Advertisement
ರಸ್ತೆ ಉದ್ದಕ್ಕೂ ಗುಂಡಿಗಳು: ಗೊಲ್ಲಗುರುವೇನಹಳ್ಳಿಯವರೆಗೂ ರಸ್ತೆಗೆ ಡಾಂಬರೀಕರಣಗೊಳಿಸಿದ್ದು, ಮೋತಕಪಲ್ಲಿ ಗ್ರಾಮಕ್ಕೆ ಹೋಗುವ ರಸ್ತೆ ತಿರುವಿನಿಂದ ತೋಗಲ್ ಕುಪ್ಪ ಗ್ರಾಮದವರೆಗೂ 5 ಕಿ.ಮೀ. ಇದೆ. ಇಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಾಂಬರೂ ಕಿತ್ತು ಹೋಗಿ ಜೆಲ್ಲಿಕಲ್ಲು, ಮಣ್ಣು ಮೇಲೆ ಬಂದಿವೆ. ಈ ಜೆಲ್ಲಿ ಕಲ್ಲುಗಳ ಮೇಲೆ ದ್ವಿಚಕ್ರ ವಾಹನಗಳು ಓಡಾಡಿದ್ರೆ ಆಯಾತಪ್ಪಿ ಬೀಳುವುದು ಗ್ಯಾರಂಟಿ. ಕೆಲವೊಮ್ಮೆವಾಹನದ ಚಕ್ರಗಳಿಂದ ಸಿಡಿದ ಕಲ್ಲು ಪಾದಚಾರಿಗಳಿಗೆ ತಲೆಗೆ ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಇದರಿಂದ ಜನ ರಸ್ತೆಯಲ್ಲಿ ವಾಹನಗಳು ಬಂದರೆ ಮಾರು ದೂರ ಓಡುತ್ತಾರೆ.
Related Articles
Advertisement
ಸಂಬಂಧಿಕರು ಬರಲ್ಲ: ಈ ಅಸಮರ್ಪಕ ರಸ್ತೆಗಳಲ್ಲಿ ಆಟೋಗಳು ಸಂಚರಿಸಲು ಹಿಂದೇಟು ಹಾಕುತ್ತವೆ. ಆದ್ದರಿಂದ ಈ ಭಾಗದ ಜನ ಸ್ವಂತ ವಾಹನ ಹೊಂದುವುದು ಅನಿವಾರ್ಯವಾಗಿದೆ. ಒಂದು ಕಡೆ ಬಸ್ ಸೌಲಭ್ಯದ ಕೊರತೆ, ಮತ್ತೂಂದು ಕಡೆ ಆಟೋಗಳ ಸಂಚಾರವೂ ಇಲ್ಲ. ಇದರಿಂದ ಪರ ಊರಿನವರು, ಸಂಬಂಧಿಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇನ್ನು ಆಂಧ್ರಗಡಿಗೆ ಹೊಂದಿಕೊಂಡಿರುವ ಸೀತಂಪಲ್ಲಿ-ಪಂತನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ತೀರಾ ಹದಗೆಟ್ಟಿದೆ. ಈ ಕೂಡಲೇ ಶಾಸಕರು, ಅಧಿಕಾರಿಗಳು ಗಡಿ ಗ್ರಾಮಗಳ ಅಭಿವೃದ್ಧಿಗೆ ಪಣತೋಡಬೇಕಿದೆ, ನಮಗೆ ಮೂಲ ಸೌಕರ್ಯ ಒದಗಿಸಲು ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂಬ ದೂರು ಗ್ರಾಮಸ್ಥರದ್ದಾಗಿದೆ.
ನಬಾರ್ಡ್ ನೆರವು: ಮೋತಕಲಪಲ್ಲು-ತೊಂಗಲ್ ಕುಪ್ಪ ಮತ್ತು ಸೀತಂಪಲ್ಲಿ-ಪಂತನಹಳ್ಳಿ ಗ್ರಾಮಗಳ ರಸ್ತೆಗಳು ಜಿಪಂ ವ್ಯಾಪ್ತಿಗೆ ಸಂಬಂಧಿಸಿದ್ದು, ದಶಕಗಳಿಂದ ಡಾಂಬರು ಹಾಕಿಲ್ಲ. ಗುಂಡಿಗಳು ಬಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ನಬಾರ್ಡ್ ಯೋಜನೆಯ ಮೂಲಕ ಲೊಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿ ಪಡಿಸಲು ಶಾಸಕಿ ಎಂ.ರೂಪಕಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಪ್ರಸ್ತಾವನೆ ಮೂಲೆ ಸೇರಿದ್ದು, ಈ ಕೂಡಲೇ ಶಾಸಕರು ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಿ ಕೂಡಲೇ ಟೆಂಡರ್ ಕರೆಯಬೇಕೆಂದು ಗಡಿ ಗ್ರಾಮಗಳ ಸಾರ್ವಜನಿಕರು ಒತ್ತಾಯಿಸಿದ್ದಾರೆ.
-ಆರ್.ಪುರುಷೋತ್ತಮರೆಡ್ಡಿ