ಮೈಸೂರು: “ರಾಜಕೀಯ ಆರಂಭಿಸಿದ ಕ್ಷೇತ್ರದಲ್ಲೇ ಕೊನೆ ಚುನಾವಣೆ ಎದುರಿಸಬೇಕೆಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ನನಗೆ ಆಶೀರ್ವದಿಸಿ ಮತ್ತೂಮ್ಮೆ ವಿಧಾನಸೌಧಕ್ಕೆ ಕಳುಹಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಬುಧವಾರ ರೋಡ್ ಶೋ ನಡೆಸಿ ಮತಯಾಚಿಸಿದ ಸಿದ್ದರಾಮಯ್ಯಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಗ್ರಾಮಗಳಲ್ಲಿ ಪಟಾಕಿ ಸಿಡಿಸಿ, ತಮಟೆ ವಾದನ,ಹೂಮಳೆ ಗರೆದು, ಆರತಿ ಬೆಳಗಿ ಮುಖ್ಯಮಂತ್ರಿ ಯನ್ನು ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿ, “ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರೂ ಪಕ್ಷಗಳ ನಡುವೆ ಸ್ಪರ್ಧೆ ನಡೆಯುತ್ತಿದ್ದು, ಚಾಮುಂಡೇಶ್ವರಿಯಲ್ಲಿ ಬಿಜೆಪಿ ಪ್ರಬ ಲ ವಾಗಿಲ್ಲ.ಹೀಗಾಗಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರಸ್ಪರ್ಧೆ. ವರುಣಾ ದಲ್ಲಿ ಜೆಡಿಎಸ್ ಪ್ರಬಲವಾಗಿಲ್ಲದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು.
ಒತ್ತಾಯಕ್ಕೆ ಮಣಿದು ಬಾದಾಮಿಯಿಂದ ಸ್ಪರ್ಧೆ: ಬಾದಾಮಿಯ ಜನರು ತಾವು ಅಲ್ಲಿ ಸ್ಪರ್ಧೆ ಮಾಡಿದರೆ ಆ ಭಾಗದಲ್ಲಿ ಕಾಂಗ್ರೆಸ್ ಗೆಲುವಿಗೆ ಅನುಕೂಲವಾಗು ತ್ತದೆ ಎಂದು 3 ತಿಂಗಳಿಂದ ಒತ್ತಾಯ ಮಾಡುತ್ತಿದ್ದರು. ಹೈಕಮಾಂಡ್ ಒಪ್ಪಿಗೆ ಪಡೆದು ಬಾದಾಮಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದೇನೆ. 2006ರ ಉಪ ಚುನಾವಣೆಯಲ್ಲಿ ನನಗೆ ರಾಜಕೀಯವಾಗಿ ಪುನರ್ ಜನ್ಮ ಕೊಟ್ಟ ಕ್ಷೇತ್ರ ಇದು, ಹೀಗಾಗಿ ಮತ್ತೆ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. “ನನಗೆ ರಾಜ್ಯದ ಜನರ ನಾಡಿ ಮಿಡಿತ ಗೊತ್ತಿದ್ದು, ರಾಜ್ಯದಲ್ಲಿ ಇದೀಗ ಟ್ರೆಂಡ್ ಕಾಂಗ್ರೆಸ್ ಕಡೆ ಇದೆ. ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ನನ್ನ ಕಡೆ ಚುನಾವಣೆ. ಹಾಗೆಂದು ರಾಜಕೀಯ ಬಿಟ್ಟು ಓಡಿಹೋಗಲ್ಲ. ನನ್ನ ಜೊತೆಯಲ್ಲಿರುವವರಿಗೆ ಸಲಹೆ, ಮಾರ್ಗದರ್ಶನ ಮಾಡಿಕೊಂಡಿರುತ್ತೇನೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ