Advertisement

ಟರ್ನಿಂಗ್ ಪಾಯಿಂಟ್ ನಲ್ಲಿ ಹೊಸಬರು

10:33 AM Sep 21, 2019 | Team Udayavani |

ಕನ್ನಡದಲ್ಲಿ ಯಶಸ್ವಿ ಚಿತ್ರಗಳ ಶೀರ್ಷಿಕೆಗಳು ಮರುಬಳಕೆಯಾಗುತ್ತಿರುವುದು ಗೊತ್ತೇ ಇದೆ. ಅಷ್ಟೇ ಅಲ್ಲ, ಸಕ್ಸಸ್‌ಫ‌ುಲ್‌ ಸಿನಿಮಾಗಳ ಟೈಟಲ್‌ ಇಟ್ಟುಕೊಂಡೇ ಮುಂದುವರೆದ ಭಾಗ ಕೂಡ ಮುಂದುವರೆಯುತ್ತಿವೆ. ಇದು ಹೊಸ ಬೆಳವಣಿಗೆಯೇನಲ್ಲ. ಆದರೆ, ಮರುಬಳಕೆಯಾಗುವ ಶೀರ್ಷಿಕೆ ಚಿತ್ರಗಳು ನೋಡುಗರ ಗಮನಸೆಳೆದಿವೆಯಾ? ಈ ಪ್ರಶ್ನೆಗೆ ಉತ್ತರ ಕಷ್ಟ. ಆದರೂ, ಇಲ್ಲೊಂದು ಹೊಸಬರ ತಂಡ ತುಂಬಾ ಉತ್ಸಾಹದಿಂದಲೇ “ಯು ಟರ್ನ್- 2′ ಎಂದು ಹೆಸರಿಟ್ಟುಕೊಂಡು ಚಿತ್ರ ಮಾಡೋಕೆ ಅಣಿಯಾಗಿದೆ. “ಯು ಟರ್ನ್’ ಕನ್ನಡದ ಸಕ್ಸಸ್‌ಫ‌ುಲ್‌ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತು. ಹಾಗಂತ, ಇದು ಆ ಚಿತ್ರದ ಮುಂದುವರೆದ ಭಾಗವಲ್ಲ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವೂ ಇಲ್ಲ. ಈಗಾಗಲೇ ಮುಹೂರ್ತ ನೆರವೇರಿಸಿರುವ ಚಿತ್ರತಂಡ, ಚಿತ್ರೀಕರಣಕ್ಕೆ ಹೊರಟಿದೆ. ಆ ಕುರಿತು ಹೇಳಲೆಂದೇ ನಿರ್ದೇಶಕ ಚಂದ್ರು ಓಬಯ್ಯ ಪತ್ರಕರ್ತರ ಮುಂದೆ ಬಂದಿದ್ದರು. ಮೊದಲು ಮಾತಿಗಿಳಿದ ಅವರು ಹೇಳಿದ್ದಿಷ್ಟು.

Advertisement

“ಇದು ನನ್ನ ಮೊದಲ ನಿರ್ದೇಶನದ ಚಿತ್ರ. ನಿರ್ದೇಶನದ ಜೊತೆ ಸಂಗೀತ ನೀಡಿ, ನಾಯಕನಾಗಿಯೂ ನಟಿಸುತ್ತಿದ್ದೇನೆ. ಇದಕ್ಕೂ ಮುನ್ನ “ಟ್ರಿಗರ್‌’ ಹಾಗೂ “ಮನೋರಥ’ ಚಿತ್ರಗಳಿಗೆ ಸಂಗೀತ ನೀಡಿದ್ದೆ. ಮೊದಲಿನಿಂದಲೂ ಹಾರರ್‌ ಚಿತ್ರವನ್ನು ಮಾಡುವ ಆಸೆ ಇತ್ತು. ನಾನೇ ಒಂದು ಕಥೆ ರೆಡಿಮಾಡಿಕೊಂಡೆ. ಈ ಕಥೆಗೆ “ಯು ಟರ್ನ್ 2′ ಹೆಸರು ಸೂಕ್ತವೆನಿಸಿ ಇಟ್ಟಿದ್ದೇನೆ. ಕಥೆ ಬಗ್ಗೆ ಹೇಳುವುದಾದರೆ, ಪಿಜ್ಜಾ ಸ್ಟೋರ್‌ನಲ್ಲಿ ಕೆಲಸ ಮಾಡುವ ನಾಯಕನಿಗೆ ಇದ್ದಕ್ಕಿದ್ದಂತೆಯೇ ಒಂದು ದೆವ್ವ ಕಾಡಲು ಶುರು ಮಾಡುತ್ತದೆ. ಆ ದೆವ್ವದ ಜೊತೆ ಅವನು ಹೇಗೆಲ್ಲಾ ನಡೆದುಕೊಳ್ಳುತ್ತಾನೆ, ಪರದಾಡುತ್ತಾನೆ ಅನ್ನೋದೇ ಕಥೆಯ ಒನ್‌ಲೈನ್‌. ಇದರ ಜೊತೆಗೊಂದು ಲವ್‌ಸ್ಟೋರಿಯೂ ಇದೆ. ಭಯಪಡಿಸುವುದರ ಜೊತೆಗೆ ಒಂದಷ್ಟು ಕುತೂಹಲ ಮೂಡಿಸುವ ಅಂಶಗಳೂ ಇಲ್ಲಿವೆ’ ಎಂದರು ಚಂದ್ರು ಓಬಯ್ಯ.

ಚಿತ್ರಕ್ಕೆ ಚಂದನ ಸೇಗು ನಾಯಕಿ. ಅವರಿಗೆ ಇದು ಎರಡನೆ ಸಿನಿಮಾ. “ರಮೇಶ್‌ ಸುರೇಶ್‌’ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದೇನೆ. ಈಗ “ಯು ಟರ್ನ್-2′ ಚಿತ್ರದಲ್ಲಿ ನಾಯಕಿಯಾಗಿದ್ದೇನೆ. ಇಲ್ಲಿ ಬೋಲ್ಡ್‌ ಮತ್ತು ರಗಡ್‌ ಹುಡುಗಿಯ ಪಾತ್ರ ನನ್ನದು. ಮೊದಲ ಹಾರರ್‌ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ಖುಷಿ ಇದೆ’ ಎಂದರು ಚಂದನ ಸೇಗು.

ನಿರ್ಮಾಪಕ ಆನಂದ್‌ ಸಂಪಂಗಿ ಅವರಿಗೆ ಇದು ಮೊದಲ ಅನುಭವ. ಅವರ ತಂದೆಗೆ ಸಿನಿಮಾ ಮಾಡುವ ಆಸೆ ಇತ್ತಂತೆ. ಅವರಿರುವಾಗ ಅದು ಸಾಧ್ಯವಾಗಿರಲಿಲ್ಲ. ಈಗ ತಂದೆ ಆಸೆಯನ್ನು ನಿರ್ಮಾಣ ಮಾಡುವ ಮೂಲಕ ಈಡೇರಿಸುತ್ತಿರುವ ಖುಷಿ ಅವರದು. ಅವರಿಲ್ಲಿ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಇನ್ನು, ವಿಕ್ಟರಿ ವಾಸು ಇಲ್ಲಿ ನಟಿಸುತ್ತಿದ್ದು, ಅವರಿಗೆ ಪಾತ್ರದ ಬಗ್ಗೆ ನಿರ್ದೇಶಕರು ಏನನ್ನೂ ಹೇಳಿಲ್ಲವಂತೆ. ಈಗಾಗಲೇ ಅವರು ಯಶಸ್ವಿ ಚಿತ್ರಗಳ ಮುಂದುವರೆದ ಭಾಗ ಶೀರ್ಷಿಕೆಯ ಚಿತ್ರಗಳಾದ “ಕಲ್ಪನಾ-2′,”ತಾಜ್‌ ಮಹಲ್‌-2′ ಚಿತ್ರಗಳಲ್ಲಿ ನಟಿಸಿದ್ದು, ಈಗ “ಯು ಟರ್ನ್-2′ ಚಿತ್ರದಲ್ಲೂ ನಟಿಸುತ್ತಿರುವುದಕ್ಕೆ ಸಹಜವಾಗಿಯೇ ಅವರಿಗೆ ಖುಷಿ ಇದೆ. ಆದರೆ, ಸಕ್ಸಸ್‌ಫ‌ುಲ್‌ ಚಿತ್ರಗಳ ಹೆಸರು ಇಟ್ಟುಕೊಂಡು ಸಿನಮಾ ಚೆನ್ನಾಗಿ ಮಾಡಬೇಕು ಎಂಬುದು ಅವರ ಕಿವಿಮಾತು. ಚಿತ್ರದಲ್ಲಿ ರಾಘು ರಾಮನಕೊಪ್ಪ, ಬಿರಾದಾರ್‌, ಕರಿಸುಬ್ಬು, ಉಗ್ರಮ್‌ ರವಿ ಇತರರು ನಟಿಸಿದ್ದಾರೆ. ಬೆಂಗಳೂರು, ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next