Advertisement
2024-25ನೇ ಸಾಲಿನಲ್ಲಿ ದ.ಕ.ದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 14 ಶಾಲೆಗಳಿಗೆ ಒಬ್ಬ ವಿದ್ಯಾರ್ಥಿಯೂ ಸೇರಿಲ್ಲ. ಹಾಗೆಂದು ಈ ಶಾಲೆಗಳು ಅಧಿಕೃತವಾಗಿ ಮುಚ್ಚಿಲ್ಲ.
ಸುಳ್ಯ ತಾಲೂಕಿನ 2, ಬಂಟ್ವಾಳ 2, ಬೆಳ್ತಂಗಡಿ 1, ಮಂಗಳೂರು ಉತ್ತರ 5, ಮೂಡಬಿದಿರೆ 1, ಮಂಗಳೂರು ದಕ್ಷಿಣದಲ್ಲಿ 3 ಶಾಲೆಗಳು ಶೂನ್ಯ ವಿದ್ಯಾರ್ಥಿಗಳ ಪಟ್ಟಿಯಲ್ಲಿವೆ. ಇವುಗಳ ಪೈಕಿ 2 ಸರಕಾರಿ, 6 ಅನುದಾನಿತ ಹಾಗೂ 6 ಖಾಸಗಿ ಶಾಲೆಗಳು. ಕಳೆದ ವರ್ಷಕ್ಕಿಂತ ಹೆಚ್ಚು!
2023-24ನೇ ಸಾಲಿನಲ್ಲಿ ದ.ಕ.ಜಿಲ್ಲೆಯಲ್ಲಿ ಶೂನ್ಯ ವಿದ್ಯಾರ್ಥಿಗಳಿದ್ದ ಶಾಲೆಗಳ ಸಂಖ್ಯೆ 13 ಆಗಿದ್ದು, ಈ ಬಾರಿ ಅದು14ಕ್ಕೆ ಏರಿಕೆ ಕಂಡಿದೆ. ಕಳೆದ ಬಾರಿ 3 ಸರಕಾರಿ ಶಾಲೆಗಳು ಈ ಪಟ್ಟಿಯಲ್ಲಿದ್ದರೆ, ಈ ಬಾರಿ ಅದು 2ಕ್ಕೆ ಇಳಿದಿದೆ. 2022-23ರಲ್ಲಿ 22 ಶಾಲೆಗಳು, 2021-22ರಲ್ಲಿ 10 ಶಾಲೆಗಳು ಶೂನ್ಯ ವಿದ್ಯಾರ್ಥಿ ಶಾಲೆಗಳ ಪಟ್ಟಿಯಲ್ಲಿ ಸೇರಿತ್ತು. ಎರಡು ವರ್ಷಗಳ ಹಿಂದೆ ಶೂನ್ಯ ಪಟ್ಟಿಯಲ್ಲಿದ್ದ ಶಾಲೆಗಳ ಪೈಕಿ ಕೆಲವು ಅನುದಾನಿತ ಶಾಲೆಗಳಲ್ಲಿ ಮತ್ತೆ ದಾಖಲಾತಿ ಪ್ರಾರಂಭಗೊಂಡು ತರಗತಿಗಳು ಪುನರಾರಂಭಗೊಂಡಿವೆ. ಹೆಚ್ಚಿನ ಶಾಲೆಗಳು ಮುಚ್ಚಿವೆ ಎನ್ನುತ್ತಿದೆ ಅಂಕಿಅಂಶ.
Related Articles
ದ.ಕ.ದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶೂನ್ಯ ವಿದ್ಯಾರ್ಥಿ ಪಟ್ಟಿಗೆ ಸೇರಿದ ಶಾಲೆಗಳ ಒಟ್ಟು ಸಂಖ್ಯೆ 59. ಇದರಲ್ಲಿ 11 ಸರಕಾರಿ, 31 ಅನುದಾನಿತ ಹಾಗೂ 17 ಅನುದಾನ ರಹಿತ ಶಾಲೆಗಳು. ಇಲ್ಲಿ ಬಹಳ ಮುಖ್ಯವಾದ ಸಂಗತಿ ಅಂದರೆ, ಕೆಲವು ವರ್ಷಗಳಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿಯೇ ಆಗಿಲ್ಲ. ಹಾಗಾಗಿ ಅತಿಥಿ ಶಿಕ್ಷಕರನ್ನು ನೇಮಿಸಿ ವೇತನ ಭರಿಸುವುದು, ಶಾಲೆ ನಡೆಸುವುದು ಆಡಳಿತ ಮಂಡಳಿಗೆ ಹೊರೆಯಾಗಿರುವುದು ಕೂಡ ಅನು ದಾನಿತ ಶಾಲೆಗಳು ಶೂನ್ಯ ವಿದ್ಯಾರ್ಥಿಗಳ ಪಟ್ಟಿಗೆ ಸೇರಲು ಕಾರಣ. ಇನ್ನೊಂದೆಡೆ ಶೂನ್ಯ ವಿದ್ಯಾರ್ಥಿ ಪಟ್ಟಿಗಳಲ್ಲಿ ಸರಕಾರಿ ಶಾಲೆಗಳ ಸಂಖ್ಯೆ ಕಡಿಮೆ ಆಗಿರುವುದು ಗಮನಾರ್ಹ ಸಂಗತಿ.
Advertisement
ಶೂನ್ಯ ಪಟ್ಟಿಯಲ್ಲಿ ಮಂಗಳೂರೇ ಹೆಚ್ಚು..!ಎರಡು ವರ್ಷಗಳಿಂದ ಪುತ್ತೂರು- ಕಡಬ ತಾಲೂಕಿನಲ್ಲಿ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಯಾವ ಶಾಲೆಯೂ ಶೂನ್ಯ ಪಟ್ಟಿಯಲ್ಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಮಂಗಳೂರು ಉತ್ತರ, ದಕ್ಷಿಣದಲ್ಲಿ ಶೂನ್ಯ ವಿದ್ಯಾರ್ಥಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾಲ್ಕು ವರ್ಷಗಳಲ್ಲಿ ಮಂಗಳೂರು ಉತ್ತರದಲ್ಲಿ 18, ಮಂಗಳೂರು ದಕ್ಷಿಣದಲ್ಲಿ 14 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ಹೊರತುಪಡಿಸಿ ಉಳಿದ ಎಲ್ಲ ತಾಲೂಕಿನ ಸರಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾರಣದಿಂದ ಮಕ್ಕಳ ದಾಖಲಾತಿ ಇಳಿಕೆ ಕಂಡಿರಬಹುದು. ಶೂನ್ಯ ವಿದ್ಯಾರ್ಥಿ ಪಟ್ಟಿಯಲ್ಲಿರುವ ಶಾಲೆಗಳಲ್ಲಿ ಭವಿಷ್ಯದಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಪೂರಕ ವಾತಾವರಣದ ಲಭ್ಯತೆ ಬಗ್ಗೆ ಶಿಕ್ಷಣ ಇಲಾಖೆ ಪರಿಶೀಲಿಸಲಿದೆ.
-ವೆಂಕಟೇಶ ಸುಬ್ರಾಯ ಪಟಗಾರ, ಡಿಡಿಪಿಐ, ದ.ಕ.ಜಿಲ್ಲೆ – ಕಿರಣ್ ಪ್ರಸಾದ್ ಕುಂಡಡ್ಕ