗ ಈಗಾಗಲೇ ನಮಗೆ ತಿಳಿದಿರುವ ನಮ್ಮ ಪರಿಚಿತ ವ್ಯಕ್ತಿತ್ವವನ್ನು ನಾವು ಪ್ರಕಟಿಸುವುದಲ್ಲ. ಅಷ್ಟೇ ಆದರೆ ಅದು ಜೀವದ ಅಗತ್ಯವೆನ್ನಿಸದು. ನಿಜವಾದ ತೋಡಿಕೊಳ್ಳುವಿಕೆಯಲ್ಲಿ ನಮ್ಮ ಅಪರಿಚಿತ-ಅಸ್ಪಷ್ಟ-ಅವಿಶದ ವ್ಯಕ್ತಿತ್ವ ; ಕನಸಿನಂಥ ವ್ಯಕ್ತಿತ್ವವೂ ಸೇರಿಕೊಂಡಿರುತ್ತದೆ.

Advertisement

ನಿಜಕ್ಕೂ ಪ್ರಕಟವಾಗಲು ಬಯಸುವಂಥದು ಯಾವುದು? ಯಾವುದು ಪ್ರಕಟವಾಗಿಲ್ಲವೋ ಅಂದರೆ ಆಳದಲ್ಲಿದೆಯೋ ಪ್ರಕಟವಾಗಲು ನೇರಮಾರ್ಗವಿಲ್ಲದೆ ಉಪಾಯಾಂತರಗಳನ್ನು ಯಾವುದು ನೆಚ್ಚಿಕೊಳ್ಳಬೇಕಾಗಿದೆಯೋ, ತೋಡಿಕೊಳ್ಳುವ ಪ್ರಕ್ರಿಯೆಯಲ್ಲಿಯೇ ಒಂದು ಕ್ರಾಂತಿಯಾದಾಗ ಮಾತ್ರ ತನ್ನ ಇರುವಿಕೆಯನ್ನು ಸೂಚಿಸಲಾಗುವುದೋ ಅಂದರೆ ತೋಡಿಕೊಳ್ಳುವ ಪೂರ್ವದಲ್ಲಿ ಗೊತ್ತಿಲ್ಲದೆ ಇದ್ದು ತೋಡಿಕೊಳ್ಳುತ್ತ ತೋಡಿಕೋಳ್ಳುತ್ತ ಹೋದಂತೆ ಕಾಣಿಸಿಕೊಳ್ಳುವ, ಹಾಗಲ್ಲದೆ ಕಾಣಿಸಿಕೊಳ್ಳದ ಮನದಾಳದ ಪದರಗಳಿವು!  ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ , ಕಣ್ಣಿಗು ಕಣ್ಣಾಗಿ ಒಳಗಿಹುದು ಎಂದು ಬೇಂದ್ರೆಯವರು ಹೇಳುವಾಗ ಈ ಆಳವನ್ನೇ ಸೂಚಿಸುತ್ತಾರೆ. ಶಬ್ದದೊಳಗಣ ನಿಃಶಬ್ದದಂತೆ ಗುಹೇಶ್ವರಾ ನಿಮ್ಮ-ಶರಣ ಸಂಬಂಧ ಎಂದು ಅಲ್ಲಮ ಹೇಳುವಾಗ ಹೊಳೆಯಿಸುವುದು-ನಿಃಶಬ್ದವನ್ನು ಉದ್ದೇಶಿಸಿಯೇ ಶಬ್ದವು ಮಾತಾಡುವುದು ಸಾಧ್ಯ; ಶಬ್ದವು ಇನ್ನೊಂದು ಶಬ್ದವನ್ನು ಕೇಳಲಾರದು; ನಿಃಶಬ್ದ ಮಾತ್ರ ಕೇಳಬಲ್ಲುದು, ಆದುದರಿಂದ ಶಬ್ದಕ್ಕೆ ತನ್ನನ್ನು ಕೇಳಿಸಿಕೊಳ್ಳುವುದು ಜೀವನ್ಮರಣ ಪ್ರಶ್ನೆಯಾದುದರಿಂದ ಅದು ತಿಳಿದೋ ತಿಳಿಯದೆಯೋ ನಿಃಶಬ್ದವನ್ನು ಕುರಿತೇ ಮಾತಾಡುತ್ತಿದೆ- ಎಂಬುದನ್ನು! ಮೌನವೆಂದರೆ ಅತಿಸೂಕ್ಷ್ಮ ಶಬ್ದಗಳನ್ನೂ ಸಹಾನುಭೂತಿಯಿಂದ ಆಲಿಸುವ ಅವಸ್ಥೆ! ಈ ಅರಿವು ತೋಡಿಕೊಳ್ಳುವ ಶಬ್ದಗಳಿಗೆ ಉಂಟಾದರೆ, ಮೌನದ ಗುಣವೇ ಶಬ್ದಗಳಿಗೂ ಉಂಟಾಗುವುದು. ಅಂದರೆ ವಾಗಾಡಂಬರವೆಲ್ಲ ಇಳಿದು ಹೋಗಿ, ಮೌನದ ಒಡಲಿನಿಂದಲೇ ಹುಟ್ಟಿಬಂದು ಮರಳಿ ಮೌನದತ್ತಲೇ ಸಾಗುವ ಮಾತು, ತಾನು ಇದ್ದೂ ಇಲ್ಲದ, ಇಲ್ಲದೆಯೂ ಇರುವ ಹೊಸಬಗೆಯ ಜೀವಂತಿಕೆಯನ್ನು, ಮೌನದ ಜೀವಂತಿಕೆಗೆ ಸಮೀಪವಾದ ಜೀವಂತಿಕೆಯನ್ನು ಪಡೆಯುವುದು. “ಕೃತಯುಗವು ಕಲಿಯುಗಕೆ ಇಳಿದು ಬಂದಿತು-ಮಾನವನ ದುಃಖದರ್ಶನವು ಬೆಳೆದು ಬಂದಿತು’- ಇದು ಬೇಂದ್ರೆಯವರ ಸಾಲು. ಯುಗ ಕಳೆದಂತೆ ಧರ್ಮಹ್ರಾಸವಾಗುವುದು, ಇದರಿಂದ ದುಃಖವು ಹೆಚ್ಚುವುದು ಎನ್ನುವುದಿದು ಪರಂಪರೆಯ ನಂಬಿಕೆ. ಇದನ್ನು ಒಪ್ಪಿದಂತೇ ಇದ್ದು ಆದರೆ “ಮಾನವನ ದುಃಖ ದರ್ಶನವು ಬೆಳೆದುಬಂದಿತು’ ಎನ್ನುತ್ತಾರೆ ಬೇಂದ್ರೆ. ದುಃಖದರ್ಶನವೆಂದರೆ ಲೋಕ ದುಃಖಾನುಭವ ಸಾಮರ್ಥ್ಯ. ಲೋಕ ಸಹಾನುಭೂತಿ. ಈ ದುಃಖಧಾರಣ ಸಾಮರ್ಥ್ಯದಿಂದಲೇ ದುಃಖದ ನಿವಾರಣೋಪಾಯದ ಚಿಂತನೆ. ಬುದ್ಧನ ಕಾಣೆRಯನ್ನು “ದುಃಖದರ್ಶನ’ ಎಂದು ಬೇಂದ್ರೆ ಕರೆದರು. ಇದು ವಿಶೇಷವಾದ ಮಾತು. ಆನಂದದ ಮಾತೆತ್ತದೆ, ತನ್ನ ಅನುಭವಕ್ಕೆ ಪ್ರಾಮಾಣಿಕವಾಗಿ ಇದ್ದು, ಇಲ್ಲಿರುವುದು ದುಃಖ ಎಂದೊಪ್ಪಿದರೆ ಅಭಿವ್ಯಕ್ತಿಯ ಕ್ರಮವೇ ಬದಲಾಗುವುದು. ಅಭಿವ್ಯಕ್ತಿ ಬದಲಾದರೆ ಸಂಸ್ಕೃತಿಯೇ ಬದಲಾಗುವುದು!

ತೋಡಿಕೊಳ್ಳುವ ಪ್ರಕ್ರಿಯೆಯಲ್ಲಿ  ಇನ್ನೊಂದು ಆಶ್ಚರ್ಯವಿದೆ. ಲೋಕವನ್ನು ನೋಡಿ ಲೋಕದ ದುಃಖವನ್ನು ನೋಡಿ ತನ್ನ ಸುಖವನ್ನು ಕಳೆದುಕೊಂಡ ಮಾತು ಲೋಕವನ್ನು ಮುಟ್ಟಬಲ್ಲುದು. ಲೋಕವನ್ನು ಮುಟ್ಟುವುದೇ ಮಾತಿನ ಸುಖವೆಂದು ಬಗೆದೆವಾದರೆ, ಲೋಕದುಃಖದಿಂದ ತ್ರಸ್ತವಾಗಿ ತಾನು ಸುಖವಾಗಿಲ್ಲದ ಮಾತು ಲೋಕವನ್ನು ಮುಟ್ಟಿ ಆ ಮೂಲಕ ಲೋಕದ ಸುಖವನ್ನು ಹೆಚ್ಚಿಸಿ ತನ್ನ ಸುಖವನ್ನೂ ಕಾಣಬಲ್ಲುದು! ದುಃಖದ ಒಳಗಿರುವ ಸುಖವಿದು! ತೋಡಿಕೊಳ್ಳುವಿಕೆಯಲ್ಲಿ ಮಾತ್ರ ಗೊತ್ತಾಗಬಲ್ಲಂಥ ಅಚ್ಚರಿಗಳಿವು. ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು ಎಂದು ವಚನಕಾರರ ಮಾತು. ಕುರುಡರ ಸ್ಪರ್ಶದಲ್ಲಿರುವ ಜೀವಂತಿಕೆಯೇ ಬೇರೆ. ಒಂದೆಡೆಯಿಂದ ಕಸಿದು ಇನ್ನೊಂದೆಡೆಯಿಂದ ಪೂರಯಿಸುವ ಬದುಕಿನ ಗತಿಗಳೇ ಅನೂಹ್ಯ. ಅಲ್ಲದೆ ಎಲ್ಲ ಅನುಭವಗಳಲ್ಲಿಯೂ ಅವುಗಳ ಉತ್ಕಟತೆಯಲ್ಲಿ ಅದುವರೆಗೆ ನಾವು ತಿಳಿದಂತಿರುವ ಅನುಭವಗಳ ಗುಣಧರ್ಮಗಳೇ ಬದಲಾಗುವವು. ಸದಾ ಕೆಳಗಡೆ ಹರಿಯುವ ನೀರು, ಆವಿಯಾದಾಗ ತಾನು ಬಾನಿನತ್ತ ಹರಿದು ಮೋಡವಾಗುವುದಿಲ್ಲವೆ! ಕವಿಗಳಿಗೆ ಅನುಭವದ ಇಂಥ ಜೀವಂತಿಕೆಯತ್ತ ಸದಾ ಒಂದು ಎಚ್ಚರವಿರುತ್ತದೆ.

ಇಲ್ಲೊಂದು ವಿಶೇಷವಾದ ಕವಿತೆ ಇದೆ. ಕವಿತೆಯ ಹೆಸರು ಈ ಕುದುರೆಗಳು. The Horses. ಇದು ಸ್ಕಾಟ್‌ಲ್ಯಾಂಡಿನ ಕವಿ Edwin Muir 958ರಲ್ಲಿ ಬರೆದ ಕವಿತೆ. ಮುಯಿರ್‌, ಕುದುರೆಗಳ ಮೇಲೆ ಎರಡು ಕವಿತೆಗಳನ್ನು ಬರೆದಿದ್ದಾನೆ. Horses ಮತ್ತು The Horses’. The Horse ವಿಶಿಷ್ಟವಾದ ಕುದುರೆಗಳನ್ನು ಕುರಿತದ್ದು. ಯು.ಆರ್‌. ಅನಂತಮೂರ್ತಿಯವರು ಈ ಕವಿತೆಯನ್ನು ಅನುವಾದ ಮಾಡಿದ್ದಾರೆ. ಏನು ಕವಿತೆಯ ವಿಶಿಷ್ಟ ಸನ್ನಿವೇಶ? ಅದೆಂದರೆ, ವರ್ಷದ ಹಿಂದೆ ಒಂದು ವಿಶ್ವಯುದ್ಧವೇ ನಡೆದಿತ್ತು. ಏಳು ದಿನಗಳ ಕಾಲ ನಡೆದಿತ್ತದು. ಯುದ್ಧ ಕಳೆದ ಮೇಲಿನ ತೀವ್ರವಾದ ಖನ್ನತೆಯನ್ನು ಕವಿತೆ ಪ್ರಸ್ತಾಪಿಸುತ್ತದೆ. ಮಾತೇ ಬೇಡ ಎನ್ನಿಸುವ ಖಾಲಿತನ, ನಮ್ಮ ಉಸಿರಿನ ಸದ್ದಿಗೇ ನಮಗೆ ಅಂಜಿಕೆ, ರೇಡಿಯೋಗಳು ಕೂಡ ಮಾತನಾಡುವುದು ಬೇಕಿಲ್ಲ ನಮಗೆ, ಏಕೆಂದರೆ ಅವು ಹೇಳುವ ಸುದ್ದಿ ಹಿಂದಣ ದಿನಗಳ ಸುದ್ದಿ, ಹಿಂದಣ ದುಷ್ಟಲೋಕದ ಸುದ್ದಿ, ನಮ್ಮ ಮಕ್ಕಳನ್ನೆಲ್ಲ ತಿಂದು ತೇಗಿದ ಸುದ್ದಿ- We would not listen, we would not let it bring that old bad world that swallowed its children quick at one great gulp. 

“”ದೇಶಗಳೇನು ಮಾಡುತ್ತಿವೆ?”
“”ಹೇಳಲಾಗದ ದುಃಖದಲ್ಲಿ ಮೈಸುರುಟಿ ಕಣ್ತೆರೆಯಲೊಪ್ಪದೆ ಮಲಗಿರಬಹುದು”
“”ಇದೊಂದು ವಿಲಕ್ಷಣ ಆಲೋಚನೆ ಎಂದು ನಮಗೇ ಅಚ್ಚರಿಯಾಗುತ್ತಿದೆ”.
ಕವಿ ಮುಂದುವರಿಯುತ್ತಾನೆ. ಹೊಲಗದ್ದೆಗಳಲ್ಲಿ ಟ್ರ್ಯಾಕ್ಟರ್‌ಗಳಿವೆ- ಮೂಲೆಯಲ್ಲಿ. ಗುಮ್ಮನಗುಸುಕಗಳಂತೆ. ಇರಲಿ ಬಿಡಿ-ಧೂಳಾಗಿ ಮಣ್ಣಾಗಿ ಹೋಗಲಿ.

Advertisement

ಮತ್ತೆ ಹೊಲ ಉಳಬೇಡವೆ?
ಹೌದು. ಉಳಬೇಕು. We make our oxen drag our rusty plows long laid as we have gone back far past our fathers land..
ನಮ್ಮವೇ ಎತ್ತುಗಳನ್ನು ಹಳೆಯ ನೇಗಿಲುಗಳಿಗೆ ಹೂಡಿ ಉಳುತ್ತೇವೆ ಇನ್ನು, ಪಿತೃಪಿತಾಮಹರು ಉತ್ತಿದ್ದ ಮಣ್ಣಿಗೆ ಮರಳಿದ್ದೇವೆ.
(ಅನಂತಮೂರ್ತಿಯವರ ಅನುವಾದ)
ಯುದೊœàತ್ತರ ವಿಷಾದದಲ್ಲಿ ಆ ದಾರುಣ ಅನುಭವದ ಹಿನ್ನೆಲೆಯಲ್ಲಿ ನಾಗರಿಕತೆಯೇ ಬದಲಾಗಬಹುದಾದ ಸೂಚನೆ ಇದು!
ಈಗ ಏನಾಯಿತೆಂದರೆ: ಆ ಕುದುರೆಗಳು ಮರಳಿದವು; ಒಂದು ಬೇಸಗೆ ಸಂಜೆ. And then, that evening late in the summer the strange horses came. ಯಾವವು ಈ ಕುದುರೆಗಳು? ಅವೇ ಕುದುರೆಗಳು! ನಮ್ಮ ತಂದೆಯ ಕಾಲದಲ್ಲಿ ಹೊಸ ಟ್ರಾಕ್ಟರನ್ನು ಕೊಳ್ಳಲೆಂದು ಈ ಕುದುರೆಗಳನ್ನು ಮಾರಿದ್ದೆವು ನಾವು. ಈಗ ಬಂದಿವೆ ನಮ್ಮಲ್ಲಿಗೆ ಆ ಅವೇ ಕುದುರೆಗಳು! ಈಗ ವಿಲಕ್ಷಣವಾಗಿ ಕಾಣಿಸುತ್ತಿವೆ. ಬಳಿ ಹೋಗಲು ತುಸು ಅಂಜಿಕೆ ನಮಗೆ. ಆದರೂ ಅವು ನಮಗಾಗಿ ಕಾದವು. ಹಟದಿಂದಲೆಂಬಂತೆ ಕಾದವು. ನಾಚಿಕೆಯಿಂದಲೆಂಬಂತೆ ಕಾದವು. ನಮ್ಮ ಗೊತ್ತುಗುರಿ ವಿಚಾರಿಸಲು ಯಾರೋ ಪೂರ್ವಿಕರು ಹೇಳಿ ಕಳುಹಿಸಿದರೆಂಬಂತೆ ಕಾದವು. ಮರೆತ ಹಿಂದಣ ನಂಟನ್ನು ಮತ್ತೆ ನೆನಪಿಸಲೆಂಬಂತೆ- ಕಾದೇ ಕಾದವು.

ಮೊದಲು ನಮಗೆ ಹೊಳೆಯಲೇ ಇಲ್ಲ ಏನೂ. ಈ ಕುದುರೆಗಳಿಗೆ ನಮಗೆ ಸಂಬಂಧವೇನು? ಏರಬಹುದೆ ನಾವು ಇವುಗಳನ್ನು? ಉಳಬಹುದೆ ಹೊಲದ ಮಣ್ಣನ್ನು?
ನುಚ್ಚುನುರಿಯಾದ ಈ ಲೋಕದ ಎಲ್ಲೋ ಒಂದೆಡೆ ಹೇಗೋ ಉಳಿದುಕೊಂಡಂತೆ ನಮಗೆ ಕಾಣುವ ಈ ಕುದುರೆಗಳು-ಈಡನ್‌ ನಂದನದಿಂದ ಇದೀಗ ತಾನೇ ಬಂದಂತೆಯೂ ಇವೆ!
Yet new as if they had come from their own Eden.
ಸರಿ. ಈಗೇನು?
ಈಗ? ಇವು ಹೊಲ ಉಳುತ್ತಿವೆ. ನಮ್ಮ ಹೊರೆ ಹೊರುತ್ತಿವೆ. ಎಲ್ಲಿಗೆಂದರೆ ಅಲ್ಲಿ ಸಾಗುತ್ತವೆ.
ಹೋ- ಮತ್ತೇನು! ಎಲ್ಲ ಸುಖಾಂತ್ಯ? ಗೆದ್ದಂತೆ?
ಛುಪ್‌!
ಈ ಕುದುರೆಗಳು ಸ್ವೇಚ್ಛೆಯಿಂದಲೆಂಬಂತೆ ನಡೆಸುವ ಈ ಕಾಯಕ ಇದೆಯಲ್ಲ, ಈ ಸೇವೆ, ಇದು ನಮ್ಮೆದೆಯನ್ನು ಕೊರೆಯುತ್ತಲೇ ಇದೆ. ನಾವು ಹಿಂದಿನಂತಿಲ್ಲ. ಕುದುರೆಗಳ ಆಗಮನ; ನಮ್ಮ ಬದಲಾಗುವಿಕೆಯ ಮೊದಲ ಹೆಜ್ಜೆ.
But that free servitude still can pierce our hearts Our life is changed; their coming our beginning
ಅನಂತಮೂರ್ತಿಯವರು ಈ ಕವಿತೆಯ ಬಗ್ಗೆ ಮಾಡಿದ ಟಿಪ್ಪಣಿ ಇದು: “”ಆಧುನಿಕ ನಾಗರಿಕತೆಯ ಪೂರ್ವದಲ್ಲಿ ಆಗಲೂ ಸ್ವಾರ್ಥಿಯಾಗಿದ್ದ ಮಾನವನಿಗೂ ಮೃಗಲೋಕಕ್ಕೂ ಇದ್ದ ಸಂಬಂಧವನ್ನೂ ತಮ್ಮ ಇಚ್ಛೆಯಿಂದಲೇ ಎನ್ನಿಸುವ ನಿಸ್ಪೃಹತೆಯಲ್ಲಿ ಅವು ಕೃತಘ್ನನಾದ ಮಾನವನಿಗೆ ಮಾಡಿದ ಸೇವೆಯನ್ನೂ ದಾರ್ಶನಿಕ ಎನ್ನಿಸುವ ಬೀಸಿನಲ್ಲಿಯೂ ತೀವ್ರತೆಯಲ್ಲಿಯೂ ಈ ಕವನ ಸೃಷ್ಟಿಸುತ್ತದೆ”. 

ಸ್ವತಃ ಮುಯಿರ್‌ ಹೀಗೆ ಹೇಳಿದ್ದನಂತೆ: The horses are seeking the long lost archaiac relationship, accepted by men in former times as an obvious right, so that it never occured to them that there was anything surprising in using and owning horses. It is the surprises of the return that makes them realize the beauty of that free servitude.

“”ಸ್ವೇಚ್ಛೆಯಿಂದಲೇ ಎಂಬಂತೆ, ಕೃಪೆ ಎನ್ನಿಸುವಂತೆ ಕೈಗೊಂಡ ಕುದುರೆಗಳ ಕೈಂಕರ್ಯದ ಘನತೆ ಮತ್ತು ವಿಸ್ಮಯ ಮಾನವನಿಗೆ ಅರ್ಥವಾಗುವುದು ಅವು ತಾವಾಗಿಯೇ ಮಾನವನನ್ನು ಹುಡುಕಿ ಮರಳಿದಾಗ” 
ಪ್ರಕೃತಿಯನ್ನು ನಾವು ನಮ್ಮ ದೃಷ್ಟಿಯಿಂದ ಬಳಸುವುದಕ್ಕೂ- ಪ್ರಕೃತಿಯೇ ನನ್ನನ್ನು ಬಳಸಿಕೋ ಎನ್ನುವುದಕ್ಕೂ ತುಂಬ ಹತ್ತಿರವೂ ಇದೆ; ತುಂಬ ದೂರವೂ ಇದೆ! ನನ್ನನ್ನು ಬಳಸಿಕೊಳ್ಳುವುದು ನಿನ್ನ ಹಕ್ಕು ಎಂದು ಪ್ರಕೃತಿ ನಿಮಗೆ ತಿಳಿಸುವುದಕ್ಕೂ , ಬಳಸಿಕೊಳ್ಳುವುದು ನನ್ನ ಹಕ್ಕು ಎಂದು ನಾವೇ ತಿಳಿಯುವುದಕ್ಕೂ ನಡುವೆ ಗೆರೆ ಬಲು ತೆಳುವು. ಆದರೆ ಆ ತೆಳುವಾದ ಗೆರೆ ದೊಡ್ಡ ಕಂದಕವಾಗಿಯೂ ಬೆಳೆಯಬಹುದು. ಅದಿರಲಿ. ಮುಯಿರ್‌ ಪದ್ಯವನ್ನು ಓದುತ್ತಿದ್ದಂತೆ ಕುಮಾರವ್ಯಾಸನ ಷಟ³ದಿಯೊಂದರ ನೆನಪಾಗುತ್ತಿತ್ತು. ಅದು ಯುದ್ಧರಂಗದ ನಡುವೆಯೇ, ಯುದ್ಧವಿರಾಮದ ವಿಶ್ರಾಂತಿಯ ಕ್ಷಣಗಳಲ್ಲಿ, ಸಾರಥಿಯಾದ ಕೃಷ್ಣ ತನ್ನ ತೇರಿಗೆ ಕಟ್ಟಿದ ನಾಲ್ಕು ಕುದುರೆಗಳ ಸೇವೆಯನ್ನು ಹೇಗೆ ಮಾಡುತ್ತಿದ್ದ ಎನ್ನುವ ಚಿತ್ರಣ.

ಕೆರತಳದಿ ಮೈದಡವಿ ಗಾಯದ
ಸರಳ ಕಿತ್ತು ಔಷಧಿಯ ಲೇಪವ
ನೊರಸಿದನು ಕರುಣದಲಿ ಚಪ್ಪರಿಸಿದನು ಕಂಧರವ
ಹರುಷಮಿಗೆ ಕೊರಳೆತ್ತಿ ನಯನವ
ತಿರುಹಿ ದೇವನ ನೋಡುತಿರ್ದವು
ತುರಗ ನಾಲ್ಕರ ಪುಣ್ಯ, ಸನಕಾದಿಗಳಿಗಿಲ್ಲೆಂದ.
ಹೃದಯಂಗಮವಾದ ಚಿತ್ರವಿದು. ಮುಯಿರ್‌ ಹೇಳುವಂತೆ-ಇದು archaic relationship. ಈ ಪ್ರಾಚೀನ ನಂಟನ್ನು ನಾವು ಮರೆತರೂ-ಮರೆಯದ ಜೀವ ಒಂದಿರುತ್ತದೆ. ಆ ಜೀವವನ್ನು ಕಲ್ಪಿಸಿಯೇ ಎಲ್ಲ ತೋಡಿಕೊಳ್ಳುವಿಕೆಗಳೂ ನಡೆಯುವುದೆನ್ನಿಸುತ್ತದೆ !

ಲಕ್ಷ್ಮೀಶ ತೋಳ್ಪಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next