Advertisement

ಜೀವನಾಂಶ ಪಡೆಯಲು ನಿಯಮಗಳುಂಟು

10:37 AM Sep 17, 2019 | Sriram |

ಒಬ್ಬ ವ್ಯಕ್ತಿಗೆ ಸಾಕಷ್ಟು ಆದಾಯವಿದೆ. ಆದರೂ, ಹೆಂಡತಿ, ಮಕ್ಕಳು, ತಂದೆ ತಾಯಿಯನ್ನು ಪೋಷಣೆ ಮಾಡಲು ಆತ ನಿರ್ಲಕ್ಷ್ಯ ಮಾಡಿದರೆ ನಿರಾಕರಿಸಿದರೆ ಅವನ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ರೀತಿ ಪೋಷಣೆಗಾಗಿ ಅರ್ಜಿಯನ್ನು ಮೊದಲನೇ ದರ್ಜೆ ದಂಡಾಧಿಕಾರಿಯವರ ನ್ಯಾಯಾಲಯಕ್ಕೆ ಸಲ್ಲಿಸಬೇಕು. (ಕುಟುಂಬ ನ್ಯಾಯಾಲಯಗಳಿರುವ ಕಡೆ ಕುಟುಂಬ ನ್ಯಾಯಾಲಯಕ್ಕೆ ಸಲ್ಲಿಸಬೇಕು). ಇಂಥ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದರೆ, ಭತ್ಯೆಯನ್ನು ಕೊಡುವಂತೆ ಆದೇಶಿಸಬಹುದು. ಆದರೆ ಹೆಂಡತಿಯಾಗಲಿ, ತಂದೆ-ತಾಯಿಯಾಗಲಿ ತಮ್ಮ ಕಾಲ ಮೇಲೆ ನಿಂತುಕೊಳ್ಳಲು ಅಸಮರ್ಥರಾದರೆ ಮಾತ್ರ ಈ ಭತ್ಯೆ ಪಡೆದುಕೊಳ್ಳಲು ಅರ್ಹರಾಗುತ್ತಾರೆ.

Advertisement

ಹೆಂಡತಿಯೆಂದರೆ ವಿಚ್ಛೇದಿತ ಹೆಂಡತಿಯೂ ಆಗಿರಬಹುದು. ಆದರೆ ಅವಳು ಪುನರ್‌ವಿವಾಹ ಆಗಿರಬಾರದು. ಈ ಭತ್ಯೆಯನ್ನು ಅರ್ಜಿ ಸಲ್ಲಿಸಿದ ತಾರೀಖೀನಿಂದ ಅಥವಾ ಆದೇಶದ ತಾರೀಖೀನಿಂದ ಕೊಡುವಂತೆ ನಿರ್ದೇಶಿಸಬಹುದು. ಹೀಗೆ ಆದೇಶಿಸಲ್ಪಟ್ಟ ವ್ಯಕ್ತಿ, ಕಾರಣವಿಲ್ಲದೆ, ಆದೇಶದಂತೆ ನಡೆದುಕೊಳ್ಳದಿದ್ದರೆ, ಆಗ ದಂಡಾಧಿಕಾರಿಯವರು ಪ್ರತಿಯೊಂದು ಉಲ್ಲಂಘನೆಗೂ ಒಂದು ತಿಂಗಳಿಗೆ ಮೀರದಂತೆ ಅಥವಾ ಹಣ ಪಾವತಿ ಮಾಡುವವರೆಗೆ ಅವನನ್ನು ಜೈಲಿಗೆ ಕಳಿಸಬಹುದು. ಒಂದು ವೇಳೆ ಆ ವ್ಯಕ್ತಿ, ತನ್ನ ಹೆಂಡತಿಯನ್ನು ಜೊತೆಗಿಟ್ಟುಕೊಂಡು ಸಾಕಲು ಒಪ್ಪಿಕೊಳ್ಳುತ್ತಾನೆ ಎಂದಿಟ್ಟುಕೊಳ್ಳೋಣ. ಆದಾಗ್ಯೂ ಹೆಂಡತಿ ಅವನ ಸಂಗಡ ವಾಸಿಸಲು ನಿರಾಕರಿಸಿದರೆ, ದಂಡಾಧಿಕಾರಿಯವರು ಆಕೆಗೆ ಭತ್ಯೆಯನ್ನು ಕೊಡುವಂತೆ ಆದೇಶಿಸಬಹುದು.

ಪೋಷಣೆ ಎಂದರೆ ಸಮರ್ಪಕವಾದ ಆಹಾರ, ಬಟ್ಟೆ ಮತ್ತು ವಸತಿ, ಹೆಂಡತಿಯ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಹಣ ನೀಡುವ ಜವಾಬ್ದಾರಿ ವಹಿಸಿಕೊಳ್ಳುವುದು, ಮಗುವಿನ ಪೋಷಣೆ ಎಂದರೆ ಹೊಟ್ಟೆ, ಬಟ್ಟೆ ಮಾತ್ರವಲ್ಲ, ಮಗುವಿನ ವಿದ್ಯಾಭ್ಯಾಸಕ್ಕೂ ಹಣ ಕೊಡಬೇಕಾಗುತ್ತದೆ. ಗಂಡನ ನಿರ್ಲಕ್ಷ್ಯವೇ ಹೆಂಡಕಿಗೆ ಹಲವು ರೀತಿಯಲ್ಲಿ ಆನೆಬಲವನ್ನು ತಂದುಕೊಡುತ್ತದೆ. ಗಂಡನು ತನ್ನನ್ನು ಕ್ರೌರ್ಯದಿಂದ ನಡೆಸಿಕೊಂಡ ಎಂದು ಅವಳು ಸಾಧಿಸಬೇಕಾಗಿಲ್ಲ. ಹಾಗೆಯೇ, ಗಂಡನೊಡನೆ ಜೀವಿಸಲು ಭಯವಾಗುತ್ತದೆ, ಎಂಬ ಕಾರಣಕ್ಕಾಗಿ ನಾನು ಗಂಡನಿಂದ ಬೇರೆ ವಾಸ ಮಾಡಬೇಕು. ಆದ್ದರಿಂದ ಪೋಷಣೆಗೆ ಹಣ ಬೇಕೆಂದು ವಾದಿಸಲು ಆಗುವುದಿಲ್ಲ. ಆದರೆ, ಗಂಡನೊಂದಿಗೆ ಬಾಳಲು ಆಗದಷ್ಟರ ಮಟ್ಟಿಗೆ ಆತನಿಂದ ದೌರ್ಜನ್ಯವಾಗಿದೆ ಎಂದು ಹೇಳಬಹುದು. ಅಥವಾ ಜೊತೆಗೆ ಬಾಳಲಾಗದ ಮಟ್ಟಕ್ಕೆ ಮನಸ್ಸು ಕೆಟ್ಟುಹೋಗಿದೆ ಎಂದೂ ಹೇಳಬಹುದು.

ಎಸ್‌.ಆರ್‌. ಗೌತಮ್‌ (ಕೃಪೆ: ನವ ಕರ್ನಾಟಕ ಪ್ರಕಾಶನ)

Advertisement

Udayavani is now on Telegram. Click here to join our channel and stay updated with the latest news.

Next