Advertisement

ಜಿಲ್ಲಾ ಶೈಕ್ಷಣಿಕ ಪ್ರಗತಿಗೆ ಕೊರತೆಗಳದ್ದೇ ಅಡ್ಡಿ!

11:17 AM Jun 24, 2019 | Suhan S |

ಕೋಲಾರ: ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಎರಡನೇ ಅವಧಿಯ ಆಡಳಿತದಲ್ಲಿ ಗ್ರಾಮ ವಾಸ್ತವ್ಯವನ್ನು ಚಂಡರಗಿ ಗ್ರಾಮದ ಸರ್ಕಾರಿ ಶಾಲೆಯಿಂದ ಆರಂಭಿಸಿದ್ದಾರೆ. ಜಿಲ್ಲೆಗೂ ಕರೆ ತರುವ ಪ್ರಯತ್ನಗಳು ನಡೆಯುತ್ತಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಚಿತ್ರಣ ಇಲ್ಲಿದೆ.

Advertisement

ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಹತ್ತಿರವಿರುವ ಕೋಲಾರ ಜಿಲ್ಲೆ ಸರ್ಕಾರದಿಂದ ಕಡೆಗಣಿಸಲ್ಪಟ್ಟ ಜಿಲ್ಲೆ ಎಂದೇ ಹೆಸರು ಮಾಡಿದೆ. ಏಕೆಂದರೆ, ಜಿಲ್ಲೆಗೆ ಸಂಬಂಧಪಟ್ಟಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಕೊರತೆಗಳು ಕಾಡುತ್ತಿದೆ. ಶೈಕ್ಷಣಿಕ ಕ್ಷೇತ್ರವೂ ಕೊರತೆಗಳಿಂದ ಮುಕ್ತವಾಗಿಲ್ಲ.

2596 ಶಾಲೆ: ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಒಟ್ಟು 2596 ಸರ್ಕಾರಿ ಶಾಲೆಗಳಿವೆ. ಬಂಗಾರಪೇಟೆಯಲ್ಲಿ 437, ಕೆಜಿಎಫ್ನಲ್ಲಿ 217, ಕೋಲಾರದಲ್ಲಿ 596, ಮಾಲೂರಿನಲ್ಲಿ 416, ಮುಳಬಾಗಿಲಿನಲ್ಲಿ 510 ಮತ್ತು ಶ್ರೀನಿವಾಸಪುರದಲ್ಲಿ 420 ಸರ್ಕಾರಿ ಶಾಲೆಗಳಿವೆ.

ಬಹುತೇಕ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡ ವ್ಯವಸ್ಥೆ ಇದೆ. ಅಗತ್ಯವಿರುವೆಡೆ ಬಾಡಿಗೆ ಅಥವಾ ದಾನಿಗಳ ಭೋಗ್ಯದ ಕಟ್ಟಡಗಳಲ್ಲಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಶಾಲೆಗಳಿಗೆ ಕಟ್ಟಡದ ಕೊರತೆ ಕಂಡು ಬಂದಿಲ್ಲ.

ಶೌಚಾಲಯ, ಕುಡಿಯುವ ನೀರು: ಜಿಲ್ಲೆಯ 2596 ಸರ್ಕಾರಿ ಶಾಲೆಗಳಲ್ಲೂ ಒಂದಾದರೂ ಶೌಚಾಲಯಗಳಿವೆ. ಕೆಲವು ಶಾಲೆಗಳಲ್ಲಿ ಬಾಲಕರ ಹಾಗೂ ಬಾಲಕಿಯರ ಶೌಚಾಲಯಗಳಿವೆ. ಆದರೆ, ನೀರಿನ ಅಲಭ್ಯದಿಂದಾಗಿ ವಿದ್ಯಾರ್ಥಿಗಳಿಗೆ ಬಳಕೆ ಮಾಡಲು ಬಿಡುತ್ತಿಲ್ಲ.

Advertisement

ಶೌಚಾಲಯ ಬಳಕೆಗೆ ನೀರಿನ ಕೊರತೆ ಉಂಟಾದರೂ, ಬಹುತೇಕ ಶಾಲೆಗಳಲ್ಲಿ ಬಿಸಿಯೂಟದ ಅಡುಗೆ ಕೋಣೆಗಳಿರುವುದರಿಂದ ಅಡುಗೆ ತಯಾರಿಸಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಸ್ಥಳೀಯವಾಗಿ ಮಾಡಿಕೊಳ್ಳಲಾಗಿದೆ.

ವಿದ್ಯುತ್‌ ಸಂಪರ್ಕ: ಜಿಲ್ಲೆಯಲ್ಲಿರುವ 2596 ಸರ್ಕಾರಿ ಶಾಲೆಗಳ ಪೈಕಿ 2417 ಶಾಲೆಗಳಿಗೆ ವಿದ್ಯುತ್‌ ಸಂಪರ್ಕ ಇದ್ದು, 179ಕ್ಕೆ ಇಲ್ಲ. ಈ ಪೈಕಿ ಬಂಗಾರಪೇಟೆಯಲ್ಲಿ 28, ಕೆಜಿಎಫ್ನಲ್ಲಿ 13, ಕೋಲಾರದಲ್ಲಿ 44, ಮಾಲೂರಿನಲ್ಲಿ 19, ಮುಳಬಾಗಿಲಿನಲ್ಲಿ 33 ಹಾಗೂ ಶ್ರೀನಿವಾಸಪುರದಲ್ಲಿ 42 ಶಾಲೆಗಳಲ್ಲಿ ವಿದ್ಯುತ್‌ ಸಂಪರ್ಕ ಇಲ್ಲವಾಗಿದೆ.

ಶಾಲಾ ಕಾಂಪೌಂಡ್‌: ಜಿಲ್ಲೆಯ ಒಟ್ಟು ಶಾಲೆಗಳ ಪೈಕಿ 2098ಕ್ಕೆ ಸುಸಜ್ಜಿತ ಕಾಂಪೌಂಡ್‌ ಇದ್ದು, ಉಳಿದ 498 ಶಾಲೆಗಳಿಗೆ ಕಾಂಪೌಂಡ್‌ ಇಲ್ಲವಾಗಿದೆ. ಬಂಗಾರಪೇಟೆಯ 90, ಕೆಜಿಎಫ್ನ 40, ಕೋಲಾರದ 109, ಮಾಲೂರಿನ 122, ಮುಳಬಾಗಿಲಿನ 77 ಹಾಗೂ ಶ್ರೀನಿವಾಸಪುರದ 60 ಶಾಲೆಗಳಿಗೆ ಕಾಂಪೌಂಡ್‌ ಇಲ್ಲವಾಗಿದೆ.

ಆಟದ ಮೈದಾನ: ಜಿಲ್ಲೆಯ ಒಟ್ಟು 2596 ಶಾಲೆಗಳ ಪೈಕಿ ಅರ್ಧದಷ್ಟು ಶಾಲೆಗಳಿಗೆ ಆಟದ ಮೈದಾನವಿಲ್ಲ. ಒಟ್ಟು ಶಾಲೆಗಳಲ್ಲಿ 1346 ಶಾಲೆಗಳಲ್ಲಿ ಆಟದ ಮೈದಾನವಿದ್ದರೆ, 1250 ಶಾಲೆಗಳಲ್ಲಿ ಇಲ್ಲ. ಬಂಗಾರಪೇಟೆಯ 246, ಕೆಜಿಎಫ್ನ 91, ಕೋಲಾರದ 242, ಮಾಲೂರಿನ 200, ಮುಳಬಾಗಿಲಿನ 220 ಹಾಗೂ ಶ್ರೀನಿವಾಸಪುರದ 251 ಶಾಲೆಗಳಿಗೆ ಆಟದ ಮೈದಾನಗಳಿಲ್ಲ.

ಗ್ರಂಥಾಲಯ: ಕೋಲಾರ ಜಿಲ್ಲೆಯ ಒಟ್ಟು ಶಾಲೆಗಳಲ್ಲಿ 2465 ಶಾಲೆಗಳಲ್ಲಿ ಗ್ರಂಥಾಲಯವಿದ್ದರೆ, 131 ಶಾಲೆಗಳಲ್ಲಿ ಗ್ರಂಥಾಲಯ ಇಲ್ಲ. ಬಂಗಾರಪೇಟೆಯ 19, ಕೆಜಿಎಫ್ನ 13, ಕೋಲಾರದ 46, ಮಾಲೂರಿನ 12, ಮುಳಬಾಗಿಲಿನ 18 ಹಾಗೂ ಶ್ರೀನಿವಾಸಪುರದ 23 ಶಾಲೆಗಳಲ್ಲಿ ಗ್ರಂಥಾಲಯ ಸೌಲಭ್ಯವಿಲ್ಲ.

ರ್‍ಯಾಂಪ್‌: ವಿಶೇಷ ಚೇತನ ಮಕ್ಕಳು ಸುಲಭವಾಗಿ ಶಾಲೆಗೆ ಬರಲು ಅನುಕೂಲವಾಗುವಂತೆ ಜಿಲ್ಲೆಯ 1719 ಶಾಲೆಗಳಲ್ಲಿ ಮಾತ್ರವೇ ರ್‍ಯಾಂಪ್‌ ಸೌಲಭ್ಯವಿದ್ದು, 877 ಶಾಲೆಗಳಲ್ಲಿ ಇಲ್ಲ. ಬಂಗಾರಪೇಟೆಯ 180, ಕೆಜಿಎಫ್ನ 82, ಕೋಲಾರದ 212, ಮಾಲೂರಿನ 119, ಮುಳಬಾಗಿಲಿನ 154 ಹಾಗೂ ಶ್ರೀನಿವಾಸಪುರದ 130 ಶಾಲೆಗಳಲ್ಲಿ ರ್‍ಯಾಂಪ್‌ಗ್ಳಿಲ್ಲ.

ಕಂಪ್ಯೂಟರ್‌ ಸೌಲಭ್ಯ: ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲೂ ಕಂಪ್ಯೂಟರ್‌ ಶಿಕ್ಷಣಕ್ಕೆ ಒತ್ತು ನೀಡಲಾಗಿದ್ದು, ಜಿಲ್ಲೆಯ 1003 ಶಾಲೆಗಳಲ್ಲಿ ಕಂಪ್ಯೂಟರ್‌ಗಳಿದ್ದರೆ, 1593 ಶಾಲೆಗಳಲ್ಲಿ ಇಲ್ಲ. ಬಂಗಾರಪೇಟೆಯ 283, ಕೆಜಿಎಫ್ನ 120, ಕೋಲಾರದ 345, ಮಾಲೂರಿನ 305, ಮುಳಬಾಗಿಲಿನ 293 ಹಾಗೂ ಶ್ರೀನಿವಾಸಪುರದ 247 ಶಾಲೆಗಳಲ್ಲಿ ಕಂಪ್ಯೂಟರ್‌ಗಳಿಲ್ಲ.

ಬಿಸಿಯೂಟ: ಕೋಲಾರ ಜಿಲ್ಲೆಯ ಎಲ್ಲಾ 2026 ಶಾಲೆಗಳಲ್ಲಿ ಬಿಸಿಯೂಟ ಸೌಲಭ್ಯ ಕಲ್ಪಿಸಲಾಗಿದೆ. ಈ ಪೈಕಿ 180 ಪ್ರೌಢ ಮತ್ತು 1846 ಪ್ರಾಥಮಿಕ ಶಾಲೆಗಳಿವೆ. ಒಟ್ಟು 1,12,788 ಮಂದಿ ವಿದ್ಯಾರ್ಥಿಗಳು ಪ್ರತಿನಿತ್ಯವೂ ಶಾಲೆಗಳಲ್ಲಿ ಬಿಸಿಯೂಟ ಮಾಡುತ್ತಿದ್ದಾರೆ.

 

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next