Advertisement

ಬಸ್ಸು ತಂಗುದಾಣವಿದ್ದರೂ ಬಸ್ಸೇ ಬರುತ್ತಿಲ್ಲ ತಂಗುದಾಣಕ್ಕೆ

12:50 AM Jan 17, 2019 | Harsha Rao |

ಕಟಪಾಡಿ: ದಶಕಗಳಿಂದಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬಸ್ಸುಗಳು ಕಟಪಾಡಿ ಪೇಟೆಯ ಒಳ ಭಾಗದ ಬಸ್ಸು ತಂಗುದಾಣಕ್ಕೆ ಆಗಮಿಸಿ ಪ್ರಯಾಣಿಕರನ್ನು ಇಳಿಸಿ – ಹತ್ತಿಸಿ ತನ್ನ ಸಂಚಾರವನ್ನು ಮುಂದುವರೆಸುತ್ತಿತ್ತು.

Advertisement

ಇದೀಗ ಹೆದ್ದಾರಿ ಚತುಷ್ಪಥಗೊಂಡು ವಿಸ್ತರೀಕರಣದ ಅನಂತರ ಇತ್ತೀಚಿನ ದಿನಗಳಲ್ಲಿ ಸರ್ವೀಸ್‌ ರಸ್ತೆಯು ಬಸ್ಸು ಸಂಚಾರಕ್ಕೆ ತೆರೆದುಕೊಂಡ ಅನಂತರದಲ್ಲಿ ಸರ್ವೀಸ್‌ ನೀಡಬೇಕಾದ ಬಸ್ಸುಗಳು ಕಟಪಾಡಿ ಪೇಟೆಯೊಳಗೆ ಬಾರದೇ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿಯೇ ಸಂಚರಿಸುವುದರಿಂದ ಸಮಸ್ಯೆ ತಲೆದೋರಿದೆ.

ಶಿರ್ವ, ಕಾಪು ಭಾಗದತ್ತ ಸಂಚರಿಸುವ ಬಸ್ಸುಗಳೂ ಕಟಪಾಡಿ ಪೇಟೆಯೊಳಗಿನ ಬಸ್ಸು ತಂಗುದಾಣಕ್ಕೆ ಬಾರದಿರುವುದರಿಂದ ಶಾಲೆಯ ವಿದ್ಯಾರ್ಥಿಗಳು ಹೆಚ್ಚು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ಮೊದಲೇ ಜನನಿಬಿಡ, ವಾಹನ ಸಂಚಾರ ದಟ್ಟಣೆಯಿಂದ ಕೂಡಿದ ಕಟಪಾಡಿ ರಾಷ್ಟ್ರೀಯ ಹೆದ್ದಾರಿ ಜಂಕ್ಷನ್‌ನ್ನು ಶಾಲಾ ಮಕ್ಕಳು ದಾಟಿಕೊಂಡು ಬಂದು ಶಾಲೆಯ ಹಾದಿಯನ್ನು ಹಿಡಿಯ ಬೇಕಿದೆ. ಅದರೊಂದಿಗೆ ಪೇಟೆಯೊಳಕ್ಕೆ ವ್ಯಾಪಾರ ವಹಿವಾಟಿಗಾಗಿ ಆಗಮಿಸುವ ವಯೋ ವೃದ್ಧರು, ಹೆಂಗಸರೂ ಸಂಕಷ್ಟ ಪಡುವಂತಾಗಿದೆ.

ಈ ಅವ್ಯವಸ್ಥೆಯ ಬಗ್ಗೆ ಕಟಪಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದ ಮಕ್ಕಳ ಗ್ರಾಮಸಭೆಯ ಸಂದರ್ಭ ಶಾಲಾ ವಿದ್ಯಾರ್ಥಿಗಳು ಸಂಚಾರ ಸಂಕಷ್ಟದ ತಮ್ಮ ಅಳಲನ್ನು ತೋಡಿಕೊಂಡಿದ್ದು, ಇದುವರೆಗೂ ಪ್ರತಿಫಲ ಮಾತ್ರ ಶೂನ್ಯವಾಗಿದೆ.

Advertisement

ಇನ್ನುಳಿದಂತೆ ಬಸ್ಸು ಪ್ರಯಾಣಿಕರ ವ್ಯಾಪಾರ ವಹಿವಾಟನ್ನು ನಂಬಿ ವ್ಯಾಪಾರ ಆರಂಭಿಸಿದ್ದ ವ್ಯಾಪಾರಗಳು ಕೂಡಾ ಇದೀಗ ಬಸ್ಸು ತಂಗುದಾಣವನ್ನು ಪ್ರವೇಶಿಸದ ಕಾರಣ ವ್ಯಾಪಾರದಲ್ಲೂ  ತೊಂದರೆ ಅನುಭವಿಸುವಂತಾಗಿದೆ ಎಂದು ಕೆಲ ವ್ಯಾಪಾರಸ್ಥರು ಮಾಹಿತಿ ನೀಡುತ್ತಿದ್ದಾರೆ.ಈ ಭಾಗದ ತಂಗುದಾಣವನ್ನೇ ಹೆಚ್ಚು ಆಶ್ರಯಿಸಿದ್ದ ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾ ಸಹಿತ ಇತರೇ ವಾಹನಗಳೂ ತಮ್ಮ ಬಾಡಿಗೆಯಲ್ಲೂ ಇಳಿಮುಖ ಅನುಭವಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಕೇವಲ ಮಟ್ಟು ಭಾಗಕ್ಕೆ ತೆರಳುವ ಬಸ್ಸು ಕಟಪಾಡಿ ಪೇಟೆಯ ಬಸ್ಸು ತಂಗುದಾಣವನ್ನು ಪ್ರವೇಶಿಸುತ್ತಿದ್ದು, ಕನಿಷ್ಠ ಶಿರ್ವ, ಕಾಪು ಭಾಗದತ್ತ ಸಂಚರಿಸುವ ಬಸ್ಸುಗಳಾದರೂ ಕಟಪಾಡಿ ಪೇಟೆಯೊಳಕ್ಕೆ ಪ್ರವೇಶಿಸುವಂತೆ ಜನತೆ ಆಗ್ರಹಿಸುತ್ತಿದ್ದಾರೆ. ಇಲ್ಲವಾದಲ್ಲಿ ಕಟಪಾಡಿ ಪೇಟೆಯ ಬಸ್ಸು ತಂಗುದಾಣವು ಇತಿಹಾಸದ ಪುಟಗಳನ್ನು ಸೇರುವ ಸಾಧ್ಯತೆಯೇ ಹೆಚ್ಚು ಎಂದು ಈ ಭಾಗದ ಜನತೆ ಪರಿತಪಿಸುತ್ತಿದ್ದಾರೆ.

ಕಟಪಾಡಿ ಪೇಟೆಯ ಒಳಗಡೆ ಎರ್ರಾ ಬಿರ್ರಿಯಾಗಿ ವಾಹನಗಳ ನಿಲುಗಡೆಯಿಂದಾಗಿ ತೊಂದರೆ ಆಗುತ್ತಿದೆ. ಬಸ್ಸುಗಳಿಗೆ ಸಮಯಾವಕಾಶದ ತೊಂದರೆಯೂ ಇದೆ. ಈ ಬಗ್ಗೆ ಆರ್‌ಟಿಒ ಅವರ ಬಳಿ ಸೂಕ್ತ ಕ್ರಮಕ್ಕೆ ಚಿಂತಿಸಲಾಗುತ್ತದೆ.
– ಮಹೇಶ್‌ ಪ್ರಸಾದ್‌, ಪೊಲೀಸ್‌ ವೃತ್ತ ನಿರೀಕ್ಷಕರು, ಕಾಪು ವೃತ್ತ

ಪೇಟೆಯೊಳಕ್ಕೆ ಬಸ್ಸು ಬಾರದೆ ವಯಸ್ಸಾದವರು ಹೆದ್ದಾರಿ ದಾಟಲು ಕಷ್ಟ ಪಡುವಂತಾಗಿದೆ. ಪೊಲೀಸರು ರಸ್ತೆ ದಾಟಿಸುವಲ್ಲಿ ಕರ್ತವ್ಯದಲ್ಲಿರುವುದರಿಂದ ಸ್ವಲ್ಪ ಅನುಕೂಲ. ಇಲ್ಲವಾದಲ್ಲಿ ಇದು ನಿತ್ಯ ಬವಣೆಯಾಗಿದೆ. ಶಾಲಾ ಮಕ್ಕಳೂ, ವಯೋವೃದ್ಧರೂ ತೊಂದರೆ ಅನುಭವಿಸುತ್ತಿದ್ದಾರೆ.
– ಮಂಜುನಾಥ, ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next