Advertisement

ಕರಾವಳಿಯಲ್ಲಿ ಅರಣ್ಯ ಕಾಯಲು ಸೈನಿಕರೇ ಇಲ್ಲ! 2.87ಲ.ಹೆ ಅರಣ್ಯಕ್ಕೆ ಪಾಲಕರು 197 ಮಂದಿ ಮಾತ್ರ!

11:44 PM Jun 20, 2023 | Team Udayavani |

ಮಂಗಳೂರು: ಅರಣ್ಯ ಇಲಾಖೆಯ ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ ಸರಿಸುಮಾರು 2.87 ಲಕ್ಷ ಹೆಕ್ಟೇರ್‌ ಅರಣ್ಯವಿದೆ. ಆದರೆ ಇಲ್ಲಿಗೆ ಗಸ್ತು ಅರಣ್ಯ ಪಾಲಕರು (ಅರಣ್ಯ ರಕ್ಷಕ) ಹಾಗೂ ಅರಣ್ಯ ವೀಕ್ಷಕರು ಇರುವುದು ಕೇವಲ 197 ಮಂದಿ ಮಾತ್ರ.

Advertisement

ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರು ಅರಣ್ಯ ಕಾಯುವ ನೈಜ ಸೈನಿಕರು. ಅರಣ್ಯದ ನಿಜವಾದ ಆಳ-ಅಗಲ, ಅಲ್ಲಿನ ಪೂರ್ಣ ಮಾಹಿತಿಯನ್ನು ಅವರು
ತಿಳಿದಿರುತ್ತಾರೆ. ಜತೆಗೆ ಅರಣ್ಯದ ಸೂಕ್ಷ್ಮ ಸಂಗತಿಗಳ ಬಗ್ಗೆ ನಿಗಾ ವಹಿಸುತ್ತಾರೆ. ಇಂತಹ ಮಹತ್ವದ ಹುದ್ದೆ 3 ವರ್ಷಗಳಿಂದ ಖಾಲಿ ಬಿದ್ದಿದೆ. ಹೀಗಾಗಿ ಅರಣ್ಯ ರಕ್ಷಣೆಯೇ ಈಗ ಬಹುದೊಡ್ಡ ಸವಾಲು.

ಮಂಗಳೂರು ಮತ್ತು ಕುಂದಾಪುರ ಅರಣ್ಯ ವಿಭಾಗ, ಕುದುರೆಮುಖ ವನ್ಯಜೀವಿ ವಿಭಾಗ ಸಹಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ಸಾಮಾಜಿಕ ಅರಣ್ಯೀಕರಣ ವಿಭಾಗ ಒಳಗೊಂಡ ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ 426 ಗಸ್ತು ಅರಣ್ಯ ಪಾಲಕರ ಅಗತ್ಯವಿದೆ. ಆದರೆ ಈಗ ಇರುವುದು ಕೇವಲ 191 ಮಂದಿ ಮಾತ್ರ. ಬರೋಬ್ಬರಿ 235 ಹುದ್ದೆ ಖಾಲಿ ಇವೆ. ಇನ್ನು ಅರಣ್ಯ ವೀಕ್ಷಕರು 146 ಮಂದಿ ಬೇಕು. ಆದರೆ ಕೇವಲ 6 ಮಂದಿ ಕರ್ತವ್ಯದಲ್ಲಿದ್ದು 140 ಹುದ್ದೆಗಳಿಗೆ ನೇಮಕಾತಿಯೇ ಆಗಿಲ್ಲ.

“ಸಾಮಾನ್ಯವಾಗಿ 2-3 ಗ್ರಾಮಗಳನ್ನು ಸೇರಿಸಿ ಕೊಂಡು ಅರಣ್ಯ ಇಲಾಖೆಯಲ್ಲಿ ಒಂದೊಂದು “ಬೀಟ್‌ ಬೌಂಡರಿ’ ಇರುತ್ತದೆ. ಈ ವ್ಯಾಪ್ತಿಯಲ್ಲಿ ಅರಣ್ಯಕ್ಕೆ ಸಂಬಂಧಿಸಿದ ರಕ್ಷಣೆ ಗಸ್ತು ಅರಣ್ಯ ಪಾಲಕರದ್ದು. ಅವರಿಗೆ ಅರಣ್ಯ ವೀಕ್ಷಕರ ನೆರವು ಇರುತ್ತದೆ. ಅರಣ್ಯ ಇಲಾಖೆಯಲ್ಲಿ ನಡೆಸುವ ತಳಮಟ್ಟದ ಕಾರ್ಯವೇ ಬೀಟ್‌ ಮಟ್ಟದಲ್ಲಿ ನಡೆಯುತ್ತದೆ. 2-3 ಗ್ರಾಮಗಳು ಸೇರಿ ಒಂದು ಬೀಟ್‌ ಹಾಗೂ 2-3 ಬೀಟ್‌ ಸೇರಿ ಒಂದು ಸೆಕ್ಷನ್‌ (ಡೆಪ್ಯುಟಿ ಆರ್‌ಎಫ್‌ಒ), 2-3 ಸೆಕ್ಷನ್‌ಗಳು ಸೇರಿ ಒಂದು ರೇಂಜ್‌ (ರೇಂಜ್‌ ಆಫೀಸರ್‌) ಆಗುತ್ತದೆ. ಈ ಪೈಕಿ ಬೀಟ್‌ ವ್ಯಾಪ್ತಿಯ ಸಿಬಂದಿ ಕಾರ್ಯ ಮಹತ್ವದ್ದಾಗಿರುತ್ತದೆ. ಆದರೆ ಆ ಹುದ್ದೆಗಳದ್ದೇ ಕೊರತೆ ಎದುರಾಗಿದೆ’ ಎನ್ನುತ್ತಾರೆ ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ದಿನೇಶ್‌ ಕುಮಾರ್‌ ವೈ.ಕೆ.

ಒಂದು ಬೀಟ್‌ಗೆ ಒಬ್ಬ ಗಸ್ತು ಅರಣ್ಯ ಪಾಲಕ ಇದ್ದರೆ ಅಲ್ಲಿನ ಬಗ್ಗೆ ಹೆಚ್ಚು ನಿಗಾ ವಹಿಸುವುದು ಸುಲಭ. ಆದರೆ ಈಗ 4-5 ಬೀಟ್‌ಗೆ ಒಬ್ಬನೇ ಗಸ್ತು ಅರಣ್ಯ ಪಾಲಕ ಕರ್ತವ್ಯದಲ್ಲಿದ್ದಾನೆ. ಅವರಿಗೆ ಕಾರ್ಯದ ಒತ್ತಡ ಅಧಿಕವಾಗಿದೆ. ಅಂದಹಾಗೆ ಗಸ್ತು ಅರಣ್ಯ ಪಾಲಕ ಹಾಗೂ ವೀಕ್ಷಕ ಎರಡೂ ಪೂರ್ಣಾವಧಿ ಹುದ್ದೆ. ಅರಣ್ಯ ವೀಕ್ಷಕರಾಗಿದ್ದವರು ಕಿನಂತರ ಗಸ್ತು ಅರಣ್ಯ ಪಾಲಕ, ಡೆಪ್ಯುಟಿ ಆರ್‌ಎಫ್‌ಒ, ರೇಂಜರ್‌ ಆಗಲೂ ಅವಕಾಶವಿದೆ. ಜತೆಗೆ ಉಪ ವಲಯ ಅರಣ್ಯಾಧಿಕಾರಿಗಳು ಸಹ ಅಗತ್ಯದಷ್ಟು ಇಲ್ಲ. 231 ಹುದ್ದೆಗಳ ಪೈಕಿ 63 ಹುದ್ದೆಗಳು ಖಾಲಿ ಇವೆ.

Advertisement

ಅರಣ್ಯ ಇಲಾಖೆಯ ವಿವಿಧ ಹುದ್ದೆಗಳು ಖಾಲಿ ಇವೆ. ಅದರಲ್ಲಿಯೂ ಮುಖ್ಯವಾಗಿ ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರ ನೇಮಕಾತಿ ನಡೆಯಬೇಕಿದೆ. ಈ ಬಗ್ಗೆ ಸರಕಾರದ ಗಮನಸೆಳೆಯಲಾಗಿದೆ. ಸರಕಾರವೇ ಈ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
– ಡಾ| ಕರಿಕಾಳನ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೃತ್ತ

ಹುದ್ದೆಯಲ್ಲಿ ಇರುವವರಿಗಿಂತ ಖಾಲಿಯೇ ಅಧಿಕ!
ಮಂಗಳೂರು ವೃತ್ತ ವ್ಯಾಪ್ತಿಯಲ್ಲಿ ಒಟ್ಟು 995 ಅಧಿಕಾರಿ/ಸಿಬಂದಿ ಮಂಜೂರಾತಿ ಹುದ್ದೆಯಿದೆ. ಇದರಲ್ಲಿ 488 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 507 ಹುದ್ದೆಗಳು ಖಾಲಿಯೇ ಇವೆ. ಕಳೆದ 3 ವರ್ಷದಿಂದ ಹೊಸ ನೇಮಕಾತಿ ಇಲ್ಲಿ ನಡೆದಿಲ್ಲ. ಹಿಂದೆ ಅರಣ್ಯ ಇಲಾಖೆಗಳ ನೇಮಕಾತಿ ನಿಯಮಿತವಾಗಿ ನಡೆಯುತ್ತಿತ್ತು. ಆದರೆ ಈಗ ಸೂಕ್ತ ಕಾಲದಲ್ಲಿ ನೇಮಕಾತಿ ಆಗದೆ ಅರಣ್ಯದ ಬಗ್ಗೆ ನಿಗಾ ವಹಿಸುವವರ ಸಂಖ್ಯೆ ಕಡಿಮೆಯಾಗಿದೆ. ಪರಿಣಾಮವಾಗಿ ಅಕ್ರಮ ಚಟುವಟಿಕೆ, ಕಾಳಿYಚ್ಚು ಸಹಿತ ವಿವಿಧ ಘಟನೆಗಳು ವರದಿಯಾಗುತ್ತಲೇ ಇವೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next