Advertisement

ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಲ್ಲ; ಮುಚ್ಚುಗಡೆ ಭೀತಿ

10:53 PM Jul 13, 2019 | Team Udayavani |

ಬೆಳ್ತಂಗಡಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಆಶಾಕಿರಣದಂತಿದ್ದ ಬೆಳ್ತಂಗಡಿ ತಾ|ನ ಕೊಯ್ಯೂರು ಸರಕಾರಿ ಪ.ಪೂ.ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕನಿಷ್ಠ ದಾಖಲಾತಿಗಿಂತಲೂ ಕೆಳಗಿದ್ದು, ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ಗಳೇ ಇಲ್ಲ ಎಂಬ ಕಾರಣಕ್ಕೆ ಕಾಲೇಜು ಮುಚ್ಚಿದರೂ ಅಚ್ಚರಿ ಪಡಬೇಕಿಲ್ಲ.

Advertisement

ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿ ಗಳ ಸಂಖ್ಯೆ ಇಳಿಕೆಯಾಗುತ್ತಿದ್ದು ಉಪನ್ಯಾಸಕರ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗಗಳಿವೆ. ಕಾಲೇಜಿನ ಗರಿಷ್ಠ ಸಾಮರ್ಥ್ಯ 100 ಆಗಿದ್ದು, ಪ್ರಸ್ತುತ 47 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯಕ್ಕೆ ಕಾಲೇಜಿನಲ್ಲಿ ಇಬ್ಬರು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ.

ಅಂದರೆ ಒಟ್ಟು 47 ಮಂದಿ ವಿದ್ಯಾರ್ಥಿಗಳಲ್ಲಿ 36 ಮಂದಿ ದ್ವಿತೀಯ ಪಿಯುಸಿಯಲ್ಲಿದ್ದು, ಪ್ರಥಮ ಪಿಯುಸಿ ಯಲ್ಲಿರುವುದು 11 ಮಂದಿ ಮಾತ್ರ. ಇದು ಆತಂಕದ ವಿಚಾರವಾಗಿದ್ದು, ಮುಂದಿನ ವರ್ಷ ದ್ವಿತೀಯ ಪಿಯುಸಿಗೆ ಇರುವುದು 11 ಮಂದಿಯಾಗಿದ್ದು, ಪ್ರಥಮ ಪಿಯುಸಿಗೆ ಇದಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ದಾಖ ಲಾದರೆ ಕಾಲೇಜಿನ ಸ್ಥಿತಿಯೇನು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ವಿದ್ಯಾರ್ಥಿಗಳ ವಿವರ
ಕಾಲೇಜಿನಲ್ಲಿ ಕಳೆದ ವರ್ಷ 68 ವಿದ್ಯಾರ್ಥಿಗಳಿದ್ದು, ಪ್ರಥಮ ಪಿಯುಸಿ ಯಲ್ಲಿ 33 ಮಂದಿ, ದ್ವಿತೀಯ ಪಿಯುಸಿ ಯಲ್ಲಿ 35 ಮಂದಿ ವಿದ್ಯಾರ್ಥಿಗಳಿದ್ದರು. ಈ ವರ್ಷ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 47 ಮಂದಿಗೆ ಇಳಿದಿದ್ದು, ಪ್ರಥಮ ಪಿಯುಸಿ ಯಲ್ಲಿ 11 ಮಂದಿಯಿದ್ದು, ದ್ವಿತೀಯ ಪಿಯುಸಿಯಲ್ಲಿ 36 ಮಂದಿ ಇದ್ದಾರೆ.

ಈ ವರ್ಷ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ 5 ಮಂದಿ ಹಾಗೂ ವಾಣಿಜ್ಯ ವಿಭಾಗದಲ್ಲಿ 6 ಮಂದಿ ಮಾತ್ರ ಇದ್ದಾರೆ. ದ್ವಿತೀಯ ಪಿಯುಸಿಯಲ್ಲಿ 12 ಮಂದಿ ಕಲಾ ವಿಭಾಗ ಹಾಗೂ 23 ಮಂದಿ ವಾಣಿಜ್ಯ ವಿಭಾಗದಲ್ಲಿದ್ದಾರೆ. ಒಂದು ತರಗತಿಯಲ್ಲಿ ಕನಿಷ್ಠ 10 ಮಂದಿ ಇರಲೇಬೇಕಿದ್ದು, ಸದ್ಯ ಪರಿಸ್ಥಿತಿಯಲ್ಲಿ ಪ್ರಥಮ ಪಿಯುಸಿಯ ಎರಡು ವಿಭಾಗಗಳಲ್ಲಿ 5 ಮತ್ತು 6 ಮಂದಿ ಮಾತ್ರ ಇರುವುದು ಆತಂಕಕಾರಿ ವಿಚಾರವಾಗಿದೆ.

Advertisement

ಇಬ್ಬರೇ ಉಪನ್ಯಾಸಕರು!
ಕಾಲೇಜಿನಲ್ಲಿ ಒಟ್ಟು 4 ತರಗತಿಗಳಿದ್ದು, ಕಾಯಂ ಉಪನ್ಯಾಸಕರು ಕೇವಲ ಇಬ್ಬರು ಮಾತ್ರ ಇದ್ದಾರೆ. ಇಬ್ಬರಲ್ಲಿ ಒಬ್ಬರು ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯ, ಕನ್ನಡ ವಿಷಯಗಳಿಗೆ ಉಪನ್ಯಾಸಕರ ಕೊರತೆ ಇದೆ.

ಇಂಗ್ಲಿಷ್‌ ಹಾಗೂ ರಾಜ್ಯಶಾಸ್ತ್ರಕ್ಕೆ ಮಾತ್ರ ಉಪನ್ಯಾಸಕರಿದ್ದು, ಇವರಲ್ಲಿ ಕಳೆದ ವರ್ಷ ಒಬ್ಬರನ್ನು ಬೇರೆ ಕಾಲೇಜಿಗೆ ಕಳುಹಿಸಲಾಗಿತ್ತು. ಪ್ರಸ್ತುತ 5 ಮಂದಿ ಅತಿಥಿ ಉಪನ್ಯಾಸಕರಿದ್ದು, ಅವರ ಪರಿಸ್ಥಿತಿ ಅತಂತ್ರವಾಗಿದೆ. ವೇತನ‌ವಿಲ್ಲದೆ ಅವರು ಕೆಲಸ ಮಾಡಬೇಕೋ ಅಥವಾ ಬಿಡಬೇಕೋ ಎಂಬ ಪರಿಸ್ಥಿತಿ ಇದೆ.

2 ತಿಂಗಳಲ್ಲಿ ನಿಯೋಜನೆ ಸಾಧ್ಯತೆ
ದಾಖಲಾತಿ ಇಳಿಕೆಯಾಗಿದ್ದು, 2015ರ ಬಳಿಕ ಇಬ್ಬರು ಉಪನ್ಯಾಸಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಅತಿಥಿ ಉಪನ್ಯಾಸಕರು ಇರುತ್ತಾರೆ. ಮುಂದಿನ 2 ತಿಂಗಳಲ್ಲಿ ಉಪನ್ಯಾಸಕರು ನಿಯೋಜನೆಗೊಳ್ಳುವ ಸಾಧ್ಯತೆ ಇದ್ದು, ಉಪನ್ಯಾಸಕರಿದ್ದರೆ ವಿದ್ಯಾರ್ಥಿಗಳ ಸಂಖ್ಯೆಯೂ ಏರಿಕೆಯಾಗಬಹುದು.
– ಶಿಲ್ಪಾ ಡಿ., ಪ್ರಭಾರ ಪ್ರಾಂಶುಪಾಲರು, ಕೊಯ್ಯೂರು ಸ.ಪ.ಪೂ. ಕಾಲೇಜು.

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next