ವಿಜಯಪುರ: ಮತ್ತೆ ಮಳೆಗಾಲ ಶುರುವಾಗಿದ್ದರಿಂದ ಉತ್ತರ ಕರ್ನಾಟಕ ಜನರ ಎದೆಯಲ್ಲಿ ನಡುಕ ಶುರುವಾಗಿದೆ. ಕೃಷ್ಣಾ ನದಿಯಲ್ಲಿ ಹೆಚ್ಚುತ್ತಿರುವ ಒಳ ಹರಿವು ಮತ್ತೂಮ್ಮೆ ಪ್ರವಾಹದ ಭೀತಿ ಸೃಷ್ಟಿಸಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ರಕ್ಷಣೆಗೆ ಧಾವಿಸುವ ಸಿಬ್ಬಂದಿ ಹಾಗೂ ಪ್ರಮುಖವಾಗಿ ಬೇಕಿರುವ ರಕ್ಷಣಾ ಪರಿಕರಗಳೇ ಇಲ್ಲ!. ಯಾವುದೇ ಪ್ರಕೃತಿ ವಿಕೋಪ ಸಂಭವಿಸಿದರೂ ತಕ್ಷಣ ನೆರವಿಗೆ ಧಾವಿಸುವುದು ಅಗ್ನಿಶಾಮಕ ಸಿಬ್ಬಂದಿ. ಜೀವದ ಹಂಗು ರಕ್ಷಣೆಗೆ ಮುನ್ನುಗ್ಗುವ ಈ ಸಿಬ್ಬಂದಿಗೆ ರಕ್ಷಣಾ ಪರಿಕರಗಳೇ ಇಲ್ಲ. ಕಳೆದ ಒಂದು ದಶಕದಿಂದ ಕೃಷ್ಣಾ ಹಾಗೂ ಅದರ ಉಪ ನದಿಗಳು 3-4 ಪ್ರಮುಖ ಪ್ರವಾಹ ಸೃಷ್ಟಿಸಿದ್ದರೂ ಸರ್ಕಾರ ಮಾತ್ರ ಇನ್ನೂ ಪಾಠ ಕಲಿತಿಲ್ಲ.
ಏನೇನು ಬೇಕು?: ರಕ್ಷಣಾ ಸಿಬ್ಬಂದಿ ತುರ್ತಾಗಿ ಸ್ಥಳಕ್ಕೆ ತೆರಳಲು ಔಟ್‌ಬೋಟ್ ಮೆಷಿನ್, 100, 500 ಮೀಟರ್ ಹಗ್ಗ, ಲೈಫ್ ಜಾಕೆಟ್, ಲೈಫ್‌ಬಾಯ್, ಉಡನ್ ಕಟರ್, ರೇನ್‌ಕೋಟ್, ಟಾರ್ಚ್ ಹೆಲ್ಮೆಟ್, ಹ್ಯಾಂಡ್‌ಗ್ಲೌಸ್, ಕೊಡಲಿ, ಪಿಕಾಸಿ, ಗ್ರಾಫನಲ್ (ಒಂಕಿ), ವಾಟರ್ ಸಬ್ ಮರ್ಸಿಬಲ್ (ಜಲಾಂತರ ಕ್ಯಾಮರಾ) ಸೇರಿದಂತೆ ಪ್ರಮುಖ ಕಿಟ್ ಬೇಕು. ಆದರೆ ಇಂಥ ಯಾವುದೇ ಪರಿಕರ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಲ್ಲವೇ ಇಲ್ಲ.
ಆದರೆ, ಉತ್ತರ ಕರ್ನಾಟಕದಲ್ಲಿ ಸತತ ಪ್ರವಾಹಕ್ಕೆ ತುತ್ತಾಗುವ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಇಂತಹ ಯಾವೊಂದು ಸಲಕರಣೆಗಳಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಒಂದು ಔಟ್ ಬೋಟ್ ಮೆಷಿನ್ ಇದ್ದರೂ ಅಧಿಕ ಬಾಧೆ ಇರುವ ಬೃಹತ್ ಜಿಲ್ಲೆಗೆ ಇನ್ನೂ ಹೆಚ್ಚಿನ ಪರಿಕರದ ಅಗತ್ಯವಿದೆ. ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲೂ ಅಗತ್ಯ ರಕ್ಷಣಾ ಪರಿಕರಗಳೇ ಇಲ್ಲ. ಹೀಗಾಗಿ ತುರ್ತು ಕರೆ ಸಂದರ್ಭದಲ್ಲಿ ಅಗಿಶಾಮಕ, ಇತರೆ ರಕ್ಷಣಾ ಇಲಾಖೆ ಸಿಬ್ಬಂದಿ ಇಲ್ಲಗಳ ಮಧ್ಯೆ ಪ್ರಕೃತಿ ವೈಪರೀತ್ಯ ಎದುರಿಸುವ ಸ್ಥಿತಿ ಇದೆ.
ಪ್ರವಾಹ ಪರಿಸ್ಥಿತಿ ಸೇರಿದಂತೆ ತುರ್ತು ಪರಿಸ್ಥಿತಿ ವೇಳೆ ಜೀವ ರಕ್ಷಣೆಗೆ ಯಾವುದೇ ಸಂದರ್ಭದಲ್ಲಿ ಕರೆ ಬಂದರೂ ನಮ್ಮ ಸಿಬ್ಬಂದಿ ತಕ್ಷಣ ಸಿದಟಛಿವಾಗಿರುತ್ತಾರೆ. ಈಚೆಗೆ ಪ್ರವಾಹ ಪರಿಸ್ಥಿತಿ ಹೆಚ್ಚುತ್ತಿರುವ ಕಾರಣ ಪ್ರವಾಹ ಪರಿಸ್ಥಿತಿ ಎದುರಿಸಲು ಅಗತ್ಯ ಇರುವ ರಕ್ಷಣಾ ಸಲಕರಣೆಗಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆ ಹಂತದಲ್ಲಿದೆ.
-ರಂಗನಾಥ, ಜಿಲ್ಲಾ ಮುಖ್ಯಸ್ಥರು, ಅಗ್ನಿಶಾಮಕ ದಳ, ವಿಜಯಪುರ
* ಜಿ.ಎಸ್.ಕಮತರ